ಬೆಂಗಳೂರು :
ಚಿಂಚೋಳಿ ಕ್ಷೇತ್ರದ ಕಾಂಗ್ರೆಸ್ ಶಾಸಕ ಇಂದು ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಮೈತ್ರಿ ಸರ್ಕಾರದ ವಿರುದ್ಧ ಭಿನ್ನಮತಕ್ಕೆ ಮೊದಲ ವಿಕೆಟ್ ಪತನವಾಗಿದೆ.
ಇಂದು ಬೆಳಗ್ಗೆ ಕೋಲಾರ ಜಿಲ್ಲೆ ಶ್ರೀನಿವಾಸಪುರ ತಾಲೂಕಿನ ಅಡ್ಡಗಲ್ನಲ್ಲಿರುವ ಸ್ಪೀಕರ್ ರಮೇಶ್ ಕುಮಾರ್ ನಿವಾಸಕ್ಕೆ ತೆರಳಿ ರಾಜೀನಾಮೆ ನೀಡಿದ್ದಾರೆ. ಸ್ವಆಸಕ್ತಿಯಿಂದಲೇ ರಾಜೀನಾಮೆ ನೀಡಿರುವುದಾಗಿ ತಿಳಿಸಿದ್ದಾರೆ.
ಉಮೇಶ್ ಜಾಧವ್ ಕಾಂಗ್ರೆಸ್ ಪಕ್ಷ ತೊರೆಯುತ್ತಾರೆ ಎಂಬ ಮಾತುಗಳು ಹಲವಾರು ದಿನಗಳಿಂದ ಕೇಳಿಬಂದಿದ್ದವು. ಈಗ ಕೊನೆಗೂ ಉಮೇಶ್ ಜಾಧವ್ ಕಾಂಗ್ರೆಸ್ಗೆ ವಿದಾಯ ಹೇಳಿದ್ದಾರೆ. ಇನ್ನು ಲೋಕಸಭಾ ಚುನಾವಣೆಗೆ ಇನ್ನು ಕೆಲವೇ ತಿಂಗಳುಗಳು ಮಾತ್ರ ಬಾಕಿ ಇದ್ದು, ಈ ಹಂತದಲ್ಲಿ ಉಮೇಶ್ ಜಾಧವ್ ಅವರ ನಡೆ ಕುತೂಹಲ ಕೆರಳಿಸಿದೆ.
ಇನ್ನೂ ಕಾಂಗ್ರೆಸ್ ತೊರೆದಿರುವ ಜಾಧವ್ ಬಿಜೆಪಿ ಸೇರುತ್ತಾರೆ ಎಂದು ಹೇಳಲಾಗುತ್ತಿದೆ. ಬುಧವಾರ ಕಲಬುರಗಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಬಿಜೆಪಿ ಸಮಾವೇಶ ನಡೆಯಲಿದೆ. ಈ ವೇಳೆ ಅಧಿಕೃತವಾಗಿ ಉಮೇಶ್ ಜಾಧವ್ ಬಿಜೆಪಿ ಸೇರ್ಪಡೆಯಾಗಲಿದ್ದಾರೆ ಎಂದು ಮೂಲಗಳು ತಿಳಿಸಿವೆ.