ಚಿತ್ರದುರ್ಗ:
ನಿಷ್ಟೆ, ಸಮಯಪ್ರಜ್ಞೆ, ಬುದ್ದಿವಂತಿಕೆ, ಪ್ರಾಮಾಣಿಕತೆ, ಚಾಣಾಕ್ಷತನಿಂದ ಪೊಲೀಸರು ಕರ್ತವ್ಯ ನಿರ್ವಹಿಸಿದರೆ ಕ್ರಿಮಿನಲ್ಗಳನ್ನು ಮಟ್ಟ ಹಾಕಬಹುದು ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಎಸ್.ಬಿ.ವಸ್ತಮಠ ಕರೆ ನೀಡಿದರು.
ಐಮಂಗಲ ಪೊಲೀಸ್ ತರಬೇತಿ ಶಾಲೆಯಲ್ಲಿ 4 ನೇ ತಂಡದ ಸಿವಿಲ್ ಪೊಲೀಸ್ ಕಾನ್ಸ್ಟೇಬಲ್ಗಳ ಬುನಾದಿ ತರಬೇತಿಯನ್ನು ಶುಕ್ರವಾರ ಉದ್ಘಾಟಿಸಿ ಮಾತನಾಡಿದರು.
ಕೊಲೆ, ಸುಲಿಗೆ, ದರೋಡೆ, ಅತ್ಯಾಚಾರ ಹೀಗೆ ಯಾವುದೇ ಅಪರಾಧಗಳು ನಡೆದಾಗ ತಡ ಮಾಡದೆ ಪೊಲೀಸರು ಸ್ಥಳಕ್ಕೆ ತೆರಳಿ ನಿಗಧಿತ ಸಮಯದಲ್ಲಿ ವಿಚಾರಣೆ ನಡೆಸಿ ಎಫ್.ಐ.ಆರ್.ಹಾಕಬೇಕು. ಒಂದು ವೇಳೆ ಎಫ್.ಐ.ಆರ್.ಹಾಕುವುದು ತಡವಾದರೆ ಕ್ರಿಮಿನಲ್ಗಳಿಗೆ ಶಿಕ್ಷೆ ನೀಡುವಾಗ ಎಡವಟ್ಟಾಗುತ್ತದೆ. ಇದರಿಂದ ಅಪರಾಧಿಗಳು ಶಿಕ್ಷೆಯಿಂದ ಬಚಾವಾದಾಗ ಸಮಾಜದ ನಗೆಪಾಟಿಲಿಗೆ ಈಡಾಗಬೇಕಾಗುತ್ತದೆ ಎಂಬುದನ್ನು ಮನದಲ್ಲಿಟ್ಟುಕೊಂಡು ಎಚ್ಚರಿಕೆಯಿಂದ ಕರ್ತವ್ಯ ನಿರ್ವಹಿಸಿ ಎಂದು ಪೊಲೀಸರಿಗೆ ನ್ಯಾಯಾಧೀಶರು ಕಿವಿಮಾತು ಹೇಳಿದರು.
ಪೊಲೀಸ್ ಇಲಾಖೆ, ನ್ಯಾಯಾಂಗ ಒಂದು ನಾಣ್ಯದ ಎರಡು ಮುಖಗಳಿದ್ದಂತೆ ಇಬ್ಬರೂ ಜೊತೆಗೂಡಿ ಕರ್ತವ್ಯ ನಿರ್ವಹಿಸಿದಾಗ ಮಾತ್ರ ಎಲ್ಲರಿಗೂ ಸಮಾನವಾದ ನ್ಯಾಯ ನೀಡಲು ಸಾಧ್ಯ. ಪೊಲೀಸರು ನಮಗೆ ರಕ್ಷಣೆ ನೀಡಿ ಸದಾ ಕಾಯುತ್ತಿರುತ್ತಾರೆ ಎಂದು ಸಾರ್ವಜನಿಕರು ಇಲಾಖೆ ಮೇಲೆ ಇಟ್ಟಿರುವ ನಂಬಿಕೆಗೆ ಚ್ಯುತಿ ಬರದಂತೆ ಕೆಲಸ ಮಾಡಿ. ಪೊಲೀಸರ ಮೈಮೇಲೆ ಸಮವಸ್ತ್ರವಿರುವುದರಿಂದ ಬೇರೆ ಯಾವ ಇಲಾಖೆ ನೌಕರರಿಗೂ ಇಲ್ಲದಂತ ವಿಶೇಷ ಗೌರವವಿದೆ. ಹಾಗಾಗಿ ಸಮವಸ್ತ್ರವನ್ನು ಧರಿಸಿದಾಗ ದುಶ್ಚಟಗಳಿಗೆ ಬಲಿಯಾಗಬೇಡಿ. ನೊಂದು ನ್ಯಾಯಕ್ಕಾಗಿ ಠಾಣೆಗೆ ಬರುವವರನ್ನು ಮತ್ತಷ್ಟು ನೋಯಿಸದೆ ಸಂಯಮದಿಂದ ವರ್ತಿಸಿ ಎಂದು ಪೊಲೀಸ್ ಕಾನ್ಸ್ಟೇಬಲ್ಗಳಿಗೆ ತಿಳಿಸಿದರು.
ದೂರು, ಎಫ್.ಐ.ಆರ್., ಮಹಜರ್, ದೋಷಾರೋಪಣಪಟ್ಟಿ ಎಂದರೆ ಏನು ಎನ್ನುವುದನ್ನು ಮೊದಲು ಪೊಲೀಸರು ಸರಿಯಾಗಿ ತಿಳಿದುಕೊಂಡಿರಬೇಕು. ಠಾಣೆಯಲ್ಲಿ ಎಸ್.ಹೆಚ್.ಓ.ಆದವರು ಏನಾದರೂ ಅಪರಾಧಗಳು ಇಲ್ಲವೇ ಗಲಾಟೆ ನಡೆದಾಗ ಸಬ್ಇನ್ಸ್ಪೆಕ್ಟರ್ ಇಲ್ಲ ಎಂದು ಜವಾಬ್ದಾರಿಯಿಂದ ನುಣುಚಿಕೊಂಡು ಕೂರುವಂತಿಲ್ಲ. ಮೇಲಾಧಿಕಾರಿಗಳಿಗೆ ದೂರವಾಣಿ ಮೂಲಕ ಮಾಹಿತಿ ತಿಳಿಸಿ ಕೂಡಲೆ ಕಾರ್ಯಪ್ರವೃತ್ತರಾಗಬೇಕು. ಹೀನಾತಿ ಹೀನ ಕೃತ್ಯಗಳು ನಡೆದಾಗ ನಿರ್ಲಕ್ಷೆ ಮಾಡಬಾರದು. ಅಪರಾಧ ಪ್ರಕರಣಗಳಲ್ಲಿ ಮಹಜರ್ ನಡೆಸಿದ ನಿಖರ ದಿನಾಂಕ ಹಾಗೂ ಯಾವ್ಯಾವ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂಬುದನ್ನು ಸರಿಯಾಗಿ ನಮೂದಿಸಬೇಕು. ಯಾವುದೇ ಪ್ರಕರಣಗಳಲ್ಲಿ ಅಪರಾಧಿಗೆ ಶಿಕ್ಷೆಯಾಗಬೇಕಾದರೆ ಎರಡು ಮೂರು ಸಾಕ್ಷಿಗಳಾದರೂ ಬೇಕು. ಬುದ್ದಿವಂತಿಕೆಯಿಂದ ದೋಷಾರೋಪಣಪಟ್ಟಿಯನ್ನು ಸಿದ್ದಪಡಿಸಿ ಎಂದರು.
ದುಷ್ಟರನ್ನು ಶಿಕ್ಷಿಸಿ ಒಳ್ಳೆಯವರಿಗೆ ನ್ಯಾಯ ಕೊಡಿಸುವುದರಿಂದ ಸಮಾಜವನ್ನು ಸುಸ್ಥಿತಿಯಲ್ಲಿಡಬಹುದು ಎಂಬುದನ್ನು ತಿಳಿದುಕೊಂಡು ಕೆಲಸ ಮಾಡಿ ಎಂದು ಪೊಲೀಸರಿಗೆ ಕಿವಿಮಾತು ಹೇಳಿದ ನ್ಯಾಯಾಧೀಶರು ಯಾವ ಕೆಲಸವೂ ಮೇಲು-ಕೀಳಲ್ಲ ನಿಮಗೆ ಸಿಕ್ಕಿರುವ ಕೆಲಸವನ್ನು ಆತ್ಮತೃಪ್ತಿಯಿಂದ ಮಾಡಿ ಎಂದು ತಾಕೀತು ಮಾಡಿದರು.
ಜಿಲ್ಲಾ ರಕ್ಷಣಾಧಿಕಾರಿ ಕೆ.ಅರುಣ್ ಮಾತನಾಡುತ್ತ ಪೊಲೀಸ್ ಇಲಾಖೆಗೆ ಸೇರಿದ ಮೇಲೆ ಶಿಸ್ತು, ಸಮಯಪ್ರಜ್ಞೆ, ಬುದ್ದಿವಂತಿಕೆ ಇರಲೆಬೇಕು. ಇಂತಹ ತರಬೇತಿಗಳಿಂದ ಪ್ರಾಯೋಗಿಕವಾಗಿ ಕಲಿಯುವುದು ಸಾಕಷ್ಟಿದೆ. ಇದರಿಂದ ನಿಮ್ಮ ವೃತ್ತಿ ಜೀವನದಲ್ಲಿ ಪ್ರಯೋಜನವಾಗಲಿದೆ.
ಪ್ರಾಮಾಣಿಕವಾಗಿ ಕೆಲಸ ಮಾಡಿದರೆ ಯಾವುದೇ ಸಮಸ್ಯೆಗಳು ಎದುರಾಗುವುದಿಲ್ಲ. ಸಿಕ್ಕ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಿ ಸಾರ್ವಜನಿಕರು ಎಲ್ಲಾ ಕಡೆ ಸುತ್ತಾಡಿ ಕೊನೆಗೆ ಬರುವುದು ಪೊಲೀಸರ ಬಳಿ. ಆದ್ದರಿಂದ ಸಮಾಜ ಇಲಾಖೆ ಮೇಲೆ ಇಟ್ಟಿರುವ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡಿ ಎಂದು ಕಾನ್ಸ್ಟೇಬಲ್ಗಳಿಗೆ ತಿಳಿಸಿದರು.
ತರಬೇತಿ ಶಾಲೆಯ ಪ್ರಾಂಶುಪಾಲರು ಹಾಗೂ ಎಸ್.ಪಿ. ಪಿ.ಪಾಪಣ್ಣ ಅಧ್ಯಕ್ಷತೆ ವಹಿಸಿ ಮಾತನಾಡಿ ಶಿಸ್ತು ಸಮಯಪ್ರಜ್ಞೆ ಪೊಲೀಸರಿಗೆ ಅತಿ ಮುಖ್ಯವಾಗಿ ಬೇಕಾಗಿರುವುದರಿಂದ ತರಬೇತಿಯಲ್ಲಿ ನಿಮಗೆ ಎಲ್ಲವನ್ನು ಹೇಳಿಕೊಡಲಾಗುವುದು. ಜೊತೆಗೆ ಸಂಪನ್ಮೂಲ ವ್ಯಕ್ತಿಗಳು ತಿಳಿಸುವ ವಿಚಾರಗಳನ್ನು ಗಮನವಿಟ್ಟು ಕೇಳಿ ವೃತ್ತಿ ಜೀವನದ ಬದುಕಿನಲ್ಲಿ ಅಳವಡಿಸಿಕೊಳ್ಳಿ ಎಂದು ಹೇಳಿದರು.
ಐಮಂಗಲ ತರಬೇತಿ ಶಾಲೆಯ ಕಾನೂನು ಅಧಿಕಾರಿ ಕೆ.ಎಸ್.ಸತೀಶ್, ನಿವೃತ್ತ ಡಿ.ವೈ.ಎಸ್ಪಿ.ಗಳಾದ ರುದ್ರಮುನಿ, ಸೈಯದ್ ಇಸಾಕ್, ಅಬ್ದುಲ್ರೆಹಮಾನ್, ಮಹಮದ್ಯೂಸೂಫ್. ತರಬೇತಿ ಶಾಲೆಯ ಉಪಪ್ರಾಂಶುಪಾಲರು ವೇದಿಕೆಯಲ್ಲಿದ್ದರು.
ಉಪನ್ಯಾಸಕಿ ಅಮೂಲ್ಯ ಪ್ರಾರ್ಥಿಸಿದರು. ಕಾನೂನು ಅಧಿಕಾರಿ ಕೆ.ಎಸ್.ಸತೀಶ್ ಸ್ವಾಗತಿಸಿದರು. ಮುಖ್ಯ ಕವಾಯತು ಬೋಧಕ ಬಿ.ಪರಶುರಾಮ್ ನಿರೂಪಿಸಿದರು.
ಎಸ್.ಜೆ.ಎಂ.ಕಾನೂನು ಕಾಲೇಜಿನ ಸಹಪ್ರಾಧ್ಯಾಪಕರಾದ ಸುಮನ ಅಂಗಡಿ, ಉಪನ್ಯಾಸಕಿ ಭುವನೇಶ್ವರಿ, ಪೊಲೀಸ್ ಇನ್ಸ್ಪೆಕ್ಟರ್ಗಳಾದ ವರದರಾಜ್, ವಿಜಯ್, ಸುರೇಶ್ಯಳ್ಳೂರು, ಕಿರಿಯ ನ್ಯಾಯಾಧೀಶರುಗಳು ಬುನಾದಿ ತರಬೇತಿಯಲ್ಲಿ ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ