ಒಕ್ಕಲಿಗ ಸಮುದಾಯ ಒಂದಾಗಿ ಹೆಜ್ಜೆ ಇಡಬೇಕು
ಬೆಂಗಳೂರು : ಒಕ್ಕಲಿಗರಲ್ಲಿ ಸಹಜ ನಾಯಕತ್ವದ ಗುಣ ಇದೆ. ರಕ್ತಗತವಾಗಿ ಬಂದಿರುವ ಈ ಗುಣದಿಂದ ಎಲ್ಲಾ ಸಮುದಾಯಗಳನ್ನು ಒಟ್ಟು ಸೇರಿಸಿಕೊಂಡು ಮುನ್ನಡೆಸುವ ಶಕ್ತಿ ಸಾಮರ್ಥ್ಯ ಒಕ್ಕಲಿಗರಲ್ಲಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ ಹೇಳಿದ್ದಾರೆ.
ಬೆಂಗಳೂರಿನ ಅದಿಚುಂಚನಗಿರಿ ಒಕ್ಕಲಿಗ ಸಭಾಭವನದಲ್ಲಿ ನಡೆದ ಉತ್ತರ ಕನ್ನಡ ಜಿಲ್ಲಾ ಒಕ್ಕಲಿಗ ಸಂಘದ ವಿಶೇಷ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಮುದಾಯದ ಎಲ್ಲಾ ಒಕ್ಕಲಿಗರನ್ನು ಮುಖ್ಯವಾಹಿನಿಯಲ್ಲಿ ತೆಗೆದುಕೊಂಡು ಹೋಗುವ ಕಾರ್ಯವನ್ನು ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷರಾದ ಶ್ರೀ ನಿರ್ಮಲಾನಂದ ಸ್ವಾಮೀಜಿಗಳು ಮಾಡುತ್ತಿದ್ದಾರೆ. *ಒಕ್ಕಲಿಗರು ಹೆಚ್ಚಾಗಿರುವ ಕಡೆ ನಾನಾ ಕಾರಣಗಳಿಂದ ಒಗ್ಗಟ್ಟಿನ ಕೊರತೆ ಸಾಮಾನ್ಯವಾಗಿದೆ*. ಆದರೆ ಎಲ್ಲರನ್ನೂ ಒಗ್ಗೂಡಿಸುವ ಕಾರ್ಯವನ್ನು ಶ್ರೀಗಳು ಮಾಡುತ್ತಿದ್ದಾರೆ ಎಂದು ಹೇಳಿದರು.
ಶ್ರೀ ಬಾಲ ಗಂಗಾಧರನಾಥ ಸ್ವಾಮೀಜಿಗಳ ದೂರ ದೃಷ್ಟಿಯಿಂದ ಬೆಳೆದ ಈ ಮಠ ಒಕ್ಕಲಿಗ ಸಮುದಾಯಗಳಿಗೆ ಪ್ರೇರಣಾ ಶಕ್ತಿ. ಬೇರೆ ಬೇರೆ ಕಡೆ ನಾನಾ ರೀತಿಯಲ್ಲಿ ಕರೆಸಿಕೊಳ್ಳುವ ಒಕ್ಕಲಿಗರು ಎಲ್ಲರೂ ಒಂದೇ. ಅವರೆಲ್ಲರನ್ನೂ ಮುಖ್ಯ ವಾಹಿನಿಯಲ್ಲಿ ಸೇರಿಸಿಕೊಳ್ಳುವ ಪ್ರಯತ್ನವನ್ನು ಸ್ವಾಮೀಜಿಗಳು ಮಾಡುತ್ತಿದ್ದಾರೆ. ಎಲ್ಲಾ ಒಕ್ಕಲಿಗರು ಒಂದೇ ಎಂದು ಸರ್ಕಾರ ಕೂಡ ಪರಿಗಣಿಸಿದೆ ಎಂದು ತಿಳಿಸಿದರು.
ಬೆಂಗಳೂರಿನಲ್ಲಿ 9 ರಿಂದ 10 ಸಾವಿರ ಉತ್ತರಕನ್ನಡ ಜಿಲ್ಲೆಯ ಒಕ್ಕಲಿಗರು ಉದ್ಯೋಗ ಮಾಡಿಕೊಂಡು ವಾಸ ಮಾಡುತ್ತಿದ್ದಾರೆ. ಉತ್ತರ ಕನ್ನಡ ಜಿಲ್ಲೆಯಲ್ಲಿ 4 ಲಕ್ಷ ಒಕ್ಕಲಿಗರಿದ್ದಾರೆ. ಈ ಸಂಖ್ಯೆ ಬಹು ದೊಡ್ಡದು. ನಾಡ ಪ್ರಭು ಕೆಂಪೇಗೌಡರು ಆಡಳಿತ ಮಾಡಿದ ಪ್ರಾಂತ್ಯಗಳಲ್ಲಿ , ಎಲ್ಲಾ ಸಮುದಾಯಗಳ 54 ಪೇಟೆ ನಿರ್ಮಾಣ ಮಾಡಿದರು. 530 ವರ್ಷಗಳ ಹಿಂದೆಯಿಂದಲೂ ಸಮುದಾಯದ ನಾಯಕರು ಎಲ್ಲರನ್ನು ಒಟ್ಟಿಗೆ ಕರೆದುಕೊಂಡು ಹೋಗುವ ಸಾಮರ್ಥ್ಯ ತೋರಿಸಿದ್ದರು. ಸಾಮಾಜಿಕ ನ್ಯಾಯ, ಸಮಾನತೆ, ಹೃದಯವಂತಿಕೆ ಒಕ್ಕಲಿಗಲ್ಲಿದೆ ಎಂದರು.
ಆದಿಚುಂಚನಗಿರಿ ಮಠದಲ್ಲಿ ಎಲ್ಲಾ ಸಮುದಾಯದ ಮಕ್ಕಳಿಗೆ ಉಚಿತ ದಾಸೋಹ ನಡೆಯುತ್ತಿದೆ. ಶಿಕ್ಷಣ ದಾಸೋಹ, ಅನ್ನ, ಆರೋಗ್ಯ ಮತ್ತು ಆದ್ಯಾತ್ಮಿಕ ದಾಸೋಹಗಳು ನಡೆಯುತ್ತಿವೆ. ಗುರುಗಳು ಎಲ್ಲಾ ಕಾರ್ಯದಲ್ಲೂನಮ್ಮ ಬೆನ್ನ ಹಿಂದಿದ್ದಾರೆ. ಸರ್ಕಾರ ಕೂಡ ನಮ್ಮ ಬೆನ್ನ ಹಿಂದಿದೆ. ಬೆಂಗಳೂರಿನಲ್ಲಿ ಉತ್ತರ ಕರ್ನಾಟಕದ ಒಕ್ಕಲಿಗರಿಗೆ ಒಂದು ನಿವೇಶನ ಕೊಡುವ ಬಗ್ಗೆ ಮುಖ್ಯಮಂತ್ರಿಗಳ ಜೊತೆ ಚರ್ಚೆ ಮಾಡುತ್ತೇನೆ ಎಂದು ಭರವಸೆ ನೀಡಿದರು.
ನಿರ್ಮಲಾನಂದ ಶ್ರಿಗಳಿಗೆ ಒಕ್ಕಲಿಗರ ಅಭಿವೃದ್ಧಿ ಬಗ್ಗೆ ಸ್ಪಷ್ಟ ದೃಷ್ಟಿ ಇದೆ. ಎಲ್ಲಾಒಕ್ಕಲಿಗರ ವಿಚಾರಧಾರೆ ಒಂದೇ ಆಗಿರಬೇಕು. ಅನೇಕ ವರ್ಗಗಳಿಗೆ ಪ್ರಾತಿನಿಧ್ಯ ಕೊಡುವ ಕೆಲಸ ಆಗಬೇಕು. ರಾಜ್ಯದಲ್ಲಿ ಪ್ರಬಲ ಸಮುದಾಯವಾಗಿರುವ ಒಕ್ಕಲಿಗರ ಮಕ್ಕಳು ಉನ್ನತ ಶಿಕ್ಷಣ ಪಡೆಯಬೇಕು ಎಂದು ಹೇಳಿದರು.
