ನೋವು ತುಂಬಿದ ಮನದೊಳಗೆ
ನಲಿವಿನ ಕವಿತೆಯು ಇಲ್ಲ
ಕಂಬನಿಯ ಕೊಳದೊಳಗೆ
ಖುಷಿಯ ತಾವರೆಯು ಇಲ್ಲ
ಕಡುಕಷ್ಟದ ಕಾರಿರುಳಿಗೆ
ನಗುವ ಚಂದ್ರಮನಿಲ್ಲ
ಬಿಗಿದ ಗಂಟಲಿನೊಳಗೆ
ಒಲವಿನ ಸ್ವರವಿಲ್ಲ
ದಾರಿದ್ರ್ಯದ ತೂಕಡಿಕೆಗೆ
ಜೀವನೋತ್ಸಾಹ ಜಡವಾಯಿತಲ್ಲ
ಹುರುಪಿಂದ ಓಡುವ ಕುದುರೆ ಕಾಲ್ಕಟ್ಟಿ
ಚಾಟಿ ಬಾರಿಸಿ ಓಡಿಸುತಿಹರಾರೋ
ಗೆಲ್ಲುವ ಬಾಹುಬಲಿಯ ಕೈ ಕಟ್ಟಿ
ನಡ ಮುರಿದು ಕುಸ್ತಿಗೆ ಬಿಟ್ಟವರಾರೋ
ವಾರಿಧಿಯ ತಳಕೆ ಮದ್ದಿಟ್ಟು ಸಿಡಿಸಿ
ತಾಳ್ಮೆಯ ಬೋಧಿಸುತಿಹರಾರೋ
ಮಸ್ತಕದ ಗುಡಿಯಲ್ಲಿ ಜ್ಞಾನದ ದೀಪ ಹಚ್ಚಿ
ಬೆಳಗದೆ ಸುಮ್ಮನಿರು ಎನುವರಾರೋ
ಯಶದ ಸಾಧನೆಗೆ ಮೆಟ್ಟಿಲಾಗಿ ಬಳಸಿ
ನೆರವಾದವರ ಮರೆತು ಮೆರೆಯುತಿಹರಾರೋ
ಅನ್ಯರ ಬೆವರ ಕದ್ದವಗೆ ಗದ್ದುಗೆಯ ಹಾಸಿ
ಸಜ್ಜನರ ಸದ್ದಡಗಿಸಿ ನಕ್ಕು ನಲಿವರಾರೋ
ಕಾಯ್ವ ಕರಗಳೆ ಕೊಲಲು ಹೊಂಚುತಿರೆ
ಸಂಚುಕೋರರ ತಡೆವರಾರೋ
ಎಲೆ ಮರೆಯ ಕಾಯ್ಗಳು ಹಣ್ಣಾಗಿ ಉದುರುದುರಿ
ನೆಲಕಚ್ಚಿ ಕ್ರಿಮಿ ಕೀಟ ಸವಿವಾಗ ನನಗೆ ಬೇಕೆನುವರಾರೋ.