ಕಾಂಗ್ರೆಸ್ ಬಿಜೆಪಿಯಲ್ಲಿ ಅಸಮಧಾನದ ಹೊಗೆ.. ಪಕ್ಷಾಂತರಿಗಳಿಗೆ ಮೂರು ಪಕ್ಷಗಳಲ್ಲೂ ಮಣೆ : ಪ್ರಭಾವಿಗಳ ನಾಮಪತ್ರ ಸಲ್ಲಿಕೆ

  ಚಿತ್ರದುರ್ಗ:

      ಇದೇ ತಿಂಗಳ 29ರಂದು ನಡೆಯಲಿರುವ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಪ್ರಮುಖ ಮೂರು ರಾಜಕೀಯ ಪಕ್ಷಗಳಲ್ಲಿ ಟಿಕೆಟ್ ಫೈಟ್ ಇನ್ನೂ ಕೊನೆಗೊಂಡಿಲ್ಲ. ಇಂದು ನಾಮ ಪತ್ರ ಸಲ್ಲಿಕೆಗೆ ಕೊನೆಯ ದಿನಾಂಕವಾಗಿದ್ದರೂ ಟಿಕೆಟ್ ಹಂಚಿಕೆ ಪ್ರಕ್ರಿಯೆ ಪೂರ್ಣಗೊಂಡಿಲ್ಲ. ಟಿಕೆಟ್‍ಗಾಗಿ ತೀವ್ರತರಹದ ಲಾಭಿ ಶುರುವಾಗಿರುವ ಕಾರಣ ಗುರುವಾರವೂ ಈ ಪ್ರಕ್ರಿಯೆ ಪೂರ್ಣಪ್ರಮಾಣದಲ್ಲಿ ನಡೆದಿಲ್ಲ.

      ಬಾರತೀಯ ಜನತಾ ಪಾರ್ಟಿ ಹಾಗೂ ಕಾಂಗ್ರೆಸ್‍ನಲ್ಲಿ ಟಿಕೆಟ್ ಆಕಾಂಕ್ಷಿಗಳ ಲಾಭಿ ದೊಡ್ಡಮಟ್ಟದಲ್ಲಿ ನಡೆದಿದೆ. ಕೆಲವು ಮಾಜಿ ಅಧ್ಯಕ್ಷರು, ಹಾಲಿ ಸದಸ್ಯರುಗಳು ಹಾಗೂ ಬೆರಳೆಣಿಕೆಯಷ್ಟು ಪ್ರಭಾವಿಗಳನ್ನು ಹೊರೆತು ಪಡಿಸಿ ಉಳಿದ ಬಹುತೇಕ ವಾರ್ಡ್‍ಗಳಲ್ಲಿ ಅಭ್ಯರ್ಥಿಗಳನ್ನು ಅಂತಿಮಗೊಳಿಸಲು ಸಾಧ್ಯವಾಗಿಲ್ಲ. ಸ್ಥಳೀಯ ನಾಯಕರ ಮೇಲೆ ರಾಜ್ಯಮಟ್ಟದ ನಾಯಕರ ಒತ್ತಡವೂ ಟಿಕೆಟ್‍ಗಾಗಿ ಹೆಚ್ಚುತ್ತಿದೆ. ಕೆಲವು ವಾರ್ಡ್‍ಗಳಲ್ಲಿ ಅಭ್ಯರ್ಥಿಗಳ ಆಯ್ಕೆ ವಿಚಾರದಲ್ಲಿ ಗೊಂದಲ ಸೃಷ್ಟಿಯಾಗಿದ್ದು, ಬಂಡಾಯದ ಹೊಗೆಯಾಡುತ್ತಿದೆ.

      ಕಾಂಗ್ರೆಸ್ ಮತ್ತು ಬಿಜೆಪಿ ಈ ಚುನಾವಣೆಯನ್ನು ಸವಾಲಾಗಿ ಸ್ವೀಕರಿಸಿರುವಂತೆ ಕಾಣುತ್ತಿದೆ. ಈ ಬಾರಿ ನಗರಸಭೆಯಲ್ಲಿ ಆಡಳಿತ ಸ್ಥಾಪನೆಯ ಕನಸು ಎರಡೂ ಪಕ್ಷಗಳಿಗಿದೆ. ಈ ಕಾರಣಕ್ಕಾಗಿಯೇ ಗೆಲ್ಲುವ ಸಾಮಥ್ರ್ಯ ಇರುವ ಅಭ್ಯರ್ಥಿಗಳಿಗೆ ಮಣೆಹಾಕಲಾಗುತ್ತಿದೆ.ಕಾಂಗ್ರೆಸ್ ಮತ್ತು ಬಿಜೆಪಿಯಲ್ಲಿ ಟಿಕೆಟ್‍ಗೆ ಹೆಚ್ಚಿನ ಬೇಡಿಕೆ ಇದೆ. ಎರಡೂ ಪಕ್ಷಗಳ ನಾಯಕರು ಈ ಬಾರಿ ಪಕ್ಷಾಂತರಿಗಳಿಗೆ ಮಣೆಹಾಕುತ್ತಿವೆ.

      ದಶಕಗಳ ಕಾಲ ಪಕ್ಷಕ್ಕಾಗಿ ದುಡಿದಿರುವ ನಿಷ್ಟಾವಂತ ಕಾರ್ಯಕರ್ತರಿಗೆ ಸ್ಥಳೀಯ ಮುಖಂಡರ ನಡವಳಿಕೆಗಳು ಬೇಸರ ತರಿಸಿದೆ. ನಿನ್ನೆ ಮೊನ್ನೆಯವರೆಗೂ ಬೇರೆ ಪಕ್ಷಗಳಲ್ಲಿ ಇದ್ದವರನ್ನು ಕರೆತಂದು ಟಿಕೆಟ್ ಕೊಟ್ಟಿರುವುದು ಹಲವರ ಅಸಮಧಾನಕ್ಕೆ ಕಾರಣವಾಗಿದೆ.
ಶುಕ್ರವಾರ ನಾಮಪತ್ರ ಸಲ್ಲಿಕೆಗೆ ಕೊನೆಯ ದಿನಾಂಕವಾಗಿದ್ದು, ತಡರಾತ್ರಿಯ ಹೊತ್ತಿಗೆ ಟಿಕೆಟ್ ಹಂಚಿಕೆ ಪ್ರಕ್ರಿಯೆ ಪೂರ್ಣಗೊಳ್ಳಲಿದೆ. ಟಿಕೆಟ್ ಸಿಗದ ಬಹುತೇಕ ಆಕಾಂಕ್ಷಿಗಳು ಪಕ್ಷದ ಅಭ್ಯರ್ಥಿಗಳ ವಿರುದ್ದ ಬಂಡಾಯ ಸಾರುವ ಸಾಧ್ಯತೆಗಳನ್ನು ತಳ್ಳಿಹಾಕುವಂತಿಲ್ಲ.

ಸರ್ದಾರ್ ನಾಮಪತ್ರ ಸಲ್ಲಿಕೆ:

      ನಗರಸಭೆ ಮಾಜಿ ಅಧ್ಯಕ್ಷ ಹಾಗೂ ಕಾಂಗ್ರೆಸ್ಸಿನ ಪ್ರಭಾವಿ ಮುಖಂಡ ಮಹಮದ್ ಅಹಮದ್ ಪಾಷ ಅವರು ಗುರುವಾರದಂದು 23ನೇ ವಾರ್ಡಿಗೆ ಕಾಂಗ್ರೆಸ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದರು.

      ಸತತವಾಗಿ ಮೂರು ಬಾರಿ ನಗರಸಭೆಗೆ ಆಯ್ಕೆಯಾಗಿರುವ ಅವರು ಈಗ ನಾಲ್ಕನೇ ಬಾರಿಗೆ ಅಖಾಡಕ್ಕಿಳಿಯುತ್ತಿದ್ದಾರೆ. ಗುರುವಾರದಂದು ತಮ್ಮ ಅಪಾರ ಬೆಂಬಲಿಗರೊಂದಿಗೆ ತೆರಳಿ ತಮ್ಮ ನಾಮಪತ್ರವನ್ನು ಸಲ್ಲಿಸಿದರು.
ಈ ಸಂದರ್ಭಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅಹಮದ್ ಮಹಮದ್ ಪಾಷ (ಸರ್ದಾರ್) ಅವರು, ಜನರ ಒತ್ತಾಸೆಯ ಮೇರೆಗೆ ಈ ಬಾರಿ ಚುನಾವಣಗೆ ಸ್ಪರ್ದಿಸುತ್ತಿದ್ದೇನೆ. ದಶಕಗಳ ಕಾಲ ಕಾಂಗ್ರೆಸ್‍ನಲ್ಲಿ ದುಡಿದ್ದೇನೆ. ಪಕ್ಷದ ನಾಯಕರು ಕರೆದು ಟಿಕೆಟ್ ಕೊಟ್ಟಿದ್ದಾರೆ ಎಂದು ಹೇಳಿದರು.

      ಮೂರು ಬಾರಿ ಸದಸ್ಯನಾಗಿ ನಗರದ ಅಭಿವೃದ್ದಿಗೆ ಕೈಜೋಡಿಸಿದ್ದೇನೆ. ನನ್ನ ಅವಧಿಯಲ್ಲಿ ಯಾವುದೇ ಅಪವಾದನೆ ಇಲ್ಲದಂತೆ ಪ್ರಾಮಾಣಿಕವಾಗಿ ಕೆಲಸ ಮಾಡಿದ್ದೇನೆ. ಈ ಚುನಾವಣೆಯಲ್ಲಿಯೂ ಜನರ ಆಶೀರ್ವಾದ ಸಿಗಲಿದೆ. ನಗರದ ಅಭಿವೃದ್ದಿಗೆ ಎಲ್ಲಾ ರೀತಿಯಲ್ಲೂ ಶ್ರಮಿಸುವುದಾಗಿ ಭರವಸೆ ನೀಡಿದರು.

ಪ್ರಮುಖರ ನಾಮಪತ್ರ ಸಲ್ಲಿಕೆ:

      ನಗರಸಭೆ ಚುನಾವಣೆಗೆ ಸ್ಪರ್ಧೆ ಬಯಸಿ ಮಾಜಿ ಅಧ್ಯಕ್ಷರು ಹಾಗೂ ಸದಸ್ಯರುಗಳು ಸ್ಟೇಡಿಯಂ ಸಮೀಪವಿರುವ ಜಿಲ್ಲಾ ಬಾಲಭವನದಲ್ಲಿ ಗುರುವಾರ ನಾಮಪತ್ರಗಳನ್ನು ಸಲ್ಲಿಸಿದರು.
ನಗರಸಭೆ ಮಾಜಿ ಅಧ್ಯಕ್ಷ ಡಿ.ಮಲ್ಲಿಕಾರ್ಜುನ್(ಪೊಲೀಸ್) ಹದಿನೈದನೆ ವಾರ್ಡ್ ಅಭ್ಯರ್ಥಿಯಾಗಿ ಅಪಾರ ಬೆಂಬಲಿಗರೊಂದಿಗೆ ತೆರಳಿ ಚುನಾವಣಾಧಿಕಾರಿಗೆ ನಾಮಪತ್ರ ಸಲ್ಲಿಸಿದರು.

      ನಗರಸಭೆಗೆ ಒಂದು ಬಾರಿ ಉಪಾಧ್ಯಕ್ಷ ಮತ್ತೊಂದು ಬಾರಿಗೆ ಅಧ್ಯಕ್ಷರಾಗಿದ್ದ ಹೆಚ್.ಸಿ.ನಿರಂಜನಮೂರ್ತಿ ಎಂಟನೆ ವಾರ್ಡ್‍ನಿಂದ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದರು.

      ಹಲವಾರು ವರ್ಷಗಳಿಂದಲೂ ಬಿಜೆಪಿ.ಯಲ್ಲಿ ನಿಷ್ಠಾವಂತ ಕಾರ್ಯಕರ್ತನಾಗಿ ಈಗ ನಗರ ಮಂಡಲ ಅಧ್ಯಕ್ಷರಾಗಿರುವ ಪಿ.ಲೀಲಾಧರ ಠಾಕೂರ್ ಪಕ್ಷೇತರ ಅಭ್ಯರ್ಥಿಯಾಗಿ ಎಂಟನೆ ವಾರ್ಡ್‍ನಿಂದ ನಾಮಪತ್ರವನ್ನು ಸಲ್ಲಿಸಿದರು.

      21 ನೇ ವಾರ್ಡ್‍ನಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸಿ.ಶೃತಿ ನಾಮಪತ್ರ ಸಲ್ಲಿಸಿದರು. ಹನ್ನೆರಡನೆ ವಾರ್ಡ್‍ನಿಂದ ಶಕೀಲಾಭಾನು ಉಮೇದುವಾರಿಕೆಯನ್ನು ಸಲ್ಲಿಸಿದರು. 25 ನೇ ವಾರ್ಡ್‍ನಿಂದ ಜೆಡಿಎಸ್.ಅಭ್ಯರ್ಥಿಯಾಗಿ ಮಹಮದ್ ಜೈನುಲ್ಲಾಬ್ದೀನ್ ಅಪಾರ ಬೆಂಬಲಿಗರೊಂದಿಗೆ ತೆರಳಿ ನಾಮಪತ್ರವನ್ನು ಸಲ್ಲಿಸಿದರು.

      ಏಳೆಳು ವಾರ್ಡ್‍ಗಳಿಗೆ ಒಂದೊಂದು ಕೊಠಡಿಯಲ್ಲಿ ಒಟ್ಟು ಐದು ಕೊಠಡಿಗಳಲ್ಲಿ ಅಭ್ಯರ್ಥಿಗಳಿಂದ ನಾಮಪತ್ರಗಳನ್ನು ಸ್ವೀಕರಿಸಲಾಯಿತು.

     ಬೆಳಗಿನಿಂದ ಸುರಿಯುತ್ತಿರುವ ಜಡಿಮಳೆಯನ್ನು ಲೆಕ್ಕಿಸದೆ ಅಭಿಮಾನಿಗಳು ತಮ್ಮ ತಮ್ಮ ವಾರ್ಡ್‍ಗಳ ಸ್ಪರ್ಧಾಳುಗಳನ್ನು ನಾಮಪತ್ರ ಸಲ್ಲಿಕೆ ವೇಳೆ ಹೆಗಲ ಮೇಲೆ ಎತ್ತಿಕೊಂಡು ಸಾಗಿ ಬೆಂಬಲ ವ್ಯಕ್ತಪಡಿಸುತ್ತಿದ್ದರು. ಅಂಬೇಡ್ಕರ್ ವೃತ್ತದಿಂದ ಹಿಡಿದು ಅಲ್ಲಲ್ಲಿ ಅಭಿಮಾನಿಗಳು ಪಟಾಕಿಗಳನ್ನು ಸಿಡಿಸಿ ಇನ್ನೇನು ಚುನಾವಣೆಯಲ್ಲಿ ಗೆದ್ದೆಬಿಟ್ಟಿದ್ದಾರೇನೋ ಎನ್ನುವಂತೆ ಕುಣಿದು ಸಂಭ್ರಮಿಸುತ್ತಿದ್ದರು. ಮತ್ತೆ ಕೆಲವರು ಸಂವಿಧಾನಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ ನಾಮಪತ್ರ ಸಲ್ಲಿಕೆಗೆ ಹೊರಟರು. ಡೊಳ್ಳು, ತಮಟೆ ವಾದ್ಯಗಳಿಗೆ ಅಭಿಮಾನಿಗಳು ಕುಣಿದು ಕುಪ್ಪಳಿಸಿದರು.

 ನಗರಸಭೆಗೆ 67 ನಾಮಪತ್ರ ಸಲ್ಲಿಕೆ:

      ಚಿತ್ರದುರ್ಗ ನಗರಸಭೆಗೆ ಗುರುವಾರ ಒಟ್ಟು 67 ನಾಮಪತ್ರಗಳು ಸಲ್ಲಿಕೆಯಾಗಿವೆ. ಸಲ್ಲಿಕೆಯಾದ 67 ನಾಮಪತ್ರಗಳಲ್ಲಿ 19 ಕಾಂಗ್ರೆಸ್, 8 ಬಿ.ಜೆ.ಪಿ, 7 ಜೆ.ಡಿ.ಎಸ್, ಹಾಗೂ 33 ಪಕ್ಷೇತರ ಅಭ್ಯರ್ಥಿಗಳಿಂದ ಸಲ್ಲಿಕೆಯಾಗಿವೆ.

      ವಾರ್ಡ್ 1 ರಲ್ಲಿ ಪಕ್ಷೇತರ 1, ವಾರ್ಡ್ 2 ಮತ್ತು 3 ರಲ್ಲಿ ಕಾಂಗ್ರೆಸ್, ಜೆಡಿಎಸ್ ಹಾಗೂ ಪಕ್ಷೇತರ ತಲಾ ಒಂದರಂತೆ, ವಾರ್ಡ್ 4 ರಲ್ಲಿ ಕಾಂಗ್ರೆಸ್ ಹಾಗೂ ಪಕ್ಷೇತರರಿಂದ ತಲಾ ಒಂದು, ವಾರ್ಡ್ 5 ರಲ್ಲಿ ಕಾಂಗ್ರೆಸ್ 2, ಪಕ್ಷೇತರ ಒಂದು, ವಾರ್ಡ್ 6 ರಲ್ಲಿ ಕಾಂಗ್ರೆಸ್, ಬಿಜೆಪಿ, ಪಕ್ಷೇತರಿಂದ ತಲಾ ಒಂದು ನಾಮಪತ್ರ ಸಲ್ಲಿಕೆಯಾಗಿದೆ.

      ವಾರ್ಡ್ 8 ರಲ್ಲಿ ಬಿಜೆಪಿ ಒಂದು, ಪಕ್ಷೇತರ 3, ವಾರ್ಡ್ 9 ಕಾಂಗ್ರೆಸ 1, ವಾರ್ಡ್ 10 ರಲ್ಲಿ ಪಕ್ಷೇತರ 1, ವಾರ್ಡ್ 11ರಲ್ಲಿ ಕಾಂಗ್ರೆಸ್ 1, ಪಕ್ಷೇತರ 1, ವಾರ್ಡ್ 12 ರಲ್ಲಿ ಪಕ್ಷೇತರ 1, ವಾರ್ಡ್ 13 ಕಾಂಗ್ರೆಸ್‍ನಿಂದ 1, ವಾರ್ಡ್ 14 ಕಾಂಗ್ರೆಸ್ 1, ಪಕ್ಷೇತರ 2, ವಾರ್ಡ್ 15 ರಲ್ಲಿ ಕಾಂಗ್ರೆಸ್ 1, ಪಕ್ಷೇತರ 2, ವಾರ್ಡ್ 16 ರಲ್ಲಿ ಕಾಂಗ್ರೆಸ್ 1, ವಾರ್ಡ್ 17 ಬಿ.ಜೆ.ಪಿ,. ಪಕ್ಷೇತರ ತಲಾ ಒಂದು, ವಾರ್ಡ್ 20 ರಲ್ಲಿ ಪಕ್ಷೇತರರಿಂದ ಒಂದು, ವಾರ್ಡ್ 21 ರಲ್ಲಿ ಕಾಂಗ್ರೆಸ್ 1, ವಾರ್ಡ್ 23 ರಲ್ಲಿ ಕಾಂಗ್ರೆಸ್ 1, ಪಕ್ಷೇತರ 2, ವಾರ್ಡ್ 24 ರಲ್ಲಿ ಕಾಂಗ್ರೆಸ್ 1, ಹಾಗೂ ಪಕ್ಷೇತರ ಒಂದು ನಾಮಪತ್ರ ಸಲ್ಲಿಕೆಯಾಗಿದೆ.

      ವಾರ್ಡ್ 25 ರಲ್ಲಿ ಕಾಂಗ್ರೆಸ್ 1, ಜೆ.ಡಿ.ಎಸ್ 1, ಪಕ್ಷೇತರ 3, ವಾರ್ಡ್ 26 ರಲ್ಲಿ ಪಕ್ಷೇತರ ಒಂದು, ವಾರ್ಡ್ 27 ರಲ್ಲಿ ಕಾಂಗ್ರೆಸ್, ಜೆಡಿಎಸ್‍ನಿಂದ ತಲಾ ಒಂದು, ಪಕ್ಷೇತರ ಒಂದು, ವಾರ್ಡ್ 28 ರಲ್ಲಿ ಬಿಜೆಪಿಯಿಂದ ಒಂದು, ವಾರ್ಡ್ 29 ಹಾಗೂ 30 ರಲ್ಲಿ ಬಿಜೆಪಿಯಿಂದ ತಲಾ ಒಂದು, ಹಾಗೂ ಪಕ್ಷೇತರರಿಂದ ತಲಾ 2, ವಾರ್ಡ್ 32 ರಲ್ಲಿ ಬಿ.,ಜೆ.ಪಿ., ಜೆಡಿಎಸ್‍ನಿಂದ ತಲಾ ಒಂದು, ವಾರ್ಡ್ 34 ರಲ್ಲಿ ಜೆಡಿಎಸ್‍ನಿಂದ 1, ಪಕ್ಷೇತರ 2 ಹಾಗೂ ವಾರ್ಡ್ 35 ರಲ್ಲಿ ಕಾಂಗ್ರೆಸ್ ಪಕ್ಷದಿಂದ ಒಂದು ನಾಮಪತ್ರ ಸಲ್ಲಿಕೆಯಾಗಿವೆ.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link