ಚಳ್ಳಕೆರೆ
ತಾಲ್ಲೂಕಿನಾದ್ಯಂತ ಸುಮಾರು 80 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಮೇ ಮತ್ತು ಜೂನ್ ತಿಂಗಳ ಮಾಹೆಯಲ್ಲಿ ರೈತರು ಶೇಂಗಾ ಬಿತ್ತನೆ ಮಾಡಿದ್ದು, ಕಳೆದ ವಾರ ಬಿದ್ದ ಅಲ್ಪ ಮಳೆಯಿಂದಾಗಿ ಶೇಂಗಾ ಬೆಳೆ ಚೇತರಿಕೆಯಾಗಿದ್ದು, ರೈತರಲ್ಲಿ ಹೊಸ ಆತ್ಮವಿಶ್ವಾಸ ಮೂಡಿತ್ತು. ಆದರೆ, ಶೇಂಗಾ ಬೆಳೆಯಲ್ಲಿ ದಿಢೀರ್ ಕಾಣಿಸಿಕೊಂಡ ಕೆಂಪು ತಲೆ ಕಂಬಳಿ ಹುಳು ರೈತರನ್ನು ಆತಂಕಕ್ಕೆ ಈಡು ಮಾಡಿದೆ ಎಂದು ಸಹಾಯಕ ಕೃಷಿ ನಿರ್ದೇಶಕ ಮಾರುತಿ ತಿಳಿಸಿದ್ದಾರೆ.
ಅವರು, ಭಾನುವಾರ ಪತ್ರಿಕೆಗೆ ಮಾಹಿತಿ ನೀಡಿ, ತಾಲ್ಲೂಕಿನ ಪರಶುರಾಮಪುರ ಹೋಬಳಿಯ ದೊಡ್ಡ ಭಾದಿಹಳ್ಳಿ, ತಳಕು ಹೋಬಳಿಯ ದೊಡ್ಡ ಉಳ್ಳಾರ್ತಿ, ಚಿಕ್ಕ ಉಳ್ಳಾರ್ತಿ ಗ್ರಾಮಗಳ ವ್ಯಾಪ್ತಿಯಲ್ಲಿ ರೈತರ ಶೇಂಗಾ ಬೆಳೆಯಲ್ಲಿ ಇತ್ತೀಚಿಗಷ್ಟೇ ಕೆಂಪು ತಲೆ ಕಂಬಳಿ ಹುಳು(ಕರಿಜಿಗಿ) ಕಾಣಿಸಿಕೊಂಡಿದ್ದು, ಅವು ಶೇಂಗಾ ಬೆಳೆಯ ಎಲೆ, ಹೂ ಮತ್ತು ಎಳೆ ಕುಡಿಯನ್ನು ತಿಂದು ಹಾಕುವುದರಿಂದ ಗಿಡಗಳು ಬತ್ತಿ ಬಾಡಿ ಹೋಗುತ್ತವೆ. ಯಾವುದೇ ಕಾರಣಕ್ಕೂ ಶೇಂಗಾ ಬೆಳೆ ರೈತರ ಕೈಗೆ ಸಿಗದೆ ಹೆಚ್ಚು ನಷ್ಟ ಅನುಭವಿಸುವ ಸಾಧ್ಯತೆ ಹೆಚ್ಚಿರುತ್ತದೆ. ಈ ಹಿನ್ನೆಲೆಯಲ್ಲಿ ಸಂಬಂಧಪಟ್ಟ ಕೃಷಿ ಅಧಿಕಾರಿಗಳು ಈಗಾಗಲೇ ಕೆಂಪು ತಲೆ ಕಂಬಳಿ ಹುಳು ಕಾಣಿಸಿಕೊಂಡ ರೈತರ ಜಮೀನಿಗೆ ಭೇಟಿ ನೀಡಿ ಅವುಗಳ ನಿಯಂತ್ರಣಕ್ಕೆ ಅವಶ್ಯವಿರುವ ಸಂಪೂರ್ಣ ಮಾಹಿತಿಯನ್ನು ನೀಡಿದ್ದಾರೆ. ರೈತರು ಸಹ ತಮ್ಮ ಶೇಂಗಾ ಬೆಳೆಯಲ್ಲಿ ಕೆಂಪು ತಲೆ ಕಂಬಳಿ ಹುಳು ಕಂಡು ಬಂದಲ್ಲಿ ಕೂಡಲೇ ಇಲಾಖೆಯನ್ನು ಸಂಪರ್ಕಿಸುವಲ್ಲಿ ಅವರು ಮನವಿ ಮಾಡಿದ್ಧಾರೆ.








