ಬೆಂಗಳೂರು: ಸೋನಿಯಾ ಗಾಂಧಿ ರವರು ದೆಹಲಿಯ ಗಂಗಾರಾಮ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಶ್ವಾಸನಾಳ ಸೋಂಕು ಹೆಚ್ಚುತ್ತಿದೆ ಎಂದು ಕಾಂಗ್ರೆಸ್ ಪಕ್ಷದ ಅಧಿಕೃತ ಪ್ರಕಟಣೆ ತಿಳಿಸಿದೆ. ಸೋನಿಯಾ ಗಾಂಧಿ ಕಳೆದ ಐದು ದಿನಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಚಿಕ್ಕ ಶಸ್ತ್ರಚಿಕಿತ್ಸೆಗೂ ಅವರು ಒಳಗಾಗಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಎಐಸಿಸಿ ಮುಖ್ಯಸ್ಥೆ ಸೋನಿಯಾ ಗಾಂಧಿ ಕೋವಿಡ್ ಪಾಸಿಟಿವ್ ಆದ ಬೆನ್ನಲ್ಲೇ ಆಸ್ಪತ್ರೆಗೆ ದಾಖಲಾಗಿದ್ದರು. ಅವರ ಆರೋಗ್ಯದಲ್ಲಿ ಈಗ ಸಮಸ್ಯೆ ಕಾಣಿಸಿಕೊಂಡಿದ್ದು ಶ್ವಾಸನಾಳ ಸೋಂಕು ಹೆಚ್ಚಿದೆ ಎಂದು ಕಾಂಗ್ರೆಸ್ ಪಕ್ಷ ತಿಳಿಸಿದೆ. ಕೋವಿಡ್ ನಂತರದ ಸಿಂಪ್‍ಟಮ್ಸ್ ಅವರಲ್ಲಿ ಹೆಚ್ಚಾಗಿದ್ದು, ಅವರಿಗೆ ಚಿಕಿತ್ಸೆ ಮುಂದುವರೆಸಲಾಗಿದೆ. ಇದೇ ಕಾರಣಕ್ಕೆ ರಾಹುಲ್ ಗಾಂಧಿ ಕೂಡ ಜಾರಿ ನಿರ್ದೇಶನಾಲಯದ ವಿಚಾರಣೆಗೆ ಇಂದು ಹಾಜರಾಗಲು ಸಾಧ್ಯವಿಲ್ಲ ಎಂದು ಮನವಿ ಮಾಡಿದ್ದರು. ಈಗ ಪಕ್ಷ ಅಧಿಕೃತ ಹೇಳಿಕೆ ಬಿಡುಗಡೆ ಮಾಡಿದ್ದು, ಸೋನಿಯಾ ಗಾಂಧಿ ಚೇತರಿಕೆಯಾಗಿಲ್ಲ ಎಂದು ತಿಳಿಸಿದೆ. ಜೂನ್ 12ರಂದು ಸೋನಿಯಾ ಗಾಂಧಿ ನವದೆಹಲಿಯ ಗಂಗಾರಾಮ್ ಆಸ್ತ್ರೆಗೆ ದಾಖಲಾಗಿದ್ದರು. ಜೂನ್ 1ರಂದು ಕೊರೋನಾ ವೈರಸ್ ಪರೀಕ್ಷೆಯಲ್ಲಿ ಅವರಿಗೆ ಪಾಸಿಟಿವ್ ಫಲಿತಾಂಶ ಬಂದಿತ್ತು. ನಂತರ ಮನೆಯಲ್ಲೇ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಆರೋಗ್ಯ ಸಮಸ್ಯೆ ಹೆಚ್ಚಾದ ಹಿನ್ನೆಲೆ ಆಸ್ಪತ್ರೆಗೆ ದಾಖಲಾಗಿದ್ದರು.
ಆಸ್ಪತ್ರೆ ವೈದ್ಯಾಧಿಕಾರಿಗಳ ಮಾಹಿತಿ ಪ್ರಕಾರ ಅವರ ಮೂಗಿನಲ್ಲಿ ರಕ್ತ ಬರುತ್ತಿತ್ತು, ಈ ಹಿನ್ನೆಲೆ ಅವರಿಗೆ ಆಪರೇಷನ್ ಕೂಡ ಮಾಡಲಾಗಿದೆ. ಜೂನ್ 23ರಂದು ಜಾರಿ ನಿರ್ದೇಶನಾಲಯ ಸೋನಿಯಾ ಗಾಂಧಿಯವರಿಗೆ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ನೀಡಿದೆ. ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ರಾಹುಲ್ ಗಾಂಧಿ ಮತ್ತು ಸೋನಿಯಾ ಇಬ್ಬರಿಗೂ ಇ.ಡಿ. ಸಮನ್ಸ್ ಜಾರಿ ಮಾಡಿತ್ತು. ಆದರೆ ಸೋನಿಯಾ ಗಾಂಧಿಯವರಿಗೆ ಕೊರೋನಾ ಬಂದ ಕಾರಣ ರಾಹುಲ್ ಗಾಂಧಿ ಮಾತ್ರ ಹಾಜರಾಗಿದ್ದರು. ಮೂರು ದಿನಗಳ ಕಾಲ ಜಾರಿ ನಿರ್ದೇಶನಾಲಯ ರಾಹುಲ್ ಗಾಂಧಿ ಅವರ ವಿಚಾರಣೆ ನಡೆಸಿದೆ.