ಬೆಂಗಳೂರು:
ಸರಕಾರಿ ಶಾಲಾ ಮಕ್ಕಳಿಗೆ ವಿತರಿಸಿರುವ ಶೂ, ಸಾಕ್ಸ್ ಗಳ ಗುಣಮಟ್ಟವನ್ನು ಸೂಕ್ಷ್ಮವಾಗಿ ಪರಿಶೀಲಿಸಿ, 15 ದಿನಗಳೊಳಗೆ ವರದಿ ಸಲ್ಲಿಸುವಂತೆ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಎನ್. ಮಹೇಶ್ ಅವರು ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರಿಗೆ ಆದೇಶಿಸಿದ್ದಾರೆ. ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಮೂಲಕ ಸರಕಾರಿ ಶಾಲಾ ಮಕ್ಕಳಿಗೆ ನೀಡಿರುವ ಶೂ ಮತ್ತು ಸಾಕ್ಸ್ನ ಗುಣಮಟ್ಟ ತೀರಾ ಕಳಪೆಯಾಗಿರುವ ಕುರಿತು “ಉದಯವಾಣಿ’ ಜು. 25ರಂದು “ಮಕ್ಕಳು ಬಳಸದಂತಿವೆ ಸರಕಾರಿ ಶೂ, ಸಾಕ್ಸ್!’ ಎಂಬ ಶೀರ್ಷಿಕೆ ಯಡಿ ವರದಿ ಪ್ರಕಟಿಸಿತ್ತು.
ಅದರಂತೆ ಸಚಿವರು, ಕಳೆದ ವಾರ ಕೊಳ್ಳೇಗಾಲ ತಾಲೂಕು ಕೇಂದ್ರದ ಸರಕಾರಿ ಶಾಲೆಗೆ ಭೇಟಿ ನೀಡಿ ಮಕ್ಕಳ ಶೂ, ಸಾಕ್ಸ್ ಗುಣಮಟ್ಟವನ್ನು ಸೂಕ್ಷ್ಮವಾಗಿ ಪರಿಶೀಲನೆ ನಡೆಸಿದ್ದರು. ಮಕ್ಕಳಿಗೆ ನಿರ್ದಿಷ್ಟ ಕಂಪೆನಿಯ ಎರಡನೇ ದರ್ಜೆಯ ಶೂ, ಸಾಕ್ಸ್ ವಿತರಿಸಿರುವುದು ಬಹಿರಂಗಗೊಂಡಿತ್ತು. ಅನಂತರ ಬೆಂಗಳೂರಿನಲ್ಲಿ ಇಲಾಖೆಯ ಆಯುಕ್ತರು ಹಾಗೂ ಪ್ರಧಾನ ಕಾರ್ಯ ದರ್ಶಿಗಳ ಸಹಿತವಾಗಿ ಅಧಿಕಾರಿಗಳ ಸಭೆ ನಡೆಸಿ, ಶೂ, ಸಾಕ್ಸ್ ವಿತರಣೆಯ ಎಲ್ಲ ಮಾಹಿತಿ ಪಡೆದಿದ್ದರು.