ತುಮಕೂರು:
ಓಝೋನ್ ಪದರವಿಲ್ಲದ ಭೂಮಿ ಛಾವಣಿ ಇಲ್ಲದ ಮನೆ ಇದ್ದಂತೆ, ಆದರೂ ಅಭಿವೃದ್ಧಿ ಹೆಸರಿನ ನಾಗಾಲೋಟದಲ್ಲಿ ಮತ್ತು ಮಾನವನ ಚಟುವಟಿಕೆಗಳು ಅತಿ ಹೆಚ್ಚಿನ ಪ್ರಮಾಣದಲ್ಲಿ ಕ್ಲೋರೂಫ್ಲೋರೊಕಾರ್ಬನ್ಗಳನ್ನು ಪರಿಸರಕ್ಕೆ ಬಿಡುಗಡೆಯಾಗುತ್ತಿವೆ. ಇದರಿಂದಾಗಿ ಭೂಮಿಯ ರಕ್ಷಾ ಕವಚದಂತಿರುವ ಓಝೋನ್ ಪದರ ದಿನದಿಂದ ದಿನಕ್ಕೆ ಕ್ಷೀಣಿಸುತ್ತಿದೆ. ಇದರ ಪರಿಣಾಮವನ್ನು ಆಮ್ಲ ಮಳೆ, ಹಸಿರು ಮನೆ ಪರಿಣಾಮ, ಭೂ ತಾಪಮಾನಗಳ ಏರುಪೇರುಗಳಿಂದಾಗಿ ಸಂಭವಿಸುತ್ತಿರುವ ನೈಸರ್ಗಿಕ ವಿಕೋಪಗಳ ಪರಿಣಾಮಗಳನ್ನು ನಾವೀಗಾಗಲೇ ಅನುಭವಿಸುವಂತಾಗಿದೆ ಎಂದು ವಿಜ್ಞಾನ ಬಿಂದು ಚಿಲ್ಡ್ರನ್ಸ್ ಕ್ಲಬ್ನ ನಿರ್ದೇಶಕಿ ಮತ್ತು ಅಂಕಿತಾ ಶಾಲೆಯ ವಿದ್ಯಾರ್ಥಿನಿ ಡಿ ಕೆ ಸೋನಿಕಾ ಅಭಿಪ್ರಾಯಪಟ್ಟರು.
ಅವರು ವಿಜ್ಞಾನ ಬಿಂದು ಚಿಲ್ಡ್ರನ್ಸ್ ಕ್ಲಬ್ ಮತ್ತು ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ಘಟಕ, ನಗರದ ಉಪ್ಪಾರಹಳ್ಳಿಯ ವಿಜ್ಞಾನ ಬಿಂದು ಕಚೇರಿಯಲ್ಲಿ ವಿಶ್ವ ಓಝೋನ್ ದಿನಾಚರಣೆ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ ಓಝೋನ್ ಪದರ ಸಂರಕ್ಷಣೆ ಕುರಿತು ಉಪನ್ಯಾಸ ನೀಡಿದರು. ಭೂಗ್ರಹದ ಜೀವಿ ವ್ಯವಸ್ಥೆಯಲ್ಲಿ ಓಝೋನ್ ಪದರದ ಅವಶ್ಯಕತೆ ಅತ್ಯಂತ ಹೆಚ್ಚಿನ ರೀತಿಯಲ್ಲಿದೆ. ಪರಿಸರಕ್ಕೆ ಹಾನಿಕಾರಕವಾದ ಚಟುವಟಿಕೆಗಳ ಬಗ್ಗೆ ಜಾಗೃತರಾಗಿ ನಾವೆಲ್ಲಾ ಪರಿಸರ ಸ್ನೇಹಿ ಜೀವನ ಕ್ರಮಗಳನ್ನು ಅಳವಡಿಸಿಕೊಳ್ಳುವ ಮೂಲಕ ಓಝೋನ್ ಪದರ ರಕ್ಷಣೆಗೆ ಮುಂದಾಗಬೇಕು ಮತ್ತು ಪರಿಸರ ಸಂರಕ್ಷಣೆಯಲ್ಲಿ ತೊಡಗಿಕೊಳ್ಳಬೇಕು ಎಂದು ತಿಳಿಸಿದರು.
ವಿಜ್ಞಾನ ಬಿಂದು ಚಿಲ್ಡ್ರನ್ಸ್ ಕ್ಲಬ್ನ ಕಾರ್ಯಕ್ರಮ ಆಯೋಜನಾ ಸಮಿತಿ ಚೇರ್ಮನ್ ಮತ್ತು ಬಿಷಪ್ ಸಾರ್ಜೆಂಟ್ ಶಾಲೆಯ ವಿದ್ಯಾರ್ಥಿನಿ ಎಸ್ ಸಂಜನಾ ಓಝೋನ್ ಪದರದ ರಸಾಯನಿಕ ವಿಷಯಗಳು, ಪ್ರಾಮುಖ್ಯತೆ ಮತ್ತು ಓಝೋನ್ ಪದರ ಕ್ಷೀಣಿಸಲು ಪ್ರಮುಖ ಕಾರಣಗಳು ಮತ್ತು ಪರಿಣಾಮಗಳು ಕುರಿತು ಉಪನ್ಯಾಸವನ್ನು ನೀಡಿದರು. ಕಾರ್ಯಕ್ರಮದ ಪ್ರಾರಂಭದಲ್ಲಿ ಕೇಂದ್ರೀಯ ವಿದ್ಯಾಲಯದ ಹರ್ಷಿತಾ ಎಲ್ ರಾವತ್ ಓಝೋನ್ ಪದರ ಮತ್ತು ವಿಶ್ವ ಓಝೋನ್ ದಿನಾಚರಣೆ ಕುರಿತು ಪರಿಚಯ ಭಾಷಣ ಮಾಡಿದರು.
ವಿಜ್ಞಾನ ಬಿಂದು ಸಂಸ್ಥೆಯ ಚಿಲ್ಡ್ರನ್ಸ್ ಕ್ಲಬ್ನ ನರೇಂದ್ರ ದತ್ತ ಕಾರ್ಯಕ್ರಮ ನಿರೂಪಣೆ ಮಾಡಿದರು. ಅಭಿಷೇಕ್ ಸ್ವಾಗತ ಮಾಡಿದರು. ವಾರುಣಿ ವಂದನಾರ್ಪಣೆ ಮಾಡಿದರು. ಚಿಲ್ಡ್ರನ್ಸ್ ಕ್ಲಬ್ ಅಧ್ಯಕ್ಷೆ ಚಿನ್ಮಯಿ ಸ್ವಾಮಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸೇಂಟ್ ಮೇರಿಸ್ ಶಾಲೆ, ಮಾರುತಿ ವಿದ್ಯಾ ಕೇಂದ್ರ, ಚೇತನ ವಿದ್ಯಾ ಮಂದಿರ, ವಿದ್ಯಾ ಶಾಲೆ, ಚೈತನ್ಯ ಟೆಕ್ನೋ, ವಿದ್ಯಾನಿಕೇತನ, ಕೇಂದ್ರೀಯ ವಿದ್ಯಾಲಯ, ಡ್ಯಾಫೋಡಿಲ್ಸ್, ಅಂಕಿತಾ ಮತ್ತು ಇನ್ನಿತರ ಶಾಲೆಗಳ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿ ಪರಿಸರ ಜಾಗೃತಿ ಕಾರ್ಯಕ್ರಮದ ಪ್ರಯೋಜನವನ್ನು ಪಡೆದರು.