ಕಾಂಗ್ರೆಸ್-ಜೆಡಿಎಸ್‍ನ ಅತೃಪ್ತ ಶಾಸಕರಿಂದ ಶೀಘ್ರವೇ ರಾಜೀನಾಮೆ

ಬೆಂಗಳೂರು

        ಕಾಂಗ್ರೆಸ್-ಜೆಡಿಎಸ್‍ನ ಅತೃಪ್ತ ಶಾಸಕರು ಶೀಘ್ರವೇ ರಾಜೀನಾಮೆ ನೀಡಲಿದ್ದಾರೆ ಎಂದು ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಹೊಸ ಬಾಂಬ್ ಸಿಡಿಸಿದರು.

         ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಅಷ್ಟೇ ಅಲ್ಲದೇ ಜೆಡಿಎಸ್‍ನ ಅತೃಪ್ತರೂ ರಾಜೀನಾಮೆ ನೀಡಲಿ ದ್ದಾರೆ.ಆದರೆ ಎಷ್ಟು ಜನ ರಾಜೀನಾಮೆ ನೀಡಲಿದ್ದಾರೆ ಎಂಬುವುದನ್ನು ಈಗ ನಾನು ಬಹಿರಂಗ ಪಡಿಸುವುದಿಲ್ಲ. ಈ ಮೊದಲು ಅತೃಪ್ತರಿಗೆ ರಾಜೀನಾಮೆ ಅಂಗೀಕಾರ ಆಗುತ್ತೋ? ಇಲ್ಲವೋ? ಎಂಬ ಬಗ್ಗೆ ಭಯ ಇತ್ತು. ಉಮೇಶ ಜಾಧವ್ ರಾಜೀನಾಮೆ ಅಂಗೀಕಾರವಾಗಿದೆ. ಹೀಗಾಗಿ ಶೀಘ್ರವೇ ಉಳಿದ ಅತೃಪ್ತರೆಲ್ಲರೂ ರಾಜೀನಾಮೆ ನೀಡಲಿದ್ದಾರೆ. ಈ ಸರ್ಕಾರದ ಬಗ್ಗೆ ಕಾಂಗ್ರೆಸ್-ಜೆಡಿಎಸ್ ಕೆಲ ಶಾಸಕರಿಗೆ ಅತೃಪ್ತಿ ಇದೆ. ಹೀಗಾಗಿ ಸಮ್ಮಿಶ್ರ ಸರ್ಕಾರ ತಾನಾಗಿಯೇ ಪತನವಾಗಲಿದೆ ಎಂದು ಭವಿಷ್ಯ ನುಡಿದರು.

        ಲೋಕಸಭೆ ಚುನಾವಣೆ ಬಳಿಕ ಬಿಜೆಪಿಯಿಂದ ಮತ್ತೆ ಆಪರೇಷನ್ ಕಮಲ ನಡೆಯಲಿದೆ ಎಂಬ ಸಚಿವ ಸತೀಶ ಜಾರಕಿಹೊಳಿ ಅವರಿಗೆ ತಿರುಗೇಟು ನೀಡಿದ ಈಶ್ವರಪ್ಪ, ನಾವು ಆಪರೇಷನ್ ಕಮಲವನ್ನೇ ಆರಂಭಿಸಿಲ್ಲ. ವಿರೋಧಿಗಳೇ ಈ ಬಗ್ಗೆ ಪ್ರಚಾರ ಮಾಡುತ್ತಿದ್ದಾರೆ. 

         ಮೈತ್ರಿ ಪಕ್ಷಗಳ ಶಾಸಕರಿಗೆ ಈ ಸರ್ಕಾರದ ಬಗ್ಗೆ ಅಸಮಾಧಾನವಿದೆ. ಹೀಗಾಗಿ ಸಮ್ಮಿಶ್ರ ಸರ್ಕಾರ ತಾನಾಗಿಯೇ ಪತನವಾಗಲಿದೆ. ಆಗ ಬಿಜೆಪಿ ಸರ್ಕಾರ ರಚನೆ ಮಾಡಲಿದೆ ಎಂದರು.ದೇವೇಗೌಡ, ಸಿದ್ದರಾಮಯ್ಯ ಹಾಗೂ ಶಿವರಾಮೇಗೌಡರು ಬಿಜೆಪಿಯನ್ನು ಕೋಮುವಾದಿ ಎಂದು ಟೀಕಿಸುತ್ತಾರೆ. ಆದರೆ ಮಂಡ್ಯದಲ್ಲಿ ಮೈತ್ರಿ ಪಕ್ಷದವರೇ ಗೌಡ-ನಾಯ್ಡು ಎಂದು ಜಾತಿ ರಾಜಕಾರಣ ಮಾಡುತ್ತಿದ್ದಾರೆ. ಇಂಥವರಿಗೆ ಮತದಾರರೇ ತಕ್ಕ ಪಾಠ ಕಲಿಸಲಿದ್ದಾರೆ ಎಂದರು.

        ಮಾಜಿ ಸಿಎಂ ಸಿದ್ದರಾಮಯ್ಯಗೆ ಜಾತಿ ಬಿಟ್ರೆ ಬೇರೆ ಗೊತ್ತಿಲ್ಲ. ಸಿದ್ದರಾಮಯ್ಯ ಎಷ್ಟು ಜನ ಕುರುಬರಿಗೆ ಅನುಕೂಲ ಮಾಡಿದ್ದಾರೆ? ವಿಶ್ವನಾಥ, ಜಿ.ಶಂಕರಗೆ ಸಿದ್ದರಾಮಯ್ಯ ಮೋಸ ಮಾಡಿದ್ದಾರೆ. ಸೋಲುವ ಕ್ಷೇತ್ರದಲ್ಲಿ ಕುರುಬರಿಗೆ ಸಿದ್ದು ಟಿಕೆಟ್ ನೀಡಿದ್ದಾರೆ.

       ನಾನು ಕುರುಬ ನಾಯಕ ಅಲ್ಲ. ಸಿದ್ದರಾಮಯ್ಯ ಜಾತಿವಾದಿ. ನಾನು ರಾಷ್ಟ್ರೀಯವಾದಿ. ಇದನ್ನು ನೇರವಾಗಿ ಹೇಳಿದ್ರೆ ಸಿದ್ದರಾಮಯ್ಯಗೆ ಸಿಟ್ಟು ಬರುತ್ತದೆ. ಕುರುಬರ ಉದ್ಧಾರದ ಹೆಸರಲ್ಲಿ ಸಿದ್ದರಾಮಯ್ಯ ಉದ್ಧಾರ ಆಗಿದ್ದಾರೆ. ಬಿಜೆಪಿ ಅವಧಿಯಲ್ಲಿ ಹಿಂದುಳಿದ, ಅಲ್ಪಸಂಖ್ಯಾತರ ಕಲ್ಯಾಣಕ್ಕೆ ಅನೇಕ ಯೋಜನೆ ತಂದಿದ್ದೇವೆ. ಸಿದ್ದರಾಮಯ್ಯ ಏನು ಮಾಡಿದ್ದಾರೆ ಹೇಳಲಿ ಎಂದು ಕುಟುಕಿದರು.

          ಮಾಧ್ಯಮದವರ ಜೊತೆ ಮಾತನಾಡಿದ ಅವರು, ರಾಹುಲ್ ಗಾಂಧಿ ಅಮೇಥಿ ಬಿಟ್ಟು ದಕ್ಷಿಣ ಭಾರತದಲ್ಲಿ ಸ್ಪರ್ಧೆ ಮಾಡುತ್ತಿದ್ದಾರೆ. ಅಮೇಥಿಯಲ್ಲಿ ಸೋಲಿನ ಭಯದಿಂದ ದಕ್ಷಿಣ ಭಾರತದಿಂದ ಕಣಕ್ಕೆ ನಿಲ್ಲುತ್ತಿದ್ದಾರೆ. ಆದರೆ ಅಮೇಥಿಯಲ್ಲಿ ಹಿಂದೂ ಸಮುದಾಯದ ಜನ ತಿರಸ್ಕರಿಸುತ್ತಿದ್ದಾರೆ ಎಂದು ರಾಹುಲ್ ಗಾಂಧಿ ವಿರುದ್ಧಕಿಡಿಕಾರಿದರು.ಬಿಜೆಪಿ ಅವರು ಆಪರೇಷನ್ ಕಮಲ ಮಾಡಿದ್ದಾರೆ ಅಂತಾ ಕಾಂಗ್ರೆಸ್‍ನವರು ಹೇಳುತ್ತಾ ಬಂದಿದ್ದಾರೆ. ಆದರೆ ನಾವು ಯಾವುದೇ ತೆರನಾಗಿ ಆಪರೇಷನ್ ಕಮಲ ಮಾಡಿಲ್ಲ. ಕಾಂಗ್ರೆಸ್ ಪಕ್ಷದ ಶಾಸಕರೇ ಬಾಂಬೆಗೆ ಹೋಗಿದ್ದಾರೆ ಎಂದು ಹೇಳಿದರು.

         ರಾಜ್ಯದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ಜಾತಿ ಹೆಸರಲ್ಲಿ ರಾಜಕಾರಣ ಮಾಡುತ್ತಿದ್ದಾರೆ. ಆದರೆ ರಾಜ್ಯದಲ್ಲಿ ಜನರು ದೋಸ್ತಿ ಸರ್ಕಾರ ತಿರಸ್ಕರಿಸುತ್ತಿದ್ದಾರೆ. ರಾಜ್ಯದಲ್ಲಿ ಬಿಜೆಪಿ ಪಕ್ಷ ಅತಿ ಹೆಚ್ಚು ಸ್ಥಾನ ಗೆಲ್ಲುತ್ತದೆ. ಚಿಕ್ಕೋಡಿ ಲೋಕಸಭಾ ಅಭ್ಯರ್ಥಿ ಅಣ್ಣಾಸಾಹೇಬ್ ಜೊಲ್ಲೆ ಗೆಲುವು ನಿಶ್ಚಿತ ಎಂದು ಈಶ್ವರಪ್ಪ ಪ್ರತಿಕ್ರಿಯೆ ನೀಡಿದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap