ತುಮಕೂರು:
ವಾಹನಗಳ ಚಾಲನೆ ಸಂದರ್ಭದಲ್ಲಿ ನಾವು ಮಾಡುವ ಒಂದು ಸಣ್ಣ ತಪ್ಪು ನಮ್ಮ ಮೇಲಷ್ಟೇ ಪರಿಣಾಮ ಬೀರುವುದಿಲ್ಲ. ಇಡೀ ಕುಟುಂಬದ ಮೇಲೆ ಪರಿಣಾಮ ಉಂಟು ಮಾಡುತ್ತದೆ ಎಂದು ಇಲ್ಲಿನ ಪ್ರಧಾನ ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶರಾದ ರಾಜೇಂದ್ರ ಬದಾಮಿಕರ್ ತಿಳಿಸಿದರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘ, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಇವುಗಳ ಸಂಯುಕ್ತಾಶ್ರಯದಲ್ಲಿ ಅಂತರಸನಹಳ್ಳಿಯಲ್ಲಿರುವ ಸಾರಿಗೆ ನಿಗಮದ ವಿಭಾಗೀಯ ಕಛೇರಿಯಲ್ಲಿ ನಿಗಮದ ನೌಕರ ವರ್ಗದವರಿಗೆ ಆಯೋಜಿಸಿದ್ದ ಕಾನೂನು ಅರಿವು ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ವಾಹನ ಚಾಲನೆ ಮಾಡುವಾಗ ಸದಾ ಎಚ್ಚರಿಕೆಯಿಂದ ಇರಬೇಕು. ಅಪಘಾತವಾದರೆ ಇಡೀ ಕುಟುಂಬ ನರಳುತ್ತದೆ ಎಂಬ ಅರಿವು ಇರಬೇಕು. ಇದಿಷ್ಟೇ ಅಲ್ಲ, ಸಾರಿಗೆ ಸಂಸ್ಥೆಗೂ ನಷ್ಟ ಉಂಟಾಗುತ್ತದೆ. ಆದಕಾರಣ ಮೋಟಾರು ವಾಹನ ಚಾಲನೆಗೆ ಸಂಬಂಧಿಸಿದ ಕಾನೂನುಗಳ ಬಗ್ಗೆ ಎಲ್ಲರಿಗೂ ಸಂಪೂರ್ಣ ಅರಿವಿರಬೇಕು ಎಂದರು.
ಕರ್ನಾಟಕದ ರಸ್ತೆ ಸಾರಿಗೆ ನಿಗಮವು ಉತ್ತಮ ಸ್ಥಿತಿಯಲ್ಲಿದೆ. ಕೆಲವು ರಾಜ್ಯಗಳಲ್ಲಿ ಶೋಚನೀಯ ಸ್ಥಿತಿ ಇದೆ. ರಾಜ್ಯದಲ್ಲಿ ಉತ್ತಮ ಹೆಸರು ಗಳಿಸಲು ಹಾಗೂ ಪ್ರಶಸ್ತಿ ಬರಲು ಎಲ್ಲರ ಸಮೂಹಿಕ ದುಡಿಮೆ ಕಾರಣ. ಇದನ್ನು ಮುಂದುವರೆಸಿಕೊಂಡು ಹೋಗಬೇಕು. ವಿವಾದಗಳನ್ನು ಸಾಧ್ಯವಾದಷ್ಟು ಸಂಧಾನದ ಮೂಲಕವೇ ಪರಿಹರಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಸಾರಿಗೆ ನಿಗಮದ ಕೇಂದ್ರ ಕಛೇರಿಯ ಮುಖ್ಯ ಕಾನೂನು ಅಧಿಕಾರಿ ಎಸ್.ಮನೋಹರ ಅಧ್ಯಕ್ಷತೆ ವಹಿಸಿ ಮಾತನಾಡಿ ಸಾರಿಗೆ ನಿಗಮವು ಪ್ರತಿವರ್ಷ 40 ರಿಂದ 45 ಕೋಟಿ ರೂಪಾಯಿಗಳನ್ನು ಅಪಘಾತ ಪರಿಹಾರಕ್ಕಾಗಿಯೇ ನೀಡಲಾಗುತ್ತಿದೆ. ಈ ಬಗ್ಗೆ ಎಲ್ಲರೂ ಯೋಚಿಸಬೇಕಿದೆ . ಅಪಘಾತ ಆಗದಂತೆ ಏನೆಲ್ಲಾ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕೋ ಅಷ್ಟನ್ನೂ ಮಾಡಬೇಕು. ಕಾನೂನಿನ ಭಯ ಇಲ್ಲದೆ ಹೋದರೆ ಸಮಾಜದಲ್ಲಿ ತಪ್ಪುಗಳು ಹೆಚ್ಚಿದಂತೆ ಅಪಘಾತಗಳೂ ಹೆಚ್ಚುತ್ತವೆ ಎಂದರು.
ಪ್ರತಿಯೊಬ್ಬರೂ ಹಕ್ಕು ಮತ್ತು ಬಾಧ್ಯತೆಗಳ ಬಗ್ಗೆ ತಿಳಿದಿರಬೇಕು. ಜವಾಬ್ದಾರಿಗಳನ್ನು ಸಮರ್ಥವಾಗಿ ನಿರ್ವಹಿಸಿದಾಗ ಯಾವುದೇ ತಪ್ಪುಗಳಾಗಲು ಸಾಧ್ಯವಿಲ್ಲ. ಆ ಕಾರಣಕ್ಕಾಗಿ ನೌಕರ ವರ್ಗಕ್ಕೆ ಕಾನೂನಿನ ಅರಿವು ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ ಎಂದರು.
ಕೆ.ಎಸ್.ಆರ್.ಟಿ.ಸಿ. ವಿಭಾಗೀಯ ನಿಯಂತ್ರಣಾಧಿಕಾರಿ ಎ.ಎನ್.ಗಜೇಂದ್ರಕುಮಾರ್ ಮಾತನಾಡಿ ಸಾರಿಗೆ ನಿಗಮವು ಒಂದು ಅಗತ್ಯ ಸೇವಾ ವ್ಯಾಪ್ತಿಯೊಳಗೆ ಬರುತ್ತದೆ. ದಿನದ 24 ಗಂಟೆಗಳೂ ಸೇವೆ ನೀಡಲಾಗುತ್ತದೆ. ತುಮಕೂರು ವ್ಯಾಪ್ತಿಯಲ್ಲಿ 2300 ಸಿಬ್ಬಂದಿ ಕೆಲಸ ಮಾಡುತ್ತಿದ್ದಾರೆ. ಇವರಿಗೆಲ್ಲ ಸಮರ್ಪಕ ಕಾನೂನಿನ ಅರಿವು ಮತ್ತಷ್ಟು ಮೂಡಿಸುವ ಅಗತ್ಯವಿದೆ ಎಂದರು.
ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಬಾಬಾ ಸಾಹೇಬ್ ಜಿನರಾಳ್ಕರ್ ಮಾತನಾಡಿ ಕಾನೂನು ಅರಿವು ಕಾರ್ಯಕ್ರಮಗಳ ಮೂಲಕ ಜಿಲ್ಲೆಯಲ್ಲಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದ್ದು, ಪ್ರಾಧಿಕಾರದ ಕಛೇರಿ ಸಂಪರ್ಕಿಸುವಂತೆ ತಿಳಿಸಿದರು.
ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯರಾದ ಮರಿಚನ್ನಮ್ಮ, ಜಿಲ್ಲಾ ವಕೀಲರಸಂಘದ ಅಧ್ಯಕ್ಷ ಜಿ.ಕೆ.ಅನಿಲ್ ಮಾತನಾಡಿದರು. ಕಾರ್ಮಿಕರ ಕಾನೂನುಗಳು ಕುರಿತು ವಕೀಲರು ಹಾಗೂ ಸುಫಿಯಾ ಕಾನೂನು ಮಹಾವಿದ್ಯಾಲಯದ ಪ್ರಾಂಶುಪಾಲ ಎಸ್.ರಮೇಶ್, ಮೋಟಾರು ವಾಹನ ಅಪಘಾತ ಪ್ರಕರಣಗಳು ಕುರಿತು ವೇಣುಗೋಪಾಲ್, ವೈವಾಹಿಕ ಪ್ರಕರಣಗಳು ಕುರಿತು ಸಾ.ಚಿ.ರಾಜಕುಮಾರ ವಿಷಯ ಮಂಡಿಸಿದರು. ವಕೀಲರಾದ ಕೆ.ಎನ್.ಬಸವರಾಜು ಕಾರ್ಯಕ್ರಮ ನಿರೂಪಿಸಿದರು. ವಿಭಾಗೀಯ ವ್ಯವಸ್ಥಾಪಕ ಲಕ್ಷ್ಮೀಕಾಂತ್ ಸೇರಿದಂತೆ ಕೆ.ಎಸ್.ಆರ್.ಟಿ.ಸಿ. ಕಾನೂನು ಅಧಿಕಾರಿಗಳು ಉಪಸ್ಥಿತರಿದ್ದರು.