ಬೆಂಗಳೂರು

ಬೆಂಗಳೂರಿನ ಕುಮಾರಸ್ವಾಮಿ ಲೇಔಟ್ ಸಮೀಪದ ಜೆಹೆಚ್ ಬಿಸಿ ಲೇಔಟ್ನಲ್ಲಿ ಕಾಲೇಜು ಪ್ರಾಧ್ಯಾಪಕ ಅರಬಿಂದ್ ಗುಪ್ತಾ ಎಂಬವರ ಮೇಲೆ ಯುವಕರು ಹಲ್ಲೆ ನಡೆಸಿದ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ವಿಂಗ್ ಕಮಾಂಡರ್ ರೋಡ್ ರೇಜ್ ಪ್ರಕರಣ ದೇಶದಾದ್ಯಂತ ಚರ್ಚೆಗೆ ಗ್ರಾಸವಾಗಿರುವ ಸಂದರ್ಭದಲ್ಲೇ ಈ ಘಟನೆಯೂ ನಡೆದಿದೆ. ಏಪ್ರಿಲ್ 21 ರಂದು ಸಂಜೆ 6 ರಿಂದ 7 ಗಂಟೆಯ ಸಮಯದಲ್ಲಿ ಕುಮಾರಸ್ವಾಮಿ ಲೇಔಟ್ನ ಜೆಹೆಚ್ ಬಿಸಿ ಲೇಔಟ್ನಲ್ಲಿ ಖಾಸಗಿ ಕಾಲೇಜು ಪ್ರಾಧ್ಯಾಪಕ ಅರಬಿಂದ್ ಗುಪ್ತಾ ಬೈಕ್ನಲ್ಲಿ ತೆರಳುತ್ತಿದ್ದರು. ಈ ವೇಳೆ ಆಟೋದಲ್ಲಿ ತೆರಳುತ್ತಿದ್ದ ಮೂವರು ಯುವಕರು, ತಿಂಡಿ ತಿಂದು ಕಸವನ್ನು ರಸ್ತೆ ಮೇಲೆಯೇ ಬಿಸಾಡಿದ್ದರು. ಆ ವೇಳೆ, ಪ್ರಾಧ್ಯಾಪಕ ಅರಬಿಂದ್ ಗುಪ್ತಾ ಇದನ್ನು ಪ್ರಶ್ನಿಸಿದ್ದರು. ಕಸ ರಸ್ತೆ ಮೇಲೆ ಕಸ ಬಿಸಾಡಬೇಡಿ ಎಂದಿದ್ದರು. ಇದರಿಂದ ಕೋಪಗೊಂಡ ಯುವಕರು ಪ್ರಾಧ್ಯಾಪಕನ ಮೇಲೆ ಹಲ್ಲೆ ನಡೆಸಿದ್ದರು.
ಘಟನೆಯ ವೀಡಿಯೋ ಮಾಡಿದ್ದ ಅರಬಿಂದ್ ಗುಪ್ತಾ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿದ್ದರು. ಬೈಯಪ್ಪನಹಳ್ಳಿಯಲ್ಲಿ ನಡೆದಿದ್ದ ರೋಡ್ ರೇಜ್ ಬಳಿಕ (ವಿಂಗ್ ಕಮಾಂಡರ್ ಶಿಲಾದಿತ್ಯ ಬೋಸ್ ಪ್ರಕರಣ) ಇದು ಕೂಡ ಸಾಕಷ್ಟು ಸದ್ದು ಮಾಡಿತ್ತು.
ನಂತರ ಪ್ರಕರಣ ದಾಖಲಿಸಿಕೊಂಡಿದ್ದ ಕೆಎಸ್ ಲೇಔಟ್ ಪೊಲೀರು ಮೂವರು ಆರೋಪಿಗಳಾದ ಭಾನುಪ್ರಸಾದ್, ಶರತ್, ಅಮೃತ್ ಕುಮಾರ್ನನ್ನು ಬಂಧಿಸಿ ಜೈಲಿಗಟ್ಟಿದ್ದಾರೆ. ಸದ್ಯ ಆರೋಪಿಗಳನ್ನು ಪರಪ್ಪನ ಅಗ್ರಹಾರ ಜೈಲಿನಲ್ಲಿರಿಸಲಾಗಿದೆ. ಆಟೋ ಪಾರ್ಕಿಂಗ್ಗೆ ಜಾಗ ಕೊಡಲಿಲ್ಲ ಎಂದು ಕ್ಯಾಬ್ಗೆ ಡಿಕ್ಕಿ ಹೊಡೆಸಿ ದರ್ಪ ಮೆರೆದ ಘಟನೆ ಬೆಂಗಳೂರಿನ ಬಿವಿಕೆ ಅಯ್ಯಂಗಾರ್ ರಸ್ತೆಲ್ಲಿ ನಡೆದಿದೆ. ಶುಕ್ರವಾರ ಸಂಜೆ 5-30 ರ ಸಮಯದಲ್ಲಿ ಕ್ಯಾಬ್ ಚಾಲಕರೊಬ್ಬರು ಬಿವಿಕೆ ಅಯ್ಯಂಗಾರ್ ರಸ್ತೆಗೆ ವ್ಯಕ್ತಿಯೊಬ್ಬರನ್ನು ಡ್ರಾಪ್ ಮಾಡಲು ತೆರಳಿದ್ದರು. ಈ ವೇಳೆ ಅಲ್ಲಿಗೆ ಬಂದ ಆಟೋ ಚಾಲಕ, ‘ಕ್ಯಾಬ್ ತೆಗಿ’ ಎಂದು ಅವಾಜ್ ಹಾಕಿದ್ದಾನೆ. ಕ್ಯಾಬ್ ಚಾಲಕ ಸುಂದರ್ ಅಲ್ಲಿಂದ ಕ್ಯಾಬ್ ಹಿಂದಕ್ಕೆ ತೆಗೆದಿದ್ದಾರೆ. ಆದರೂ ಆಟೋ ಚಾಲಕ ಮತ್ತೆ ವಾಪಸ್ಸು ಬಂದು, ಇದು ನನ್ನ ಜಾಗ ಎಂದು ಕಿರಿಕ್ ಮಾಡಿ ಕೆಟ್ಟ ಪದಗಳಿಂದ ನಿಂದಿಸಿ ಆಟೋದಿಂದ ಕ್ಯಾಬ್ಗೆ ಡಿಕ್ಕಿ ಹೊಡೆದು ದರ್ಪ ಮೆರೆದಿದ್ದಾನೆ.
ಈ ಆಟೋ ಚಾಲಕ ಆಟೋದಿಂದ ಕ್ಯಾಬ್ಗೆ ಡಿಕ್ಕಿ ಹೊಡೆಸಿದ್ದನ್ನು ವಿಡಿಯೋ ಮಾಡಲು ಕ್ಯಾಬ್ ಚಾಲಕ ಮುಂದಾದಾಗ ಅದನ್ನು ತಡೆದು ಹಲ್ಲೆಗೆ ಯತ್ನಿಸಲಾಗಿದೆ ಎಂಬ ದೂರು ಕೇಳಿಬಂದಿದೆ. ಕೆಲ ಆಟೋ ಚಾಲಕರು ಮಾಡುವ ಇಂಥ ಕೃತ್ಯಗಳಿಂದ ಎಲ್ಲಾ ಆಟೋ ಚಾಲಕರಿಗೆ ಕೆಟ್ಟ ಹೆಸರು ಬರುತ್ತಿದೆ. ದುಷ್ಕೃತ್ಯ ಮೆರೆದ ಆಟೊ ಚಾಲಕನ ಮೇಲೆ ಪೋಲಿಸರು ಕ್ರಮ ಕೈಗೊಳ್ಳಬೇಕೆಂದು ಆಟೋ ಚಾಲಕರು ಆಗ್ರಹಿಸಿದ್ದಾರೆ.ಒಟ್ಟಿನಲ್ಲಿ ಬೆಂಗಳೂರಿನಲ್ಲಿ ಕೆಲ ಕಿಡಿಗೇಡಿಗಳ ಅಟ್ಟಹಾಸ, ರೋಡ್ರೇಜ್ ಪ್ರಕರಣಗಳು ಮುಂದುವರಿದಿದ್ದು, ಇದಕ್ಕೆ ಪೋಲಿಸ್ ಇಲಾಖೆ ಕಠಿಣ ಕ್ರಮಗಳನ್ನು ತೆಗೆದುಕೊಳ್ಳುವ ಮೂಲಕ ಬ್ರೇಕ್ ಹಾಕಬೇಕಿದೆ.
