ಒಡೆಯರ್‍ಗೆ ಮೋಸ ಮಾಡಿಲ್ವೆ, ಗಂಟೆ ಹೊಡೆಯಲಿ

 ದಾವಣಗೆರೆ

        1996ರಲ್ಲಿ ಕಾಂಗ್ರೆಸ್‍ನಿಂದ ಲೋಕಸಭೆಗೆ ಸ್ಪರ್ಧಿಸಿದ್ದ ಕುರುಬ ಸಮಾಜದ ಗುರುಗಳು ಚನ್ನಯ್ಯ ಒಡೆಯರ್ ಅವರಿಗೆ ಎಸ್.ಎಸ್.ಮಲ್ಲಿಕಾರ್ಜುನ ಮೋಸ ಮಾಡಿಲ್ಲ ಎಂದಾದರೆ, ದುಗ್ಗಮ್ಮನ ದೇವಸ್ಥಾನಕ್ಕೆ ಬಂದು ಗಂಟೆ ಹೊಡೆಯಲಿ ಎಂದು ಜಿಲ್ಲಾ ಬಿಜೆಪಿ ಅಧ್ಯಕ್ಷ ಯಶವಂತರಾವ್ ಜಾಧವ್ ನೇರ ಸವಾಲು ಹಾಕಿದ್ದಾರೆ.

        ಈ ಕುರಿತು ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನೆನ್ನೆ ಮಾಜಿ ಸಚಿವ ಮಲ್ಲಿಕಾರ್ಜುನ್ ನಾನು ಹುಟ್ಟುತ್ತಲೇ ಕಾಂಗ್ರೆಸ್ಸಿಗ, ನನ್ನ ಮೈಯಲ್ಲಿ ಹರಿಯುತ್ತಿರುವುದು ಕಾಂಗ್ರೆಸ್ ರಕ್ತ ಎಂದಿದ್ದಾರೆ. ಹಾಗಿದ್ದರೆ, 1996ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‍ನಿಂದ ಸ್ಪರ್ಧಿಸಿದ್ದ ಚನ್ನಯ್ಯ ಒಡೆಯರ್ ಅವರಿಗೆ ಮೋಸ ಮಾಡಿ, ನಮ್ಮ ಮನೆಯಲ್ಲಿಯೇ ಎಂ.ಪಿ. ಇರಬೇಕೆಂಬ ಕಾರಣಕ್ಕೆ ಜಿ.ಮಲ್ಲಿಕಾರ್ಜುನಪ್ಪರವರನ್ನು ಬೆಂಬಲಿಸಿದ್ದರಲ್ಲಾ, ಆಗ ನಿಮ್ಮ ಮೈಯಲ್ಲಿ ಯಾವ ರಕ್ತ ಹರಿತಿತ್ತು ಎಂದು ಖಾರವಾಗಿ ಪ್ರಶ್ನಿಸಿದರು.

        ಒಂದು ವೇಳೆ ಎಸ್.ಎಸ್.ಮಲ್ಲಿಕಾರ್ಜುನ್ ಅಂದಿನ ಚುನಾವಣೆಯಲ್ಲಿ ಚನ್ನಯ್ಯ ಒಡೆಯರ್ ಅವರಿಗೆ ಮೋಸ ಮಾಡಿಲ್ಲ ಎಂಬುದಾಗಿ ಹೇಳುವುದಾದರೆ, ದೇವಸ್ಥಾನಕ್ಕೆ ಬಂದು ಗಂಟೆ ಹೊಡೆಯಲಿ, ನಾನು ಅವರು ಮೋಸ ಮಾಡಿದಾರೆಂದು ಬಂದು ಗಂಟೆ ಹೊಡೆಯುತ್ತೇನೆ ಎಂದರು.

       ನೀವು ಚನ್ನಯ್ಯ ಒಡೆಯರ್ ಅವರನ್ನು ರಾಜಕೀಯವಾಗಿ ಜೀವಂತ ಸಮಾಧಿ ಮಾಡಿದ್ದ ಕಾರಣಕ್ಕೆ ಅವರ ಶಾಪದಿಂದ ಲೋಕಸಭೆ ಚುನಾವಣೆಯಲ್ಲಿ ಗೆಲ್ಲಲಾಗಿಲ್ಲ, ಮುಂದೆಯೂ ಗೆಲ್ಲುವುದಿಲ್ಲ ಎಂದು ಮಲ್ಲಿಕಾರ್ಜುನ್ ವಿರುದ್ಧ ವಾಗ್ದಾಳಿ ನಡೆಸಿದರು.ಅಭಿವೃದ್ಧಿಯ ವಿಚಾರವನ್ನು ಮುಂದಿಟ್ಟು ಕೊಂಡು ಮಲ್ಲಿಕಾರ್ಜುನ್ ವೈಯಕ್ತಿಕ ತೆಜೋವಧೆ ಮಾಡಿದ್ದಾರೆ. ಹೀಗೆ ಸಣ್ಣತನದಿಂದ ಮಾತನಾಡಲು ನಾನು ಇಷ್ಟ ಪಡುವುದಿಲ್ಲ. ವ್ಯಕ್ತಿಯ ನಾಲಿಗೆಯು ಆತನ ವ್ಯಕ್ತಿತ್ವ ತೋರಿಸುತ್ತೆ ಎಂದ ಅವರು, ಅಭಿವೃದ್ಧಿಯ ವಿಚಾರದಲ್ಲಿ ಅವರು ಹಾಕಿರುವ ಸವಾಲು ನಾನು ಸ್ವೀಕರಿಸುತ್ತೇನೆ. ಆದರೆ, ನಾನು ಈ ಹಿಂದೆ ಗಾಂಜಿ ವೀರಪ್ಪರ ಸಮಾಧಿ ಒತ್ತುವರಿ ಮಾಡಿರುವ ಬಗ್ಗೆ ಹಾಕಿರುವ ಸವಾಲು ಸ್ವೀಕರಿಸಿ, ನನ್ನ ಪ್ರಶ್ನೆಗಳಿಗೆ ಮಲ್ಲಿಕಾರ್ಜುನ್ ಉತ್ತರಿಸಿದರೇ, ನಾನು ಅವರ ಪ್ರಶ್ನೆಗಳಿಗೂ ಉತ್ತರಿಸುತ್ತೇನೆ ಎಂದು ಪಂಥಾಹ್ವಾನ ನೀಡಿದರು.

          ಶಾಮನೂರು ಕುಟುಂಬದವರು ಲಕ್ಷ್ಮೀ ಫ್ಲೋರ್ ಮಿಲ್ ಜಾಗದಲ್ಲಿ ಸಾರ್ವಜನಿಕ ಆಸ್ತಿ ಕಬಳಿಸಿ ಸ್ವಂತಕ್ಕೆ ಮಾಲ್ ನಿರ್ಮಾಣ ಮಾಡಿಕೊಂಡಿದೆಯೋ, ಇಲ್ಲವೋ? ಹಾಗೆ ಕಬಳಿಸಿರುವ ಜಾಗದಲ್ಲಿ ಹಿರಿಯ ಮುತ್ಸದ್ಧಿ ರಾಜಕಾರಣಿ ಗಾಂಜಿ ವೀರಪ್ಪನವರ ಸಮಾಧಿ ಇತ್ತೋ, ಇಲ್ಲವೋ? 1998ರಲ್ಲಿ ಕೆಇಬಿಯಿಂದ ಕರೆಂಟ್ ಕದ್ದ ಕೇಸ್ ನಿಮ್ಮ ಮೇಲೆ ಇತ್ತೋ, ಇಲ್ಲವೋ? ನೀವಿಂದು ಐಷಾರಾಮಿ ಜೀವನ ನಡೆಸಲು ಕಾರಣವಾಗಿರುವ ಬಾಪೂಜಿ ವಿದ್ಯಾಸಂಸ್ಥೆಯನ್ನು ಹುಟ್ಟುಹಾಕಿದ ಕುಟುಂಬಗಳನ್ನು ನೀವು ಯಾವ ರೀತಿ ನಡೆಸಿಕೊಂಡಿರಿ? ಇದೆಲ್ಲವೂ ಸಾರ್ವಜನಿಕರಿಗೆ ಗೊತ್ತಾಗುವಂತೆ ಬಹಿರಂಗ ಚರ್ಚೆಗೆ ಸಿದ್ಧರಿದ್ದೇವೆ. ಆನಂತರ ಜಿಲ್ಲೆಯ ಅಭಿವೃದ್ಧಿಯಲ್ಲಿ ಯಾರ ಕೊಡುಗೆ ಎಷ್ಟು? ಎಂಬುದನ್ನೂ ಚರ್ಚೆ ಮಾಡೋಣ ಎಂದು ಅವರು ಪಂಥಾಹ್ವಾನ ನೀಡಿದರು.

         ಸಿದ್ದೇಶ್ವರ್ ಅವರ ಆಸ್ತಿ ಎಷ್ಟಿತ್ತು ಘೋಷಿಸಬೇಕೆಂದು ಮಲ್ಲಿಕಾರ್ಜುನ್ ಕೇಳಿದ್ದಾರೆ. ಆದರೆ, ಇವರೆಲ್ಲರೂ 1985ರಿಂದ 1995ರ ವರೆಗೆ ಯಾರ ಹತ್ತಿರ ಹೋಗಿ ಸಾಲ ತರ್ತಿದ್ರು, ಎಂಬುದನ್ನು ನೆನಪು ಮಾಡಿಕೊಳ್ಳಬೇಕು. ಅದೇ ಸಿದ್ದೇಶ್ವರ್ ಅವರ ತಂದೆ ಜಿ.ಮಲ್ಲಿಕಾರ್ಜುನಪ್ಪನವರ ಹತ್ತಿರ ಹೋಗಿ ಸಾಲ ತರ್ತಿದ್ದನ್ನು ಮರೆತು ಬಿಟ್ಟಿರಾ ಎಂದು ಪ್ರಶ್ನಿಸಿದರು.

         ಜಿಲ್ಲಾ ಕೇಂದ್ರದಲ್ಲಿ ನಾಲ್ಕೈದು ಕಾಂಕ್ರೀಟ್ ರಸ್ತೆ ಮಾಡಿದಾಕ್ಷಣ ಅಭಿವೃದ್ಧಿಯಾಗುವುದಿಲ್ಲ. ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಸಂದರ್ಭದಲ್ಲಿ ಜಿಲ್ಲೆಯ ಗಡಿಭಾಗದ ಗ್ರಾಮಗಳಿಗೆ ಎಸ್.ಎಸ್.ಮಲ್ಲಿಕಾರ್ಜುನ್ ಏನು ಮಾಡಿದ್ದಾರೆ? ಯಾರೂ ಮನೆಯಿಂದ ಹಣ ತಂದು ಕೆಲಸ ಮಾಡುವುದಿಲ್ಲ. ಸರ್ಕಾರದ ಅನುದಾನದಲ್ಲಿ ಅಭಿವೃದ್ಧಿ ಕಾರ್ಯಗಳಾಗುತ್ತವೆ. ಆದರೆ ಅದರಲ್ಲೂ ಶಾಮನೂರು ಕುಟುಂಬದವರು ವೈಯಕ್ತಿಕ ಲಾಭ ಮಾಡಿಕೊಂಡಿದ್ದಾರೆ.

          ಕೋಟ್ಯಂತರ ರೂಪಾಯಿ ಬಿಲ್ ಮಾಡಿಸಿಕೊಂಡು, ಟಿವಿ ಸ್ಟೇಷನ್ ಕೆರೆಯ ಹೂಳೆತ್ತಿದ ಮಣ್ಣನ್ನು ತಮ್ಮ ಬಿಐಇಟಿ ಕಾಲೇಜಿನ ಜಾಗ ಸಮತಟ್ಟು ಮಾಡಲು ಬಳಸಿಕೊಂಡಿದ್ದಾರೆ. ತಮ್ಮ ಮೆಡಿಕಲ್ ಕಾಲೇಜುಗಳಿಗೆ ದುಬಾರಿ ಡೊನೇಷನ್ ಕೊಡುವ ವಿದೇಶಿ ಮಿಕಗಳನ್ನು ಸೆಳೆಯಲು ಹಳೇ ಪಿ.ಬಿ. ರಸ್ತೆಯ ಅಗಲೀಕರಣ ಮಾಡಿಸಿ, ದೊಡ್ಡ ದೀಪಗಳನ್ನು ಹಾಕಿದ್ದಾರೆ. ಇತ್ತೀಚೆಗಷ್ಟೇ ಜೆಜೆಎಂ ಮೆಡಿಕಲ್ ಕಾಲೇಜು ವಿದ್ಯಾರ್ಥಿಗಳಿಂದ ಲಕ್ಷಗಟ್ಟಲೇ ಹೆಚ್ಚುವರಿ ಹಣ ವಸೂಲು ಮಾಡಿ, ಹೈಕೋರ್ಟ್ ಛೀಮಾರಿ ನಂತರ ವಿದ್ಯಾರ್ಥಿಗಳಿಗೆ ಹಣ ಹಿಂದುರುಗಿಸಿದ್ದಾರೆ ಎಂದು ಅವರು ಆಪಾದಿಸಿದರು.

         ಹೊರಜಿಲ್ಲೆಯ ಜಿ.ಎಂ.ಸಿದ್ದೇಶ್ವರ್ ಸ್ಪರ್ಧೆ ಬಗ್ಗೆ ಮಾತನಾಡುವ ಮಲ್ಲಿಕಾರ್ಜುನ್, ಬಳ್ಳಾರಿಯಿಂದ ಸ್ಪರ್ಧಿಸಿದ್ದ ಸೋನಿಯಾ ಗಾಂಧಿ ಎಲ್ಲಿಯವರು? ಎಂಬುದನ್ನು ಹೇಳಬೇಕು. ಸತತವಾಗಿ ನಾಲ್ಕು ಚುನಾವಣೆಯಲ್ಲಿ ಸೋಲು ಕಂಡರೂ ಸಹ ದಾವಣಗೆರೆ ಉತ್ತರ ಮತ್ತು ದಕ್ಷಿಣ ವಿಧಾನಸಭಾ ಕ್ಷೇತ್ರಗಳಿಗೆ ಅಪ್ಪ-ಮಕ್ಕಳೇ ಅಭ್ಯರ್ಥಿಗಳಾಗಬೇಕಾ? ಈಗ ಲೋಕಸಭಾ ಚುನಾವಣೆಯಲ್ಲೂ ನೀವೇ ಕ್ಯಾಂಡಿಡೇಟ್. ಹಾಗಾದರೆ ಕಾಂಗ್ರೆಸ್ ಪಕ್ಷದಲ್ಲಿ ಬೇರೆ ಯಾರೂ ಗಂಡಸರಿಲ್ಲವೇ? ಎಂದು ಕುಟುಕಿದರು.

         ಕಳೆದ 3 ಲೋಕಸಭಾ ಚುನಾವಣೆ, ಒಂದು ವಿಧಾನಸಭಾ ಚುನಾವಣೆಯ ಸೋಲಿನಿಂದಾಗಿ ಮಲ್ಲಿಕಾರ್ಜುನ್ ಮಾನಸಿಕ ಸ್ಥಿಮಿತ ಕಳೆದುಕೊಂಡು ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ. ಅವರಲ್ಲಿನ ದರ್ಪ, ಅಹಂಕಾರ, ಸಂಸ್ಕøತಿಯೇ ಅವರನ್ನು ಪಾತಾಳಕ್ಕೆ ನೂಕುತ್ತಿದೆ. ಈ ಬಾರಿಯ ಚುನಾವಣೆಯಲ್ಲಿ ಯಾರನ್ನೂ ವೈಯಕ್ತಿಕವಾಗಿ ನಿಂದಿಸದೆ, ಶಾಂತಿಯುತವಾಗಿ ಪ್ರಚಾರ ಕೈಗೊಳ್ಳಬೇಕೆಂಬ ಉದ್ದೇಶ ಹೊಂದಿದ್ದೆವು.

          ಆದರೆ ಅದಕ್ಕೂ ಮುನ್ನವೇ ಮಲ್ಲಿಕಾರ್ಜುನ್ ನಮ್ಮನ್ನು ಕೆಣಕಿದ್ದಾರೆ. ಸತ್ಯ, ನ್ಯಾಯ, ನಿಷ್ಠೆ, ಪ್ರಾಮಾಣಿಕತೆಯಲ್ಲಿ ಶಾಮನೂರು ಕುಟುಂಬಕ್ಕಿಂತಲೂ ಒಂದು ಪಾಲು ಮುಂದಿರುವ ನಮ್ಮನ್ನು ಕೆಣಕಿದರೆ, ಶತೃಗೆ ಹೆದುರಿ ಬೆನ್ನು ತೋರಿಸಿ, ಸುಮ್ಮನಿರುವ ಜಾಯಮಾನ ನಮ್ಮದಲ್ಲ ಎಂದು ಗುಟುರು ಹಾಕಿದರು.

          ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿಗಳಾದ ಹೆಚ್.ಎನ್.ಶಿವಕುಮಾರ್, ಬಿ.ರಮೇಶ್ ನಾಯ್ಕ, ಎನ್.ರಾಜಶೇಖರ್, ದಕ್ಷಿಣ ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ್, ಉತ್ತರ ಕ್ಷೇತ್ರದ ಅಧ್ಯಕ್ಷ ಮುಕುಂದಪ್ಪ, ವಕ್ತಾರ ಕೊಂಡಜ್ಜಿ ಜಯಪ್ರಕಾಶ್, ಮುಖಂಡರಾದ ಎಲ್.ಡಿ.ಗೋಣೆಪ್ಪ, ನಾಗರಾಜ್ ಲೋಕಿಕೆರೆ, ಗುರುನಾಥ್, ಪಿ.ಸಿ.ಶ್ರೀನಿವಾಸ್, ಧನುಷ್‍ರೆಡ್ಡಿ, ಅಣಜಿ ಗುಡ್ಡೇಶ್ ಮತ್ತಿತರರು ಹಾಜರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap