ಬೆಂಗಳೂರು
ಕಾಂಗ್ರೆಸ್ ಗೆ ಬರಲಿ. ಆದ್ರೆ ನಮ್ಮ ಕ್ಷೇತ್ರಕ್ಕೂ ಸೋಮಣ್ಣಗೂ ಯಾವುದೇ ಸಂಬAಧ ಇರಬಾರದು. ಇದನ್ನು ಮೀರಿದ್ರೆ ನಮ್ಮ ನಿರ್ಧಾರ ಬೇರೆಯೇ ಇರುತ್ತದೆ ಎಂದು ಕೈ ನಾಯಕರಿಗೆ ಶಾಸಕರಾದ ಕೃಷ್ಣಪ್ಪ ಹಾಗೂ ಪ್ರಿಯಕೃಷ್ಣ ಸಂದೇಶ ರವಾನೆ ಮಾಡಿದ್ದಾರೆ.
ಇದು ಕೈ ನಾಯಕರಿಗೆ ಬಿಸಿ ತುಪ್ಪವಾಗಿದ್ದು, ಇತ್ತ ಸೋಮಣ್ಣ ಅವರನ್ನು ಕಾಂಗ್ರೆಸ್ಸಿಗೆ ಸೇರಿಸಿದರೂ ಸಮಸ್ಯೆ, ಸೇರಿಸದೇ ಇದ್ದರೂ ತೊಂದರೆ ಎಂಬAತಾಗಿದೆ. ಒಕ್ಕಲಿಗರಾದ ಈ ಇಬ್ಬರು ಶಾಸಕರು ತಮ್ಮ ಅಸಮಾಧಾನವನ್ನು ಬಹಿರಂಗವಾಗಿಯೇ ವ್ಯಕ್ತಪಡಿಸಿರುವ ಹಿನ್ನೆಲೆಯಲ್ಲಿ ವರಿಷ್ಠರು ಹೇಗೆ ಇದನ್ನು ನಿಭಾಯಿಸಲಿದ್ದಾರೆ ಎನ್ನುವುದೇ ಇದೀಗ ಯಕ್ಷ ಪ್ರಶ್ನೆಯಾಗಿದೆ.
ಬಿಜೆಪಿ ಹೈಕಮಾಂಡ್ ಮಾತಿಗೆ ಒಪ್ಪಿ, 2023 ರ ವಿಧಾನಸಭಾ ಚುನಾವಣೆಯಲ್ಲಿ ಚಾಮರಾಜನಗರ ಹಾಗೂ ವರುಣಾ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದ ವಿ ಸೋಮಣ್ಣ ಎರಡು ಕ್ಷೇತ್ರದಲ್ಲಿ ಹೀನಾಯವಾಗಿ ಸೋಲನುಭವಿಸಿದ್ದರು. ಬಳಿಕ ಬಹಿರಂಗವಾಗಿ ಬಿಜೆಪಿ ರಾಜ್ಯಾಧ್ಯಕ್ಷ ಹುದ್ದೆಗೆ ಬೇಡಿಕೆ ಇಟ್ಟಿದ್ದರು. ಆದರೆ, ಬಿಜೆಪಿ ರಾಜ್ಯಾಧ್ಯಕ್ಷರಾಗಿ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪರ ಪುತ್ರ ಬಿ ವೈ ವಿಜಯೇಂದ್ರ ಅವರನ್ನು ಆಯ್ಕೆ ಮಾಡಿದ್ದು, ಮತ್ತಷ್ಟು ಅಸಮಾಧಾನಕ್ಕೆ ಕಾರಣವಾಗಿದೆ. ಹೀಗಾಗಿ ಕಮಲ ಪಾಳೆಯ ಬಿಟ್ಟು ಕೈ ಹಿಡಿಯಲು ಚಿಂತನೆ ನಡೆಸಿದ್ದಾರೆ ಎನ್ನಲಾಗಿದೆ.
ಬಿಜೆಪಿಯಲ್ಲಿ ಬಂಡಾಯವೆದ್ದಿರುವ ಸೋಮಣ್ಣ ಕಾಂಗ್ರೆಸ್ ಕಡೆ ಮುಖ ಮಾಡಲಿದ್ದಾರೆ ಎಂಬ ಸುದ್ದಿ ಬಾರಿ ಸದ್ದು ಮಾಡುತ್ತಿದೆ. ಇದಕ್ಕೆ ತಕ್ಕಂತೆ ಗೃಹ ಸಚಿವ ಡಾ. ಜಿ ಪರಮೇಶ್ವರ್, ಡಿ.ಕೆ. ಶಿವಕುಮಾರ್ ಸೇರಿದಂತೆ ಅನೇಕ ಕೈ ನಾಯಕರು ಸೋಮಣ್ಣ ಬರುವುದಾದರೆ ಬರಲಿ ಎಂಬ ಹೇಳಿಕೆ ನೀಡುತ್ತಿರುವ ಬೆನ್ನಲ್ಲೇ ಗೋವಿಂದರಾಜ ನಗರ ವಿಧಾನ ಸಭಾ ಕ್ಷೇತ್ರದ ಶಾಸಕ ಪ್ರಿಯಕೃಷ್ಣ ಹಾಗೂ ಕೃಷ್ಣಪ್ಪ ಕೈ ಹೈಕಮಾಂಡ್ ಗೆ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ.
ಸೋಮಣ್ಣ ಕಾಂಗ್ರೆಸ್ ಗೆ ಬರುವುದಕ್ಕೆ ನಮ್ಮ ಸಮ್ಮತಿ ಇದೆ. ವಿರೋಧ ಇಲ್ಲ. ಪಕ್ಷಕ್ಕೆ ಬರುವುದಾದರೆ ವಿಜಯನಗರಕ್ಕೂ, ಗೋವಿಂದರಾಜ ನಗರಕ್ಕೂ ಸೋಮಣ್ಣಗೂ ಕಾಂಗ್ರೆಸ್‌ನಲ್ಲಿ ಸಂಬAಧ ಇರಬಾರದು. ಇದನ್ನು ಮೀರಿದರೆ ನಮ್ಮ ನಿರ್ಧಾರ ಬೇರೆಯಾಗಿರುತ್ತದೆ ಎಂದಿದ್ದು, ಸೋಮಣ್ಣ ವಿರುದ್ಧ ಬಂಡಾಯ ಎರಡು ಪಕ್ಷವನ್ನು ಪೇಚಿಗೆ ಸಿಲುಕಿಸುವಂತೆ ಮಾಡಿದೆ.
ಗೋವಿಂದರಾಜ ನಗರದಲ್ಲಿ ವಿ ಸೋಮಣ್ಣ ಪ್ರಭಾವಿ ನಾಯಕರು, ಅವರು ಅಲ್ಲಿನ ಶಾಸಕರೂ ಆಗಿದ್ದರು. ಆದರೆ, ಈಗೀನ ಕಾಂಗ್ರೆಸ್ ಶಾಸಕ ಪ್ರಿಯಾಕೃಷ್ಣ ಅವರಿಗೆ ಪ್ರತಿಸ್ಪರ್ಧಿಯಾಗಿದ್ದವರು. ಇವರು ಕಾಂಗ್ರೆಸ್ ನತ್ತ ಮುಖಮಾಡಿರುವುದು ತಂದೆ- ಪುತ್ರನಿಗೆ ನುಂಗಲಾರದ ತುಪ್ಪವಾಗಿದೆ.
ಆದರೂ ಕಾಂಗ್ರೆಸ್ಸಿಗೆ ಬಂದರೂ ಬರಲಿ, ನಮ್ಮ ಕ್ಷೇತ್ರದಲ್ಲಿ ಕೈಯಾಡಿಸಬಾರದು ಎಂಬ ಸ್ಪಷ್ಟ ಸಂದೇಶ ನೀಡಿದ್ದಾರೆ. ಇದರಿಂದ ಅವರನ್ನು ಕಾಂಗ್ರೆಸ್ ತಮ್ಮ ತೆಕ್ಕೆಗೆ ಪಡೆದು, ತುಮಕೂರು ಅಥವಾ ಬೇರೆ ಇನ್ನಾವುದೇ ಕ್ಷೇತ್ರದ ಲೋಕಸಭಾ ಟಿಕೆಟ್ ನೀಡಲು ಕಾಂಗ್ರೆಸ್ ಮುಖಂಡರು ಚರ್ಚೆ ನಡೆಸುತ್ತಿದ್ದಾರೆ.
ಸೋಮಣ್ಣ ಅವರು ಇದೀಗ ಬಹುತೇಕವಾಗಿ ಬಿಜೆಪಿ ಬಿಡಲು ತುದಿಗಾಲಲ್ಲಿ ನಿಂತಿದ್ದಾರೆ. ಅವರು ಕಾಂಗ್ರೆಸ್ ನತ್ತ ಮುಖಮಾಡಿದ್ದಾರೆ. ಕಾಂಗ್ರೆಸ್ ನಲ್ಲಿ ಅವರಿಗೆ ರತ್ನಗಂಬಳಿ ಸ್ವಾಗತವೋ ಅಥವಾ ಮುಳ್ಳಿನ ಸ್ವಾಗತವೋ ಎಂಬುದು ಮುಂಬರುವ ದಿನಗಳಲ್ಲಿ ಸ್ಪಷ್ಟವಾಗಲಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ