ಶಿರಾ
ಕಳ್ಳಂಬೆಳ್ಳ ಕೆರೆಯಿಂದ ಶಿರಾ ಕೆರೆಗೆ ಹೇಮಾವತಿ ನೀರನ್ನು ಹರಿಸುವ ಕಾರ್ಯಕ್ಕೆ ಬಿ.ಸತ್ಯನಾರಾಯಣ್ ಚಾಲನೆ ನೀಡುವ ಮೂಲಕ ಕೊನೆಗೂ ತಾವು ನಡೆಸಿದ ಪ್ರತಿಭಟನೆಯಿಂದ ಅಧಿಕಾರಿಗಳನ್ನು ಮಣಿಸಿದ್ದಾರೆ.
ಕಳ್ಳಂಬೆಳ್ಳ ಕೆರೆಗೆ ಕಳೆದ 30 ದಿವಸಗಳಿಂದಲೂ ಹೇಮಾವತಿಯ ನೀರು ಹರಿದು ಬರುತ್ತಿದ್ದು ಕಳ್ಳಂಬೆಳ್ಳ ಕೆರೆಯಲ್ಲಿ ನೀರು ನಿಧಾನಗತಿಯಲ್ಲಿ ಶೇಖರಣೆಗೊಳ್ಳತೊಡಗಿತ್ತು. ಎಸ್ಕೇಪ್ ಗೇಟ್‍ನಿಂದ ಕಳ್ಳಂಬೆಳ್ಳ ಕೆರೆಗೆ ಹರಿದು ಬರುತ್ತಿರುವ ಹೇಮಾವತಿ ನೀರನ್ನು ಎಲ್ಲಿ ಅಧಿಕಾರಿಗಳು ರಾತ್ರೋರಾತ್ರಿ ಸ್ಥಗಿತಗೊಳಿಸಿಬಿಡುತ್ತಾರೋ ಎಂದು ಶಾಸಕ ಸತ್ಯನಾರಾಯಣ್ ಕಾವಲಿಗೂ ಕೂತಿದ್ದರು. ಆದರೂ ನೀರಿನ ಪ್ರಮಾಣ ಕಡಿಮೆಯೇ ಹರಿಯುತ್ತಿತ್ತು.
ಈ ನಡುವೆ ಕೆಲ ರಾಜಕೀಯ ಮುಖಂಡರನ್ನು ಓಲೈಸುವ ಸಲುವಾಗಿ ತಮ್ಮ ಹೆಸರಿಗೆ ಕೆಟ್ಟ ಹೆಸರು ತರಲು ಹೇಮಾವತಿಯ ನೀರನ್ನು ನೀರಾವರಿ ಸಲಹಾ ಸಮಿತಿಯ ಸೂಚನೆಯಂತೆ ನೀಡುತ್ತಿಲ್ಲ ಎಂದು ಆರೋಪಿಸಿ ಶಾಸಕ ಸತ್ಯನಾರಾಯಣ್ ಹೇಮಾವತಿ ನಾಲಾ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡು ಶಿರಾ ಜಲ ಸಂಗ್ರಹಾಗಾರದ ಬಳಿ ಗುರುವಾರ ಸಂಜೆ ಪ್ರತಿಭಟನೆಗೆ ಕೂರುತ್ತಿದ್ದಂತೆಯೇ ಅಧಿಕಾರಿಗಳು ಕೊನೆಗೂ ಸತ್ಯನಾರಾಯಣ್ ಅವರ ಒತ್ತಡಕ್ಕೆ ಮಣಿದು ಹೇಮಾವತಿ ನಾಲಾ ವಲಯದ ಅಧಿಕಾರಿಗಳು ನಿಗದಿತ ನೀರನ್ನು ಎಸ್ಕೇಪ್‍ಗೇಟ್ ಮೂಲಕ ಗುರುವಾರ ರಾತ್ರಿಯಿಂದಲೇ ಹರಿಸುತ್ತಿದ್ದಾರೆ.
ಪ್ರತಿ ದಿನ 150 ಕ್ಯೂಸೆಕ್ಸ್ ನೀರನ್ನು ಹರಿದುಬಿಡಲಾಗುತ್ತಿದ್ದು ಕಳ್ಳಂಬೆಳ್ಳ ಕೆರೆಗೆ ಹೆಚ್ಚು ನೀರು ಶೇಖರಣೆಗೊಳ್ಳಲು ಅನುವು ಮಾಡಿಕೊಟ್ಟಂತಾಗಿದೆ. ಶುಕ್ರವಾರ ಬೆಳಿಗ್ಗೆ ಅಧಿಕಾರಿಗೊಳೊಟ್ಟಿಗೆ ಕಳ್ಳಂಬೆಳ್ಳ ಕೆರೆಗೆ ಭೇಟಿ ನೀಡಿದ ಶಾಸಕ ಸತ್ಯನಾರಾಯಣ್ ಕೆರೆಯ ತೂಬನ್ನು ಎತ್ತಿ ಶಿರಾ ಕೆರೆಗೆ ಕೊಂಡೊಯ್ಯುವ ಕಾರ್ಯಕ್ರಮಕ್ಕೆ ಚಾಲನೆ ನೀಡಿಸಿದ್ದಾರೆ.
ಶಾಸಕರ ಸೂಚನೆ:
ಶಿರಾ ಕೆರೆಗೆ ಹರಿಯುವ ನೀರು ಎಲ್ಲೂ ಕೂಡಾ ಒಂದು ಹನಿ ಪೋಲಾಗದಂತೆ ನೋಡಿಕೊಳ್ಳಲು ಸ್ಥಳದಲ್ಲಿಯೇ ಇದ್ದ ನಗರಸಭೆಯ ಆಯುಕ್ತರು, ತಾಲ್ಲೂಕು ದಂಡಾಧಿಕಾರಿಗಳು ಹಾಗೂ ನೀರಾವರಿ ಇಲಾಖೆಯ ಅಧಿಕಾರಿಗಳಿಗೆ ಶಾಸಕರು ಸೂಚನೆ ನೀಡಿದ್ದಾರೆ.
ಈ ಸಂಬಂಧ ಕೆರೆಯ ದಂಡೆಯ ಮೇಲೆಯೇ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕರು ರೈತರು ಹಾಗೂ ಸಾರ್ವಜನಿಕರು ಹೆದರುವ ಅವಶ್ಯಕತೆ ಇಲ್ಲ. ಕಳ್ಳಂಬೆಳ್ಳ, ಶಿರಾ ಹಾಗೂ ಮದಲೂರು ಕೆರೆಗೆ ಹೇಮಾವತಿ ನೀರನ್ನು ಹರಿಸಿಕೊಳ್ಳದೆ ಯಾವುದೇ ಕಾರಣಕ್ಕೂ ಬಿಡುವುದಿಲ್ಲ ಎಂದು ತಿಳಿಸಿದರು.
ಕಳ್ಳಂಬೆಳ್ಳ ಕೆರೆಯಿಂದ ಶಿರಾ ಕೆರೆಯತ್ತ ಸಾಗುವ ನೀರಿನ ಕಾಲುವೆಗಳ ದುರಸ್ಥಿಯೂ ಸೇರಿದಂತೆ ನೀರು ಸುಸೂತ್ರವಾಗಿ ಶಿರಾ ಕೆರೆಯನ್ನು ತಲುಪಲು ಎಲ್ಲಾ ರೀತಿಯ ಕ್ರಮ ಕೈಗೊಳ್ಳುವಂತೆಯೂ ಸೂಚನೆ ನೀಡಿದ ಅವರು ಇದಕ್ಕಾಗಿ ಎಷ್ಟೇ ಅನುದಾನ ಖರ್ಚಾದರೂ ಸೂಕ್ತ ಕ್ರಮ ಕೈಗೊಳ್ಳಲು ಆದೇಶಿಸಿದರು.
