ಬೆಳಗಾವಿ:
“ಒಲಿಂಪಿಕ್ಸ್‍ನಲ್ಲಿ ದೇಶಕ್ಕಾಗಿ ಪದಕ ಗಳಿಸುವುದು ನನ್ನ ಗುರಿಯಾಗಿದೆ. ಅಲ್ಲಿ ಪದಕ ಗೆದ್ದೇ ಗೆಲ್ಲುತ್ತೇನೆ” ಎಂದು 18 ನೇ ಏಷಿಯನ್ ಗೇಮ್ಸ್ ನ ಕುರಾಶ್ ಕ್ರೀಡೆಯಲ್ಲಿ ಕಂಚಿನ ಪದಕ ಪಡೆದಿರುವ ಮಲಪ್ರಭಾ ಜಾಧವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.ಜಕಾರ್ತಾದಲ್ಲಿ ನಡೆದಿರುವ ಏಷಿಯನ್ ಗೇಮ್ಸ್ ನಲ್ಲಿ ಪದಕ ಗಳಿಸಿದ ಬಳಿಕ ಸ್ವಂತ ಜಿಲ್ಲೆ ಬೆಳಗಾವಿಗೆ ಇಂದು ಆಗಮಿಸಿದ ಮಲಪ್ರಭಾ, ಬೆಳಗಾವಿ ನಗರದ ಪ್ರವಾಸಿಮಂದಿರದಲ್ಲಿ ಜಿಲ್ಲಾಡಳಿತ ಹಾಗೂ ಕ್ರೀಡಾ ಇಲಾಖೆಯ ವತಿಯಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದರು.ಕುರಾಶ್ ಜುಡೋ ಮಾದರಿಯ ಕ್ರೀಡೆ ಆಗಿದ್ದು, ಈ ಆಟದಲ್ಲಿ ಭಾಗವಹಿಸಿ ದೇಶಕ್ಕೆ ಕಂಚಿನ ಪದಕ ಗೆದ್ದಿರುವುದಕ್ಕೆ ತುಂಬಾ ಖುಷಿಯಾಗಿದೆ.
ಜುಡೋ ಅಕಾಡೆಮಿ ಅಗತ್ಯ:
ಬೆಳಗಾವಿಯಲ್ಲಿ ಜುಡೋ ಹಾಗೂ ಕುರಾಶ್ ಕ್ರೀಡೆಯಲ್ಲಿ ಸಾಧನೆ ಮಾಡುವಂತಹ ಅನೇಕ ಕ್ರೀಡಾಪಟುಗಳಿದ್ದಾರೆ. ಅವರಿಗೆ ಪ್ರೋತ್ಸಾಹ ನೀಡಲು ಜುಡೋ ಅಕಾಡೆಮಿ ಸ್ಥಾಪನೆಯ ಅಗತ್ಯವಿದೆ. ಈ ನಿಟ್ಟಿನಲ್ಲಿ ಎಲ್ಲರೂ ಸಹಕರಿಸಬೇಕು ಎಂದು ಮಲಪ್ರಭಾ ಜಾಧವ ಮನವಿ ಮಾಡಿಕೊಂಡರು.
ಬೆಳಗಾವಿ ಜಿಲ್ಲೆ ಅದರಲ್ಲೂ ನನ್ನೂರಿನ ಹಿರಿಯರಿಂದ ಸನ್ಮಾನ ಸ್ವೀಕರಿಸುತ್ತಿರುವುದಕ್ಕೆ ಬಹಳ ಸಂತಸವಾಗಿದೆ.
ಇದರ ಶ್ರೇಯ ನನ್ನ ತರಬೇತುದಾರರಾದ ಜಿತೇಂದ್ರಸಿಂಗ್ ಹಾಗೂ ತ್ರಿವೇಣಿ ಅವರಿಗೆ ಮತ್ತು ನನ್ನ ತಂದೆ-ತಾಯಿಗೆ ಸಲ್ಲುತ್ತದೆ ಎಂದರು.
*ಹತ್ತು ಸಾವಿರ ಬಹುಮಾನ:*
ಮಲಪ್ರಭಾ ಜಾಧವ ಅವರನ್ನು ಸನ್ಮಾನಿಸಿ ಮಾತನಾಡಿದ ಬೆಳಗಾವಿ ನಗರ ಪೊಲೀಸ್ ಆಯುಕ್ತ ಡಾ.ಡಿ.ಸಿ.ರಾಜಪ್ಪ, ಈಕೆಯ ಸಾಧನೆಯು ಜಿಲ್ಲೆಗೆ ಹೆಮ್ಮೆಯ ವಿಷಯವಾಗಿದೆ ಎಂದು ಹೇಳಿದರು.ಪದಕ ವಿಜೇತೆ ಮಲಪ್ರಭಾಗೆ ಬೆಳಗಾವಿ ಪೊಲೀಸ್ ಕಮೀಷನರೇಟ್ ವತಿಯಿಂದ ಹತ್ತು ಸಾವಿರ ರೂಪಾಯಿ ಬಹುಮಾನವನ್ನು ಅವರು ಪ್ರಕಟಿಸಿದರು.ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಧೀರಕುಮಾರ್ ರೆಡ್ಡಿ, ಡಿಸಿಪಿ ಸೀಮಾ ಲಾಟ್ಕರ್, ಅಪರ ಜಿಲ್ಲಾಧಿಕಾರಿ ಡಾ.ಬೂದೆಪ್ಪ ಹೆಚ್.ಬಿ. ಅವರು ಮಲಪ್ರಭಾ ಜಾಧವಗೆ ಸನ್ಮಾನಿಸಿ, ಅಭಿನಂದನೆ ಸಲ್ಲಿಸಿದರು.
ಇದೇ ವೇಳೆ ಮಾತನಾಡಿದ ತರಬೇತುದಾರ ಜಿತೇಂದ್ರಸಿಂಗ್, ಬೆಳಗಾವಿಯಲ್ಲಿ ಜುಡೋ ಹಾಗೂ ಕುರಾಶ್ ಕ್ರೀಡೆ ಬೆಳವಣಿಗೆಗೆ ಸಾಕಷ್ಟು ಅವಕಾಶಗಳಿವೆ. ಸೂಕ್ತ ಸೌಲಭ್ಯ ಒದಗಿಸಿದರೆ ಮಲಪ್ರಭಾ ಮತ್ತಿತರರು ಒಲಿಂಪಿಕ್ಸ್‍ನಲ್ಲಿ ಪದಕ ಗೆಲ್ಲಬಲ್ಲರು ಎಂದು ಹೇಳಿದರು.
ಇದಕ್ಕೂ ಮುಂಚೆ ಪ್ರವಾಸಿಮಂದಿರಕ್ಕೆ ಭೇಟಿ ನೀಡಿದ್ದ ವಿಧಾನಪರಿಷತ್ ಸದಸ್ಯ ವಿವೇಕರಾವ್ ಪಾಟೀಲ ಅವರು ಕೂಡ ಮಲಪ್ರಭಾ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿ, ಅಭಿನಂದನೆ ಸಲ್ಲಿಸಿದರು.
ವಿವಿಧ ಸಂಘ-ಸಂಸ್ಥೆಗಳು, ಕ್ರೀಡಾ ಶಾಲೆಯ ಕ್ರೀಡಾಪಟುಗಳು, ತುರುಮುರಿ ಗ್ರಾಮದ ಹಿರಿಯರು ಸೇರಿದಂತೆ ನೂರಾರು ಜನರು ಮಲಪ್ರಭಾ ಜಾಧವಗೆ ಅಭಿನಂದನೆ ಸಲ್ಲಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ