ಶಿರಾ :
ಬಿ.ಜೆ.ಪಿ. ಪಕ್ಷದ ಡಬಲ್ ಎಂಜಿನ್ ಸರ್ಕಾರಗಳಿಂದ ಪ.ವರ್ಗದ ಮೀಸಲಾತಿ ಸೇರಿದಂತೆ ಹಲವು ಸಮಸ್ಯೆಗಳ ನಿವಾರಣೆ ಎಂದು ನಂಬಿ ಶಿರಾ ತಾ. ಕಾಡುಗೊಲ್ಲರ ಸಂಘವು ಕಳೆದ ಉಪ ಚುನಾವಣೆಯಲ್ಲಿ ಬಿ.ಜೆ.ಪಿ ಪಕ್ಷಕ್ಕೆ ಬೆಂಬಲ ನೀಡಿತ್ತು. ಆದರೆ ಕಾಡುಗೊಲ್ಲರ ಸಮಸ್ಯೆಗಳಿಗೆ ಸ್ಪಂದಿಸುವಲ್ಲಿ ಆ ಪಕ್ಷ ವಿಫಲವಾದ್ದರಿಂದ ನಮ್ಮ ಸಂಘವು ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯನ್ನು ಬೆಂಲಿಸಲಿದೆ ಎಂದು ಸಂಘದ ಅಧ್ಯಕ್ಷ ಗೌಡಗೆರೆ ಚಂದ್ರಶೇಖರ್ ತಿಳಿಸಿದರು.
ನಗರದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಡುಗೊಲ್ಲ, ಹಟ್ಟಿಗೊಲ್ಲ ಇಂತಹ ಉಪ ಪಂಗಡಗಳನ್ನು ಕಾಡುಗೊಲ್ಲ ಎಂದು ಒಟ್ಟುಗೂಡಿಸಿ ಪ.ವರ್ಗದ ಮೀಸಲಾತಿ ನೀಡುವಂತೆ ಕೇಂದ್ರಕ್ಕೆ ಶಿಫಾರಸ್ಸು ಮಾಡಿದ್ದು, ಈ ಹಿಂದಿನ ಕಾಂಗ್ರೆಸ್ ಪಕ್ಷದ ಸರ್ಕಾರ. ಡಬಲ್ ಎಂಜಿನ್ ಸರ್ಕಾರಗಳು ನಮಗೆ ಎಸ್.ಟಿ. ಮೀಸಲಾತಿ ಸೌಲಭ್ಯ ಒದಗಿಸುತ್ತವೆ ಎಂದು ನಂಬಿ ಬಿ.ಜೆ.ಪಿ.ಯನ್ನು ಬೆಂಬಲಿಸಲಾಗಿತ್ತು. ಆದರೆ ಸಮುದಾಯಕ್ಕೆ ಬಿ.ಜೆ.ಪಿ.ಯಿಂದ ನ್ಯಾಯ ಲಭ್ಯವಾಗಲಿಲ್ಲ ಎಂದರು.
ಉಪ ಚುನಾವಣೆಯ ವೇಳೆಯಲ್ಲಿ ಕಾಡುಗೊಲ್ಲ ನಿಗಮ ಸ್ಥಾಪನೆ ಮಾಡುವುದಾಗಿ ಬಿ.ಜೆ.ಪಿ. ಭರವಸೆ ನೀಡಿತ್ತು. ಆದರೆ ಮತ್ತೊಮ್ಮೆ ಚುನಾವಣೆ ಹತ್ತಿರ ಬಂದಾಗ ನಿಗಮ ಘೋಷಣೆ ಮಾಡಿ ಶಿರಾ ತಾಲ್ಲೂ ಕಿನವರನ್ನೇ ಅಧ್ಯಕ್ಷರನ್ನಾಗಿ ಮಾಡುವಲ್ಲಿಯೂ ಸರ್ಕಾರ ವಿಳಂಬ ಮಾಡಿದ ಪರಿಣಾಮ ನಿಗಮದ ಅನುದಾನವೂ ಬಳಕೆಯಾಗಲಿಲ್ಲ ಎಂದು ಚಂದ್ರಶೇಖರ್ ಆರೋಪಿಸಿದರು.
ಕಾಡುಗೊಲ್ಲರಿಗೆ ನ್ಯಾಯ ಲಭ್ಯವಾಗುವುದು ಕಾಂಗ್ರೆಸ್ ಪಕ್ಷದಿಂದ ಎಂಬ ಭರವಸೆಯ ಮೂಲಕ ನಮ್ಮ ಸಂಘವು ಈ ಬಾರಿ ಜಯಚಂದ್ರ ಅವರಿಗೆ ಬೆಂಬಲ ನೀಡಲಿದೆ. ಪ್ರಚಾರಕ್ಕೆ ಶಿರಾ ನಗರಕ್ಕೆ ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಆಗಮಿಸಲಿದ್ದು, ಆ ಸಂದರ್ಭ ಬಹುತೇಕ ಕಾಡುಗೊಲ್ಲರು ಕಾಂಗ್ರೆಸ್ ಸೇರುತ್ತೇವೆಂದು ತಿಳಿಸಿದರು.
ಸಂಘದ ಪ್ರ.ಕಾರ್ಯದರ್ಶಿ ಕೆಂಪೇಗೌಡ ಬಂದಕುಂಟೆ, ಬಸವನಹಳ್ಳಿ ರಾಮಮೂರ್ತಿ, ಗುಡ್ಡದಹಟ್ಟಿ ತಿಮ್ಮರಾಜು, ಬಂದಕುಂಟೆ ತಿಮ್ಮರಾಜು, ಜನಾರ್ಧನ್, ತಿಮ್ಮರಾಜಗೌಡ, ಬಿ.ಟಿ.ತಿಮ್ಮರಾಜು, ಶ್ರೀನಿವಾಸ್, ಶಿವಕುಮಾರ್, ಗೌಡಗೆರೆ ಈರಣ್ಣ, ಎನ್.ಹರೀಶ್, ಮಂಜುನಾಥ್, ಚಂದ್ರಪ್ಪ ಮುಂತಾದವರು ಸುದ್ದಿಗೋಷ್ಠಿಯಲ್ಲಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ