ಕಲಬುರಗಿ : ಅಫಜಲಪುರ ತಾಲೂಕಿನಲ್ಲಿ ಅತಿವೃಷ್ಟಿಯಿಂದ ಹಾನಿಗೊಳಗಾದ ಮನೆಗಳಿಗೆ ಭೇಟಿ ನೀಡಿ ನಿರಾಶ್ರಿತರಿಗೆ ಸಾಂತ್ವನ ಹೇಳಿದರು, ಮಾತೋಳಿ ಗ್ರಾಮದಲ್ಲಿ ಮಳೆಯಿಂದ ಮನೆ ಕುಸಿದಿದ್ದ, ಮನೆಯ ಮಾಲೀಕ ಪಂಡಿತ್ ಶಿವಯೋಗಿ ಅವರಿಗೆ ಉಸ್ತುವಾರಿ ಸಚಿವ ನಿರಾಣಿ ಮತ್ತು ಶಾಸಕ ಎಂ.ವೈ.ಪಾಟೀಲ ಅವರು 10 ಸಾವಿರ ರೂ. ಚೆಕ್ ವಿತರಿಸಿದರು.
ಬುಧವಾರ ಕಲಬುರಗಿ ಜಿಲ್ಲಾ ಉಸ್ತುವಾರಿ ಹಾಗೂ ಬೃಹತ್ ಮತ್ತು ಮಧ್ಯಮ ಪ್ರಮಾಣದ ಕೈಗಾರಿಕಾ ಸಚಿವ ಡಾ.ಮುರುಗೇಶ್ ಆರ್ ನಿರಾಣಿ ಅವರು ಕಲಬುರಗಿಯ ನಿರಾಣಿಯವರು ಈ ವೇಳೆ ಮಾತನಾಡಿದರು, ಈಗಾಗಲೇ ಜಿಲ್ಲಾಧಿಕಾರಿಗಳಿಗೆ ಹಾಗೂ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ನಿರಾಶ್ರಿತರಿಗೆ ತಕ್ಷಣವೇ ಪರಿಹಾರವನ್ನು ನೀಡುವಂತೆ ಸೂಚಿಸಿದ್ದು, ಸದ್ಯಕ್ಕೆ ಬೇಕಾದ ಅಗತ್ಯ ಸೌಲಭ್ಯಗಳನ್ನು ಜನರಿಗೆ ನೀಡುವಂತೆ ತಿಳಿಸಲಾಗಿದೆ ಎಂದರು. ನೆರೆ ಪರಿಸ್ಥಿತಿಯನ್ನು ನಿರ್ವಹಿಸುವಲ್ಲಿ ನಮ್ಮ ಸರ್ಕಾರ ಸಮರ್ಥವಾಗಿದ್ದು, ಜನರ ಕಷ್ಟಕ್ಕೆ ಸೂಕ್ತ ರೀತಿಯಲ್ಲಿ ಸ್ಪಂದಿಸುತ್ತಿದ್ದು ಪರಿಹಾರ ಕಾರ್ಯ ಭರದಿಂದ ನಡೆಯುತ್ತಿದೆ ಎಂದರು.
ಅತಿವೃಷ್ಟಿಯಿಂದ ಹಾನಿಗೊಳಗಾದ ಪ್ರದೇಶಗಳ ಬಗ್ಗೆ ಸಮಗ್ರವಾಗಿ ಚರ್ಚಿಸಲಾಗಿದ್ದು, ರೈತರ ಬೆಳೆ ನಷ್ಟ, ಮನೆ ಕಳೆದುಕೊಂಡ ನಿರಾಶ್ರಿತರಿಗೆ ಒದಗಿಸಬೇಕಾದ ಸೌಲಭ್ಯಗಳು, ಜಾನುವಾರುಗಳಿಗೆ ಮೇವು , ಸಂತ್ರಸ್ತರಿಗೆ ಪರಿಹಾರವನ್ನು ನೀಡುವ ಮತ್ತು ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ತಕ್ಷಣವೇ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.
ಈ ಸಂದರ್ಭದಲ್ಲಿ ಕೆ.ಕೆ.ಆರ್.ಡಿ.ಬಿ. ಅಧ್ಯಕ್ಷ ಹಾಗೂ ಕಲಬುರಗಿ ದಕ್ಷಿಣ ಶಾಸಕ ದತ್ತಾತ್ರೇಯ ಪಾಟೀಲ ರೇವೂರ, ಡಿ.ಸಿ.ಯಶವಂತ ವಿ. ಗುರುಕರ್, ಜಿಲ್ಲಾ ಪಂಚಾಯತ್ ಸಿ.ಇ.ಓ ಡಾ.ಗಿರೀಶ್ ಡಿ. ಬದೋಲೆ, ತಹಶೀಲ್ದಾರ ಸಂಜೀವಕುಮಾರ ದಾಸರ್, ಗ್ರೇಡ್-2 ತಹಶೀಲ್ದಾರ ಪೃಥ್ವಿರಾಜ ಬಿ. ಪಾಟೀಲ ಹಾಜರಿದ್ದರು.