ಚನ್ನಗಿರಿ:
ಸಾವಿರ ಇಂಗ್ಲೀಷ್ ಮಾಧ್ಯಮ ಶಾಲೆಗಳನ್ನು ಆರಂಭಿಸುವ ಮುಖ್ಯಮಂತ್ರಿಗಳ ನಿರ್ಧಾರವು ಕನ್ನಡದ ಶವ ಪೆಟ್ಟಿಗೆಗೆ ಮೊಳೆ ಹೊಡೆದಂತಾಗಿದೆ ಎಂದು ಸಾಹಿತಿ ಕುಂ.ವೀರಭದ್ರಪ್ಪ ಅಸಮಾಧಾನ ವ್ಯಕ್ತಪಡಿಸಿದರು.
ತಾಲೂಕಿನ ಪಾಂಡೋಮಟ್ಟಿ ಗ್ರಾಮದಲ್ಲಿ ಶನಿವಾರ ನಡೆದ 16ನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಮುಖ್ಯಮಂತ್ರಿ ಕುಮಾರಸ್ವಾಮಿ ಆಂಗ್ಲಮಾಧ್ಯಮದ 1 ಸಾವಿರ ಶಾಲೆಗಳನ್ನು ತೆರೆಯಲು ನಿರ್ಧರಿಸಿರುವುದಕ್ಕೆ ನನ್ನ ಪ್ರಭಲ ವಿರೋಧವಿದೆ. ಸರ್ಕಾರಗಳೇ ಆಂಗ್ಲ ಶಾಲೆಗಳನ್ನು ಪ್ರಾರಂಭಿಸಲು ಹೊರಟ್ಟಿರುವುದನ್ನು ನೋಡಿದರೆ, ಕನ್ನಡದ ಶವ ಪೆಟ್ಟಿಗೆಗೆ ಮೊಳೆ ಹೊಡೆದಂತಾಗಿದೆ ಎಂದು ಕಿಡಿಕಾರಿದರು.
ಹೆಚ್.ಡಿ. ರೇವಣ್ಣ ಅಮಾವಾಸ್ಯೆಗೆ ನಿಂಬೆಹಣ್ಣು ಕತ್ತರಿಸಲು ಕೇರಳ, ತಮಿಳುನಾಡಿನಿಂದ ಜೋತಿಷಿಗಳನ್ನು ಕರೆಸಿದರೆ. ಕನ್ನಡ ಜೋತಿಷಿಗಳು ಎಲ್ಲಿಹೋಗಬೇಕು. ಕನ್ನಡ ಜೋತಿಷಿಗಳನ್ನು ಕನ್ನಡಿಗರೇ ದೂರ ಮಾಡಿದರೆ ಹೇಗೆ? ಎಂದು ಪ್ರಶ್ನಿಸಿದ ಅವರು, ರಾಜಕಾರಣಿಗಳು ಮೊದಲು ಪ್ರಾದೇಶಿಕ ಭಾಷೆಗೆ ಆದ್ಯತೆ ನೀಡಬೇಕೆಂದು ಸಲಹೆ ನೀಡಿದರು.
ಕನ್ನಡಕ್ಕೆ ಅನ್ನಕೊಡುವ ಶಕ್ತಿಯಿದೆ, ಯಾರಾದರೂ ಕನ್ನಡಕ್ಕೆ ಅನ್ನಕೊಡುವ ಶಕ್ತಿಯಿಲ್ಲ ಎಂದರೆ ಅಂತಹವರ ಮೇಲೆ ಕೆಸ್‍ದಾಖಲು ಮಾಡುತ್ತೇನೆ, ಇಂದು ಸಾಪ್ಟವೇರ್ ಕಂಪನಿಗಳು ಕೆಲಸ ನಿರ್ವಹಿಸುತ್ತಿರುವ ಉದ್ಯೋಗಿಗಳಲ್ಲಿ ಶೇ.25 ರಷ್ಟು ಕನ್ನಡಿಗರು ಇಲ್ಲ. ಆದರೆ, ಸರ್ಕಾರಗಳು ಸಾಫ್ಟವೇರ್ ಕಂಪನಿಗಳ ನಿರ್ಮಾಣಕ್ಕೆ ಅತ್ಯಂತ ಕಡಿಮೆ ಬೆಲೆಯಲ್ಲಿ ಕನ್ನಡಿಗರ ಜಾಗವನ್ನು ಕರ್ನಾಟಕದ ಜಾಗ ಅಗ್ಗದಲ್ಲಿ ನೀಡುತ್ತಿರುವುದು ಅತ್ಯಂತ ವಿಪರ್ಯಾಸವಾಗಿದೆ ಎಂದರು.
ಕನ್ನಡ ಸಾಹಿತ್ಯ ಸಮ್ಮೇಳನಗಳು ಬರೀ ಮಾತುಗಳ ಭರಾಟೆಯಾಗಬಾರದು, ಸಮಸ್ಯೆಗಳಿಗೆ ಜೀವಂತ ಮುಕ್ತಿಯನ್ನು ನೀಡುವ ಒಂದು ಶಕ್ತಿಯಾಗಿ ಹೊರಹೊಮ್ಮಬೇಕು, ಚನ್ನಗಿರಿ ತಾಲೂಕಿನಲ್ಲಿ ದೋಂಡಿಯವಾಘ, ಶಹಾಜಿ, ಕೆಳದಿ ಚೆನ್ನಮ್ಮರಂತಹ ಮಾಹನ್ ಇತಿಹಾಸಕಾರರು ನೆಲೆಸಿರುವ ಬೀಡಾಗಿದೆ. ಇಲ್ಲಿ ಸಾಕಷ್ಟು ಇತಿಹಾಸಕಾರರು ಕುರುಹುಗಳನ್ನು ಬಿಟ್ಟುಹೋಗಿದ್ದಾರೆ ಇಂತಹ ನೆಲದಲ್ಲಿ ಕನ್ನಡ ಸಾಹಿತ್ಯವು ದೊಡ್ಡ ಶಕ್ತಿಯಾಗಿ ಹೊರಹೊಮ್ಮಲು ಪ್ರತಿಯೊಬ್ಬರ ಸಹಕಾರ ಅತ್ಯವಶ್ಯವಾಗಿದೆ ಎಂದರು.
ಬಸವತತ್ವ ಸಾಹಿತ್ಯವು ಕನ್ನಡಕ್ಕೆ ಬೇಕಾಗಿದೆ. ಮಹಿಳೆಯರನ್ನು 12ನೇ ಶತಮಾನದಲ್ಲಿ ಸರಿಸಮಾನವಾಗಿ ಕಾಣಬೇಕು ಎಂಬ ದೃಷ್ಠಿಯನ್ನು ಬಸವಣ್ಣನವರು ನೀಡಿದ್ದಾರೆ. ಆದರೆ, ಸರ್ಕಾರಗಳು ಮಹಿಳೆಯರಿಗೆ ಪರಿಪೂರ್ಣ ಮೀಸಲಾತಿಯನ್ನು ನೀಡದಂತ ಸ್ಥಿತಿಯಲ್ಲಿವೇ ಹಾಗೂ ಶೇ.97% ಜಾತಿಗಳನ್ನು ಒಗ್ಗೂಡಿಸಿದ ಕೀರ್ತಿ ಬಸವಣ್ಣನವರಿಗೆ ಸಲ್ಲಲಿದೆ. ಸಾಹಿತ್ಯಗಳ ಪ್ರತಿಪಾದನೆಯಾಗಬೇಕಾದರೆ ಜನಪದ, ಸಾಹಿತ್ಯ ಹಳೆಗನ್ನಡ ಸಾಹಿತ್ಯ ಸೇರಿದಂತೆ ಇನ್ನಿತರ ಸಾಹಿತ್ಯವನ್ನು ಕನ್ನಡದ ಜೋತೆಯಲ್ಲಿ ಸೇರಿಸಬೇಕು ಎಂದರು.
ಸಮ್ಮೇಳನಾಧ್ಯಕ್ಷ ಡಾ.ಬಿ.ವಿ. ವಸಂತ್‍ಕುಮಾರ್ ಮಾತನಾಡಿ, ಕೇಂದ್ರ-ರಾಜ್ಯ ಸರ್ಕಾರಗಳು ಪ್ರಾದೇಶಿಕ ಭಾಷೆಯಲ್ಲಿ ಶಿಕ್ಷಣವನ್ನು ಕಡ್ಡಾಯಗೊಳಿಸಬೇಕು, ಆಗ ಮಾತ್ರ ಪ್ರಾದೇಶಿಕಭಾಷೆಗಳ ಉಳಿವು ಸಾಧ್ಯವಾಗಲಿದೆ. ಪ್ರಾದೇಶಿಕ ಭಾಷೆಗಳ ಮೇಲೆ ನಡೆಯುತ್ತಿರುವ ದೌರ್ಜನ್ಯಕ್ಕೆ ಸರ್ಕಾರಗಳೇ ಕಾರಣವಾಗಿದೆ. ಆದ್ದರಿಂದ ಮೊದಲು ಸರ್ಕಾರಗಳು ತಮ್ಮಲ್ಲಿರುವ ತೊಡಕು ನಿವಾರಣೆ ಮಾಡಿಕೊಳ್ಳಬೇಕೆಂದು ಸಲಹೆ ನೀಡಿದರು.
ನಮ್ಮ ಪೂರ್ವಜರು ಬಿಟ್ಟುಹೋಗಿರುವ ಭಾಷೆಗಳನ್ನು ಉಳಿಸಿಕೊಳ್ಳುವುದಕ್ಕೆ ಹೋರಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿರುವುದು ದುರಂತದ ವಿಷಯ, ಕನ್ನಡ ಉಳಿವಿಗಾಗಿ ಇಂತಹ ಸಾಹಿತ್ಯಸಮ್ಮೇಳನಗಲ್ಲಿ ಅತಿಹೆಚ್ಚು ಮಕ್ಕಳನ್ನು ಬೇರೆಯುವಂತೆ ಮಾಡಬೇಕು ಆಗ ಮಾತ್ರ ಕನ್ನಡ ಉಳಿವು, ಸಂಸ್ಕತಿ ಪ್ರತಿಪಾದಿಸಲು ಸಾಧ್ಯವಾಗಲಿದೆ ಎಂದು ಹೇಳಿದರು.
ಪ್ರತಿಯೊಬ್ಬರಲ್ಲಿಯೂ ಸಾಹಿತ್ಯ ಸಮ್ಮೇಳನಗಳು ಸಹೋದರತ್ವ ಭಾವವನ್ನು ಮೂಡಿಸುವ ಸಂಸ್ಕತಿ ಬೆಳಸಬೇಕಿದೆ. ಆಗ ಮಾತ್ರ ಇಂತಹ ಸಮ್ಮೇಳನಗಳು ಸಾರ್ಥಕವಾಗಲಿದೆ. ಪ್ರಸ್ತುತ ಮನುಷ್ಯ ಮನುಷ್ಯರ ನಡುವೆ ಸಂಬಂಧಗಳು ಕಣ್ಮರೆಯಾಗುತ್ತಿವೆ. ಮನೆಗಳು, ಊರುಗಳು, ಸಮಾಜಗಳು, ರಾಜ್ಯ, ದೇಶ, ರಾಜಕೀಯ ಪಕ್ಷಗಳು, ಸಂಘ-ಸಂಸ್ಥೆಗಳು, ಧರ್ಮಗಳು ಛಿದ್ರವಾಗುತ್ತಿವೆ ಎಂದು ಆತಂಕ ವ್ಯಕ್ತಪಡಿಸಿದರು.ಸಂಸದ ಜಿ.ಎಂ. ಸಿದ್ದೇಶ್ವರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಪಾಂಡೋಮಟ್ಟಿ ವಿರಕ್ತ ಮಠದ ಶ್ರೀಗುರುಬಸವ ಸ್ವಾಮಿಜಿ ಸಾನಿಧ್ಯ ವಹಿಸಿದ್ದರು. ತಾಲೂಕು ಕಸಾಪ ಅಧ್ಯಕ್ಷ ಎಂ.ಯು.ಚನ್ನಬಸಪ್ಪ, ಶಾಸಕ ಮಾಡಾಳ್ ವಿರೂಪಾಕ್ಷಪ್ಪ, ಜಿಪಂ ಸದಸ್ಯ ಮಂಜುಳಾ, ಲೋಕೇಶ್ವರ, ಯಶೋಧಮ್ಮ, ವಾಗೀಶ್, ತಾಪಂ ಅಧ್ಯಕ್ಷೆ ರೂಪ, ಉಪಾಧ್ಯಕ್ಷೆ ಗೀತಾ, ಸದಸ್ಯರಾದ ಜಗದೀಶ್, ಕಸಾಪ ಜಿಲ್ಲಾಧ್ಯಕ್ಷ ಮಂಜುನಾಥ್ ಕುರ್ಕಿ ಮತ್ತಿತರರು ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
