ಚಿತ್ರದುರ್ಗ:
ನಗರಸಭೆ ಚುನಾವಣೆಗೆ ನಾಮಪತ್ರ ಸಲ್ಲಿಸಲು ಕೊನೆ ದಿನವಾದ ಶನಿವಾರಂದು ಪ್ರಮುಖ ಮೂರು ಪಕ್ಷಗಳ ಅಭ್ಯರ್ಥಿಗಳು ತಮ್ಮ ಬೆಂಬಲಿಗರೊಂದಿಗೆ ಮೆರವಣಿಗೆಯಲ್ಲಿ ತೆರಳಿ ನಾಮಪತ್ರ ಸಲ್ಲಿಸಿದರು.
ಚುನಾವಣಾ ಆಯೋಗ ಮೊದಲು ಆ.17ಕ್ಕೆ ನಾಮಪತ್ರ ಸಲ್ಲಿಸಲು ಕೊನೆ ದಿನವೆಂದು ನಿಗಧಿಪಡಿಸಿತ್ತು. ಆದರೆ ಮಾಜಿ ಪ್ರಧಾನಿಗಳ ನಿಧನದ ಕಾರಣ ಶುಕ್ರವಾರ ಸರ್ಕಾರಿ ರಜೆ ಘೋಷಿಸಲಾಗಿತ್ತು. ಹೀಗಾಗಿ ನಾಮಪತ್ರ ಸಲ್ಲಿಸಲು ಶನಿವಾರ ಅವಕಾಶ ನೀಡಿತ್ತು.
ಬೆಳಿಗ್ಗೆಯಿಂದಲೇ ಬಿಜೆಪಿ, ಕಾಂಗ್ರೆಸ್ ಹಾಗೂ ಜಾತ್ಯಾತೀತ ಜನತಾ ದಳದ ಅಧಿಕೃತ ಅಭ್ಯರ್ಥಿಗಳು ಖುಷಿಯಿಂದಲೇ ತಮ್ಮ ತಮ್ಮ ಅಭಿಮಾನಿಗಳು ಮತ್ತು ಕಾರ್ಯಕರ್ತರ ಜೊತೆ ಆಗಮಿಸಿ ನಾಮಪತ್ರಗಳಲ್ಲಿ ಸಲ್ಲಿಸಿದರು. ಎರಡೂ ಪಕ್ಷಗಳಲ್ಲಿಯೂ ಟಿಕೆಟ್ ಸಿಗದಿದ್ದ ಕಾರಣ ಕೆಲವು ಮಂದಿ ಮಾಜಿ ಸದಸ್ಯರು, ಮಾಜಿ ಅಧ್ಯಕ್ಷರು ಹಾಗೂ ಮುಖಂಡರು ಪಕ್ಷೇತರರಾಗಿಯೂ ನಾಮ ಪತ್ರಸಲ್ಲಿಸಿದರು.
22ನೇ ವಾರ್ಡಿನಲ್ಲಿ ಮೂರು ಬಾರಿ ಗೆದ್ದಿರುವ ರವಿಶಂಕರ್ ಬಾಬು ಈ ಬಾರಿ ಕಾಂಗ್ರೆಸ್‍ನಿಂದ ತಮ್ಮ ಬೆಂಬಲಿಗರ ಜೊತೆ ತೆರಳಿ ನಾಮಪತ್ರಸಲ್ಲಿಸಿದ್ದಾರೆ. ಇದೇ ವಾರ್ಡಿನಲ್ಲಿ ಬಿಜೆಪಿಯಿಂದ ರೋಹಿಣಿ ನವೀನ್ ಅವರು ನಾಮಪತ್ರ ಸಲ್ಲಿಸಿದರು
ತೀವ್ರ ಕುತೂಹಲ ಕೆರಳಿಸಿರುವ 35ನೇ ವಾರ್ಡಿನಲ್ಲಿ ಬಿಜೆಪಿಯಿಂದ ಮಾಜಿ ಸದಸ್ಯ ಎಸ್.ಬಾಸ್ಕರ್ ಅವರು ಅಪಾರ ಬೆಂಬಲಿಗರ ಜೊತೆ ತೆರಳಿ ನಾಮಪ್ರಸಲ್ಲಿಸಿದರು.33ನೇ ವಾರ್ಡಿನಲ್ಲಿ ಕಾಂಗ್ರೆಸ್‍ನಿಂದ ಶೃತಿ ಅರಸ್ ಹಾಗೂ ಪಕ್ಷೇತರ ಅಭ್ಯರ್ಥಿಯಾಗಿ ಮಾಜಿ ಸದಸ್ಯೆ ಸುಮಾ ಅವರು ನಾಮಪತ್ರಸಲ್ಲಿಸಿದರು. 5ನೇ ವಾರ್ಡಿನಲ್ಲಿ ಕಾಂಗ್ರೆಸ್‍ನಿಂದ ಖಲೀಲ್ ಅವರು ತಮ್ಮ ನಾಮಪತ್ರಸಲ್ಲಿಸಿದರು.
ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್ ಹಾಗೂ ಜಾತ್ಯಾತೀತ ಜನತಾ ದಳದ ಬಹುತೇಕ ಹಾಲಿ ಸದಸ್ಯರುಗಳಿಗೆ ಟಿಕೆಟ್ ಸಿಕ್ಕಿಲ್ಲ. ಮೀಸಲಾತಿ ಕಾರಣದಿಂದ ಕೆಲವರಿಗೆ ಸ್ಪರ್ದೆಗೆ ಅವಕಾಶ ದೊರೆತಿಲ್ಲ. ಇನ್ನೂ ಕೆಲವರಿಗೆ ಟಿಕೆಟ್ ನೀರಾಕರಿಸಲಾಗಿದೆ. ಕೆಲವು ಪ್ರಬಾವಿಗಳು ತಮ್ಮ ಬದಲಿಗೆ ಪತ್ನಿಯರನ್ನು ಕಣಕ್ಕಿಳಿಸಿದ್ದಾರೆ. ಕಾಂಗ್ರೆಸ್‍ನ ಮಾಜಿ ಅಧ್ಯಕ್ಷ ಗೊಪ್ಪೆ ಮಂಜುನಾಥ್ ಅವರ ಬದಲಿಗೆ ಅವರ ಪತ್ನಿಗೆ ಕಾಂಗ್ರೆಸ್ ಟಿಕೆಟ್ ನೀಡಿದೆ.
ಹಾಲಿ ಅಧ್ಯಕ್ಷ ತಿಮ್ಮಣ್ಣ ಜೆಡಿಎಸ್‍ಗೆ ಪಕ್ಷಾಂತರಗೊಂಡಿದ್ದು, ಅವರು ಜೆಡಿಎಸ್‍ನಿಂದಲೇ ನಾಮಪತ್ರಸಲ್ಲಿಸಿದ್ದಾರೆ. ಜೆಡಿಎಸ್‍ನ ಹಾಲಿ ಸದಸ್ಯ ಮಹೇಶ್ ಅವರು ಮೀಸಲಾತಿ ಬದಲಾದ ಕಾರಣ ಒಂದನೇ ವಾರ್ಡಿನಲ್ಲಿ ಅವರ ತಾಯಿ ಅವರನ್ನು ಕಣಕ್ಕಿಳಿಸಿದ್ದಾರೆ. 3ನೇ ವಾರ್ಡಿಗೆ ಹಾಲಿ ಸದಸ್ಯ ವೆಂಕಟೇಶ್ ಅವರ ಬದಲಿಗೆ ಅವರ ಪತ್ನಿಗೆ ಕಾಂಗ್ರೆಸ್ ಟಿಕೆಟ್ ನೀಡಲಾಗಿದೆ. 2ನೇ ವಾರ್ಡಿನಲ್ಲಿ ಬಿಜೆಪಿಯ ಲತಾ ಅವರು ತಮ್ಮ ನಾಮಪತ್ರ ಸಲ್ಲಿಸಿದರು. ಕಾಂಗ್ರೆಸ್‍ನಿಂದ ಮೆಹಬೂಬ್ ಖಾತೂನ್ ಹಾಗೂ ಪಕ್ಷೇತರ ಸದಸ್ಯರಾಗಿ ಗೀತಾ ಅವರು ನಾಮಪತ್ರ ಸಲ್ಲಿಸಿದ್ದಾರೆ.
ಜೆಡಿಎಸ್‍ನ ಹಾಲಿ ಸದಸ್ಯ ಮಲ್ಲಿಕಾರ್ಜುನ್ ಅವರ ಪತ್ನಿಗೆ 6ನೇ ವಾರ್ಡಿಗೆ ಕಾಂಗ್ರೆಸ್ ಟಿಕೆಟ್ ನೀಡಿದ್ದು, ಶನಿವಾರ ನಾಮಪತ್ರ ಸಲ್ಲಿಸಿದರು. ಜೆಡಿಎಸ್‍ನ ಮತ್ತೊಬ್ಬ ಸದಸ್ಯ ಫಕೃದ್ದೀನ್ ಅವರ ತಾಯಿಗೆ ಕಾಂಗ್ರೆಸ್ ಟಿಕೆಟ್ ಕೊಟ್ಟಿದೆ. 31ನೇ ವಾರ್ಡಿಗೆ ಬಿಜೆಪಿಯಿಂದ ಮಾಜಿ ಸದಸ್ಯ ಪ್ರಕಾಶ್ ಅವರು ನಾಮ ಪತ್ರಸಲ್ಲಿಸಿದರು. 8ನೇ ವಾರ್ಡಿನಲ್ಲಿ ಮಾಜಿ ಸದಸ್ಯ ಶ್ರೀರಾಮ್ ಅವರು ಕಾಂಗ್ರೆಸ್‍ನಿಂದ ನಾಮಪತ್ರ ಸಲ್ಲಿಸಿದರು. ಇದೇ ವಾರ್ಡಿನಲ್ಲಿ ಮಾಜಿ ಅಧ್ಯಕ್ಷ ಹೆಚ್.ಸಿ.ನಿರಂಜನಮೂರ್ತಿ ಅವರಿಗೆ ಕಾಂಗ್ರೆಸ್ ಟಿಕೆಟ್ ನಿರಾಕರಿಸಲಾಗಿದ್ದು, ಅವರು ಪಕ್ಷೇತರರಾಗಿ ನಾಮಪತ್ರಸಲ್ಲಿಸಿದರು
ಕಾರ್ಯಕರ್ತರ ಅಬ್ಬರ
ಅಭಿಮಾನಿಗಳು ತಮ್ಮ ತಮ್ಮ ವಾರ್ಡ್‍ಗಳ ಸ್ಪರ್ಧಾಳುಗಳನ್ನು ನಾಮಪತ್ರ ಸಲ್ಲಿಕೆ ವೇಳೆ ಹೆಗಲ ಮೇಲೆ ಎತ್ತಿಕೊಂಡು ಸಾಗಿ ಬೆಂಬಲ ವ್ಯಕ್ತಪಡಿಸುತ್ತಿದ್ದರು. ಅಂಬೇಡ್ಕರ್ ವೃತ್ತದಿಂದ ಹಿಡಿದು ಅಲ್ಲಲ್ಲಿ ಅಭಿಮಾನಿಗಳು ಪಟಾಕಿಗಳನ್ನು ಸಿಡಿಸಿ ಕುಣಿದು ಸಂಭ್ರಮಿಸುತ್ತಿದ್ದ ದೃಶ್ಯ ಕಂಡು ಬಂದಿತು. ಡೊಳ್ಳು, ತಮಟೆ ವಾದ್ಯಗಳಿಗೆ ಅಭಿಮಾನಿಗಳು ಕುಣಿದು ಕುಪ್ಪಳಿಸಿದರು.
ನಾಮ ಪತ್ರಸಲ್ಲಿಸಲು ಶನಿವಾರ ಕೊನೆದಿನವಾಗಿದ್ದರಿಂದ ಮೂರು ರಾಜಕೀಯ ಪಕ್ಷಗಳ ಅಭ್ಯರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ನಾಮಪತ್ರಸಲ್ಲಿಸಿದ್ದರಿಂದ ಬಾರೀ ಜನರು ಜಮಾಯಿಸಿದ್ದರು.ಬಾಲಭವನದ ಸುತ್ತ ಬ್ಯಾರಿಕೇಡ್‍ಗಳನ್ನಿಟ್ಟು ಪೊಲೀಸರು ಜನಜಂಗುಳಿಯನ್ನು ನಿಯಂತ್ರಿಸಿದರು.
ಚುನಾವಣೆಯ ಹಿನ್ನಲೆಯಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಕಛೇರಿಯಲ್ಲಿ ನಾಮಪತ್ರಗಳನ್ನು ಸಲ್ಲಿಸಲು ಅವಕಾಶ ನೀಡಲಾಗಿದ್ದು ಅಲ್ಲೂ ಸಹಾ ಅಭ್ಯರ್ಥಿಯ ಜೊತೆಗೆ ಹಲವಾರು ಜನತೆ ನಾಮಪತ್ರ ಸಲ್ಲಿಸಲು ತಮ್ಮ ಸರದಿಗಾಗಿ ಕಾಯುತ್ತಿದ್ದ ದೃಶ್ಯ ಕಂಡು ಬಂದಿತು.