ಕಳ್ಳತನಗಳ ನಿಯಂತ್ರಣಕ್ಕೆ ಪೊಲೀಸ್ ಇಲಾಖೆಯಿಂದ ವ್ಯಾಪಕ ಬಿಗಿ ಕ್ರಮ : ಸಾರ್ವಜನಿಕರೂ ಸಹ ಪೊಲೀಸ್ ಇಲಾಖೆಯೊಂದಿಗೆ ಸಹಕರಿಸಲು ಡಿವೈಎಸ್ಪಿ ಮನವಿ

ಚಳ್ಳಕೆರೆ

ಉಪವಿಭಾಗ ವ್ಯಾಪ್ತಿಯಲ್ಲಿ ಇತ್ತೀಚೆಗೆ ಕಳ್ಳತನ ಪ್ರಕರಣಗಳು ನಿಧಾನಗತಿಯಲ್ಲಿ ಹೆಚ್ಚುತ್ತಿದ್ದು, ಪೊಲೀಸ್ ಇಲಾಖೆಯ ಕಟ್ಟೆಚ್ಚರಿಕೆ ನಡುವೆಯೂ ಸಹ ಅಲ್ಲೊಂದು ಇಲ್ಲೊಂದು ಪ್ರಕರಣಗಳು ನಡೆಯುತ್ತಿವೆ. ಇವುಗಳನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಸಾರ್ವಜನಿಕರು ಪೊಲೀಸ್ ಇಲಾಖೆಗೆ ಸಹಕಾರ ನೀಡಬೇಕಿದೆ. ಇತ್ತೀಚೆಗೆ ನಡೆದ ಬಹುತೇಕ ಕಳ್ಳತನ ಪ್ರಕರಣಗಳಲ್ಲಿ ಕಳ್ಳರು ಆಧುನಿಕ ತಂತ್ರಜ್ಞಾನವನ್ನು ಅನುಸರಿಸಿ ಪೊಲೀಸ್ ಇಲಾಖೆಗೆ ಯಾವುದೇ ಸುಳಿವು ಸಿಗದಂತೆ ಜಾಗ್ರತೆ ವಹಿಸುತ್ತಿದ್ದು, ಸಾರ್ವಜನಿಕರು ಕೈಜೋಡಿಸಿದಲ್ಲಿ ಕಳ್ಳತನ ಪ್ರಕರಣಗಳು ಸಂಪೂರ್ಣವಾಗಿ ನಿಯಂತ್ರಿಸಲಾಗುವುದು ಎಂದು ಡಿವೈಎಸ್ಪಿ ಎಸ್.ರೋಷನ್ ಜಮೀರ್ ತಿಳಿಸಿದರು.

ಅವರು, ಬುಧವಾರ ಸಂಜೆ ತಮ್ಮ ಕಚೇರಿಯಲ್ಲಿ ಕಳ್ಳತನ ನಿಯಂತ್ರಣ ಕುರಿತು ಕರೆಯಲಾಗಿದ್ದ ತಾಲ್ಲೂಕಿನ ಬಂಗಾರದ ಅಂಗಡಿ ಮಾಲೀಕರು ಮತ್ತು ಸಾರ್ವಜನಿಕರ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಬಹುತೇಕ ಬ್ಯಾಂಕ್‍ನ ಕಳ್ಳತನ ಪ್ರಕರಣಗಳಲ್ಲಿ ಕಳ್ಳರು ವಿಫಲರಾಗಿದ್ಧಾರೆ. ಕಾರಣ ಸಿಸಿ ಕ್ಯಾಮರ ಹಾಗೂ ಸುರಕ್ಷಿತ ಲಾಕರ್ ಇದ್ದಿದ್ದರಿಂದ ಕಳ್ಳರಿಗೆ ಅವಕಾಶವಾಗಿಲ್ಲ. ಆದರೆ, ತಳಕು ಗ್ರಾಮದ ಸಾಯಿವೆಂಕಟೇಶ್ವರ ಜ್ಯೂಯಲರ್ಸ್ ನಲ್ಲಿ ಮಂಗಳವಾರ ರಾತ್ರಿ ಕಳ್ಳತನ ಪ್ರಕರಣ ನಡೆದಿದ್ದು, ಅಲ್ಲಿ ಕಳ್ಳರು ಗೋಡೆಗೆ ಕನ್ನ ಹೊಡೆದು ಅಂಗಡಿಯಲ್ಲಿದ್ದ ಬೀರುವನ್ನು ಸಹ ತೆಗೆದು ಕಳ್ಳತನ ಮಾಡಿರುವುದಾಗಿ ತಿಳಿದು ಬಂದಿದೆ. ಆದರೆ, ಈ ಬಗ್ಗೆ ಅಲ್ಲಿನ ಪಿಎಸ್‍ಐ ಅವರಿಗೆ ಸೂಚನೆ ನೀಡಿದ್ದು, ವಾಸ್ತಾಂಶವನ್ನು ಅರಿತು ಪ್ರಕರಣ ದಾಖಲಿಸಲು ಸೂಚನೆ ನೀಡಲಾಗಿದೆ. ಸಾರ್ವಜನಿಕರಿಗೆ ರಕ್ಷಣೆ ನೀಡುವ ಪೊಲೀಸ್ ಇಲಾಖೆ ಕಳ್ಳತನ ನಿಯಂತ್ರಿಸುವಲ್ಲೂ ಸಹ ಸರ್ವಶಕ್ತವಾಗಿದ್ದು, ಎಲ್ಲರೂ ಸಹಕಾರ ನೀಡಿದಾಗ ಮಾತ್ರ ಇದು ಸಾಧ್ಯವೆಂದರು.

ವೃತ್ತ ನಿರೀಕ್ಷಕ ಎನ್.ತಿಮ್ಮಣ್ಣ ಮಾತನಾಡಿ, ಹಲವಾರು ಪ್ರಕರಣಗಳಲ್ಲಿ ಅಪರಿಚಿತರಿಂದ ಇಂತಹ ಕಳ್ಳತನ ಪ್ರಕರಣ ಹೆಚ್ಚುತ್ತಿದ್ದು, ನಿಮ್ಮಲ್ಲಿ ಯಾರೇ ಅಪರಿಚಿತ ವ್ಯಕ್ತಿ ಬಂದಲ್ಲಿ ಪೊಲೀಸ್ ಇಲಾಖೆಗೆ ತಕ್ಷಣ ಮಾಹಿತಿ ನೀಡಬೇಕಿದೆ. ಪ್ರತಿಯೊಂದು ಅಂಗಡಿ ಮಾಲೀಕರು ರಾತ್ರಿ ವೇಳೆಯಲ್ಲಿ ಸುರಕ್ಷತೆಗಾಗಿ ಸೆಕ್ಯೂರಿಟಿ ಗಾರ್ಡ್, ಬರ್ಗರ್ ಅಲಾರಂ ಹೊಂದಬೇಕು. ಪ್ರತಿಯೊಂದು ಅಂಗಡಿಗೂ ಕಡ್ಡಾಯವಾಗಿ ಸಿಸಿ ಕ್ಯಾಮರವನ್ನು ಅಳವಡಿಸಬೇಕು, ಅನುಮಾನ ಕಂಡು ಬಂದಲ್ಲಿ ಪೊಲೀಸ್ ಇಲಾಖೆ ಗಮನಕ್ಕೆ ತರಬೇಕು, ಕಳ್ಳತನ ಪ್ರಕರಣಗಳು ನಡೆಯದಂತೆ ಮುಂಜಾಗ್ರತೆ ವಹಿಸಲಾಗುವುದು, ರಾತ್ರಿ ಪಹರೆಯನ್ನು ಮತ್ತಷ್ಟು ಬಿಗಿಗೊಳಿಸಲಾಗುವುದು ಎಂದರು. ಪಿಎಸ್‍ಐ ಕೆ.ಸತೀಶ್‍ನಾಯ್ಕ ಉಪಸ್ಥಿತರಿದ್ದರು. ಅಂಗಡಿ ಮಾಲೀಕರ ಪರವಾಗಿ ವಿಶ್ವಕರ್ಮ ಸಮಾಜದ ಅಧ್ಯಕ್ಷ ವೆಂಕಟೇಶ್ ಚಾರ್, ಜ್ಯೂಯಲರಿ ಮಾಲೀಕರ ಸಂಘದ ಅಧ್ಯಕ್ಷ ಶಶಿಕುಮಾರ್ ಮುಂತಾದವರು ಮಾತನಾಡಿದರು.

ಈ ಸಂದರ್ಭದಲ್ಲಿ ಶ್ರೀನಿವಾಸ್‍ಚಾರ್, ಕೇಶವಚಾರ್, ವೆಂಕಟೇಶ್‍ಚಾರ್, ವಿಜಯಕುಮಾರ್, ಚೇತನ್, ಎಸ್.ವಿಜಯಕುಮಾರ್, ಎಸ್.ಶಿವಕುಮಾರ್ ಮುಂತಾದವರು ಇದ್ದರು.

Recent Articles

spot_img

Related Stories

Share via
Copy link