ಕಾಡು ಗೊಲ್ಲ ಸಮುದಾಯದಲ್ಲಿ ಯಾವುದೇ ರೀತಿಯ ಭಿನ್ನಮತಗಳಿಲ್ಲ : ಶಾಸಕಿ

ಶಿರಾ:

   ಶಿರಾ ತಾಲೂಕಿನ ಚಂಗಾವರ ಮಾರಣ್ಣ ಅವರನ್ನು ರಾಜ್ಯ ಕಾಡುಗೊಲ್ಲ ಅಭಿವೃದ್ಧಿ ನಗಮದ ಅಧ್ಯಕ್ಷರನ್ನಾಗಿ ರಾಜ್ಯ ಸರ್ಕಾರ ಮರು ನೇಮಕ ಮಾಡಿದೆ ಎಂದು ಹಿರಿಯೂರು ಶಾಸಕಿ ಪೂರ್ಣಿಮಾ ಶ್ರೀನಿವಾಸ್ ತಿಳಿಸಿದರು.

   ನಗರದ ಪ್ರವಾಸಿ ಮಂದಿರದಲ್ಲಿ ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಈ ಹಿಂದೆ ರಾಜ್ಯ ಸರ್ಕಾರವು ಮಾರಣ್ಣ ಅವರನ್ನು ಕಾಡುಗೊಲ್ಲ ನಿಗಮದ ಅಧ್ಯಕ್ಷರನ್ನಾಗಿ ನೇಮಕ ಮಾಡಿ ಆದೇಶ ನೀಡಿದಾಗ ಹಲವು ಕಾರಣಗಳಿಂದ ಅವರ ನೇಮಕಾತಿ ಆದೇಶವನ್ನು ತಡೆ ಹಿಡಿಯಲಾಗಿತ್ತು ಎಂದರು.

    ಸದರಿ ನಿಗಮ ಮಂಡಳಿಯ ಅಧ್ಯಕ್ಷ ಸ್ಥಾನಕ್ಕೆ ಮತ್ತೊಬ್ಬರು ಸರ್ಕಾರದ ಮೇಲೆ ಒತ್ತಡ ಹೇರಿದ ಪರಿಣಾಮ ನೇಮಕಾತಿ ಆದೇಶ ಹೊರ ಬೀಳಲು ತಡವಾಗಿದೆ. ನಾನು, ನನ್ನ ಪತಿ ಶ್ರೀನಿವಾಸ್ ಆಗಲಿ ಇಡೀ ನಮ್ಮ ಕುಟುಂಬವೇ ಆಗಲಿ ಸಮಾಜದ ವಿರುದ್ಧವಿಲ್ಲ. ನಿಗಮದ ಅಧ್ಯಕ್ಷ ಸ್ಥಾನ ನೇಮಕಾತಿಯ ವಿಷಯದಲ್ಲಿ ನನ್ನ ಹಸ್ತಕ್ಷೇಪವಿದೆ ಎಂಬ ಆರೋಪ ಸುಳ್ಳು. ಈಗ ಆ ಎಲ್ಲಾ ಸಮಸ್ಯೆಗಳು ಬಗೆಹರಿದಿದ್ದು ಚಂಗಾವರ ಮಾರಣ್ಣ ಅವರನ್ನು ನಿಗಮದ ಅಧ್ಯಕ್ಷರನ್ನಾಗಿ ಸರ್ಕಾರ ನೇಮಕ ಮಾಡಿದೆ ಎಂದರು.

    ಕಾಡು ಗೊಲ್ಲ ಸಮುದಾಯದಲ್ಲಿ ಯಾವುದೇ ರೀತಿಯ ಭಿನ್ನಮತಗಳಿಲ್ಲ. ಸಮಾಜದ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ನೇಮಕಾತಿ ಮಾಡಲಾಗಿದ್ದು ಈ ನೇಮಕಾತಿ ಆದೇಶ ಹೊರ ಬೀಳುವುದರಲ್ಲಿ ಸ್ವಲ್ಪ ತಡವಾಗಿದೆ. ನಾಳೆಯೇ ಅವರು ಅಧಿಕಾರ ಸ್ವೀಕರಿಸಿ ಕಾಡುಗೊಲ್ಲ ಸಮುದಾಯದ ಅಭಿವೃದ್ಧಿಗೆ ಒತ್ತು ನೀಡಲಿದ್ದಾರೆ ಎಂದು ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಹೇಳಿದರು.

    ಡಾ.ಸಿ.ಎಂ.ರಾಜೇಶ್‍ಗೌಡ ಮಾತನಾಡಿ ನಿಗಮದ ಅಧ್ಯಕ್ಷರ ಆಯ್ಕೆಯಿಂದ ರಾಜ್ಯ ಸರ್ಕಾರ ಕೊಟ್ಟ ಮಾತಿನಂತೆ ನಡೆದಿದೆ. ಸದರಿ ನಿಗಮಕ್ಕೆ ಸರ್ಕಾರ 17 ಕೋಟಿ ರೂಗಳನ್ನು ಮೀಸಲಿಟ್ಟಿದ್ದು ತಾಲೂಕಿನ 78 ಗೊಲ್ಲರಹಟ್ಟಿಗಳಿಗೆ ರಸ್ತೆ ಹಾಗೂ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲಾಗಿದೆ ಎಂದರು.ಕಾಡುಗೊಲ್ಲ ಅಭಿವೃದ್ಧಿ ನಿಗಮದ ಅಧ್ಯಕ್ಷ ಚಂಗಾವರ ಮಾರಣ್ಣ ಸೇರಿದಂತೆ ಕಾಡುಗೊಲ್ಲ ಸಮುದಾಯದ ಅನೇಕ ಮುಖಂಡರು ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು.

 

Recent Articles

spot_img

Related Stories

Share via
Copy link
Powered by Social Snap