ದಾವಣಗೆರೆ:
ಮೊಬೈಲ್‍ನಿಂದಾಗುವ ಅನುಕೂಲ ಹಾಗೂ ಅನಾನುಕೂಲವನ್ನು ಅರಿತು ಮೊಬೈಲ್ ಬಳಕೆ ಮಾಡಿದರೆ ಒಳ್ಳೆಯದು ಎಂದು ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ.ದಾದಾಪೀರ್ ನವಿಲೇಹಾಳ್ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ನಗರದ ಸುಶೀಲಮ್ಮ ಬಂಕಾಪುರದ ಚನ್ನಬಸಪ್ಪ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ಗುರುವಾರ ಏರ್ಪಡಿಸಿದ್ದ ಕಾಲೇಜಿನ ವಿದ್ಯಾರ್ಥಿ ಸಂಘ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಬದಲಾಗುತ್ತಿರುವ ತಂತ್ರಜ್ಞಾನಗಳಿಂದಾಗಿ ಜಗತ್ತು ಸಾಕಷ್ಟು ಬದಲಾಗಿದೆ. ಅದರಿಂದ ಇಂದು ಎಲ್ಲರ ಕೈಯಲ್ಲಿ ಮೊಬೈಲ್‍ಗಳು ಬಂದಿವೆ. ಆದರೆ, ಇಂದಿನ ವಿದ್ಯಾರ್ಥಿಗಳು ಈ ಮೊಬೈಲ್‍ಗಳ ದಾಸರಾಗಿರುವುದು ಒಳ್ಳೆಯದಲ್ಲ ಎಂದರು.
ಮೊಬೈಲ್ ಬಳಸಲು ನನ್ನ ತಕರಾರಿಲ್ಲ. ಆದರೆ, ವಿದ್ಯಾರ್ಥಿಗಳು ಸಂಪೂರ್ಣವಾಗಿ ಅದರಲ್ಲಿಯೇ ಮುಳುಗಿ ಹೋಗಬಾರದು. ಎಷ್ಟಬೇಕಷ್ಟು ಬಳಕೆ ಮಾಡಿದರೆ ಒಳ್ಳೆಯದು. ಅದರಲ್ಲೂ ಮೊಬೈಲ್ ಬಳಿಕೆಯಿಂದಾಗುವ ಪರಿಣಾಮ ಮತ್ತು ದುಷ್ಪರಿಣಾಮಗಳನ್ನು ಅರಿತು ಬಳಸುವುದು ಇನ್ನೂ ಒಳೆಯದು ಎಂದು ಕಿವಿಮಾತು ಹೇಳಿದರು.
ಇಂದು ಮನುಷ್ಯನ ದುರಾಸೆಯಿಂದ ಪರಿಸರ ನಾಶವಾಗಿ ಹೋಗಿದೆ. ಹೀಗಾಗಿ ಪರಿಸರವನ್ನು ಉಳಿಸಿ ಬೆಳೆಸಿ, ಮುಂದಿನ ಪೀಳಿಗೆಗೆ ಕೊಡುಗೆಯನ್ನಾಗಿ ನೀಡಬೇಕಾದ ಜವಾಬ್ದಾರಿ ವಿದ್ಯಾರ್ಥಿಗಳ ಮೇಲಿದೆ. ಆದ್ದರಿಂದ ಪರಿಸರ ಸಂರಕ್ಷಣೆಗೆ ಮುಂದಾಗಬೇಕೆಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಉದ್ಯಮಿ ಅಥಣಿ ವೀರಣ್ಣ, ಪೆÇ್ರ.ಕೆ.ಜಯಣ್ಣ, ಜವಳಿ ವರ್ತಕ ಬಿ.ಸಿ.ಉಮಾಪತಿ, ಕೆ.ಎಂ.ಹೊಳಿಯಪ್ಪ, ಪ್ರಾಂಶುಪಾಲ ಡಾ.ಕೆ.ಷಣ್ಮುಖ ಮತ್ತಿತರರು ಉಪಸ್ಥಿತರಿದ್ದರು. ಕು.ಸ್ವಾತಿ ಸಂಗಡಿಗರು ಪ್ರಾರ್ಥಿಸಿದರು. ಶೀಲಾ ಸ್ವಾಗತಿಸಿದರು. ಶಿಲ್ಪ ನಿರೂಪಿಸಿದರು. ರೇಖಾ ಸಿ.ವಿ ವಂದಿಸಿದರು.
