ಚಳ್ಳಕೆರೆ
ಸಮಾಜದ ಪ್ರತಿಯೊಂದು ಆಯಾಮಗಳಲ್ಲೂ ಕಾನೂನಿನ ಛಾಯೆ ಅಡಕವಾಗಿದೆ. ಕಾನೂನನ್ನು ಹೊರತು ಪಡಿಸಿದ ಎನ್ನನ್ನೂ ಮಾಡಲು ಸಾಧ್ಯವಿಲ್ಲ. ಇಂದು ನಾವೆಲ್ಲರೂ ನಮ್ಮದೇಯಾದ ಸ್ವಾತಂತ್ರ್ಯವನ್ನು ಹೊಂದಿ ನಮ್ಮದೇಯಾದ ಬದುಕನ್ನು ರೂಪಿಸಿಕೊಂಡಿದ್ದರೂ ನಮ್ಮೆಲ್ಲರ ಬದುಕಿನಲ್ಲೂ ಸಹ ಉತ್ತಮ ಬಾಳ್ವೆ ನಡೆಸಲು ಕಾನೂನಿನ ಸಹಕಾರ ಬೇಕು. ಕಾನೂನು ನಮ್ಮೆಲ್ಲರಿಗೂ ರಕ್ಷಾ ಕವಚವಿದ್ದಂತೆ ಎಂದು ಇಲ್ಲಿನ ಹಿರಿಯ ನ್ಯಾಯಾಲಯದ ಹಿರಿಯ ನ್ಯಾಯಾಧೀಶ ದೇವೇಂದ್ರ ಪಂಡಿತ್ ತಿಳಿಸಿದರು.
ಅವರು, ಶನಿವಾರ ತಾಲ್ಲೂಕಿನ ಪರಶುರಾಮಪುರ ಹೋಬಳಿಯ ದೊಣೆಹಳ್ಳಿ ಗ್ರಾಮದಲ್ಲಿ ತಾಲ್ಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ಗ್ರಾಮ ಪಂಚಾಯಿತಿ ಆಡಳಿತ ಹಾಗೂ ಮಹಿಳಾ ಸಮಾಖ್ಯಾ ಯೋಜನೆಯಡಿ ಹಮ್ಮಿಕೊಂಡಿದ್ದ ಕಾನೂನು ಅರಿವು ಕಾರ್ಯಗಾರವನ್ನು ಉದ್ಘಾಟಿಸಿ ಮಾತನಾಡಿದರು. ಕಾನೂನನ್ನು ಅರಿತು ನಡೆದರೆ ನಾವು ಸುಖಿ ಜೀವಿಗಳಾಗುತ್ತೇವೆ. ಕಾನೂನಿನ ಎಲ್ಲೆ ಮೀರಿದರೆ ಮಾತ್ರ ನಮಗೆ ಅಪಾಯ ಕಟ್ಟಿಟ್ಟ ಬುತ್ತಿ. ಹಾಗಾಗಿ ಪ್ರತಿಯೊಬ್ಬರೂ ಕಾನೂನಿನ ಪರಿಪಾಲಕರಾಗಬೇಕು ಎಂದು ಅವರು ತಿಳಿಸಿದರು.
ಅಪರ ಸಿವಿಲ್ ನ್ಯಾಯಾಧೀಶ ಕೋಟೆಪ್ಪ ಕಾಂಭ್ಳೆ ಮಾತನಾಡಿ, ನ್ಯಾಯಾಂಗ ಇಲಾಖೆ ಇಂದು ಗ್ರಾಮೀಣ ಭಾಗಗಳಲ್ಲಿ ಕಾನೂನಿನ ಜಾಗೃತಿಯನ್ನು ಮೂಡಿಸುವ ಮುಗ್ಧ ಜನರು ಅನವಶ್ಯಕವಾಗಿ ಕಾನೂನಿನ ಸಮಸ್ಯೆಗೆ ಸಿಲುಕಿ ಅಪಾಯವನ್ನು ಎದುರಿಸುವ ಸ್ಥಿತಿಯನ್ನು ನಿವಾರಣೆ ಮಾಡಲು ಇಂತಹ ಕಾರ್ಯಕ್ರಮಗಳು ಸಹಾಯಕವಾಗಿವೆ. ಇತ್ತೀಚಿನ ದಿನಗಳಲ್ಲಿ ಕಾನೂನಿನ ಅಂಜಿಕೆಯಿಂದಲೇ ಬಹುತೇಕ ಪ್ರಕರಣಗಳು ನಿಯಂತ್ರಣಕ್ಕೆ ಬರುತ್ತಿವೆ ಎಂದು ಅವರು ತಿಳಿಸಿದರು.
ತಾಲ್ಲೂಕು ಪಂಚಾಯಿತಿ ಸದಸ್ಯ ತಿಮ್ಮಾರೆಡ್ಡಿ ಮಾತನಾಡಿ, ಗ್ರಾಮೀಣ ಭಾಗಗಳಲ್ಲಿ ಇಂತಹ ಕಾರ್ಯಕ್ರಮಗಳು ಜನರಿಗೆ ಉತ್ತಮ ಮಾರ್ಗದರ್ಶನವಾಗುತ್ತವೆ. ಬಹುತೇಕ ಜನರಿಗೆ ಕಾನೂನಿನಿಂದ ಆಗುವ ಶಿಕ್ಷೆಯ ಬಗ್ಗೆ ಯಾವುದೇ ರೀತಿಯ ಅರಿವು ಇರುವುದಿಲ್ಲ. ಇಂತಹ ಕಾರ್ಯಕ್ರಮಗಳು ಜನರಿಗೆ ಕಾನೂನಿನ ಬಗ್ಗೆ ಇರುವ ಪ್ರಾಮಾಣಿಕತೆಯನ್ನು ಮತ್ತಷ್ಟು ಗಟ್ಟಿಗೊಳಿಸುತ್ತವೆ ಎಂದರು.
ಕಾರ್ಯಕ್ರಮದಲ್ಲಿ ತಾಲ್ಲೂಕು ವಕೀಲರ ಸಂಘದ ಕಾರ್ಯದರ್ಶಿ ಎನ್.ತಿಪ್ಪೇಸ್ವಾಮಿ, ವಕೀಲರಾದ ಮಧುಮತಿ, ಗ್ರಾಮ ಪಂಚಾಯಿತಿ ಅಧ್ಯಕ್ಷರು, ಸದಸ್ಯರು, ಶಾಲೆಯ ಶಿಕ್ಷಕರ ವೃಂದ ಮತ್ತು ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.