ನವದೆಹಲಿ:
ಕಾವೇರಿ ನೀರು ಹಂಚಿಕೆ ತೀರ್ಮಾನ ತೆಗೆದುಕೊಳ್ಳಲು ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರವೇ ಸೂಕ್ತ ಸಂಸ್ಥೆಯಾಗಿದ್ದು, ಪ್ರಾಧಿಕಾರದಲ್ಲಿರುವ ತಜ್ಞರೇ ಈ ಬಗ್ಗೆ ನಿರ್ಧರಿಸುತ್ತಾರೆ ಎಂದು ಸುಪ್ರೀಂಕೋರ್ಟ್ ಶುಕ್ರವಾರ ಸ್ಪಷ್ಟಪಡಿಸಿದೆ. ಈ ಮೂಲಕ ರಾಜ್ಯಕ್ಕೆ ಕೊಂಚ ನಿರಾಳವಾಗಿದ್ದರೆ, ಪದೇಪದೆ ಕೋರ್ಟ್ ಮೊರೆ ಹೋಗುತ್ತಿರುವ ತಮಿಳುನಾಡಿಗೆ ಸ್ಪಷ್ಟ ಸಂದೇಶವನ್ನು ನೀಡಿದಂತಾಗಿದೆ.
ನ್ಯಾಯಾಧಿಕರಣ ಮತ್ತು ಸುಪ್ರೀಂಕೋರ್ಟ್ ಅಂತಿಮ ತೀರ್ಪಿನ ಅನುಸಾರ ಕರ್ನಾಟಕ ನೀರು ಬಿಡುಗಡೆ ಮಾಡುತ್ತಿಲ್ಲ ಎಂದು ಆರೋಪಿಸಿ ತಮಿಳುನಾಡು ಸಲ್ಲಿಸಿದ್ದ ಅರ್ಜಿ ವಿಚಾರಣೆ ಮಾಡಿದ ನ್ಯಾ ಬಿ.ಆರ್. ಗವಾಯಿ ನೇತೃತ್ವದ ತ್ರಿಸದಸ್ಯ ಪೀಠ, ನೀರು ಹಂಚಿಕೆಯಲ್ಲಿ ವ್ಯತ್ಯಾಸವಾಗಿದೆಯೇ, ಇಲ್ಲವೇ ಎಂಬುದನ್ನು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಪರಿಶೀಲಿಸಲಿ. ನಂತರ ನಮಗೆ ಈ ಕುರಿತ ವರದಿಯನ್ನು ನೀಡಲಿ ಎಂದು ಆದೇಶಿಸಿದೆ. ಪ್ರಾಧಿಕಾರದಲ್ಲಿ ಜಲತಜ್ಞರು ಇರುವುದರಿಂದ ಈ ವಿಷಯದಲ್ಲಿ ನಿರ್ಧಾರ ಮಾಡಲು ಅವರೇ ಯೋಗ್ಯರಾಗಿದ್ದಾರೆ. ಹೀಗಾಗಿ ನೀವು ಅವರ ಮುಂದೆ ಏಕೆ ಹೋಗುತ್ತಿಲ್ಲ ಎಂದು ತಮಿಳುನಾಡು ವಕೀಲರನ್ನು ನ್ಯಾಯಪೀಠ ಪ್ರಶ್ನಿಸಿತು.
ಕಾವೇರಿ ಪ್ರಾಧಿಕಾರ ರಾಜ್ಯಗಳ ಜತೆ ಸಭೆ ನಡೆಸಿ, ನೀರು ಬಿಡುವಂತೆ ಆದೇಶಿಸಿತ್ತು. ಆದರೆ, ಕರ್ನಾಟಕ ಅದನ್ನು ಪಾಲಿಸುತ್ತಿಲ್ಲ. ಈಗ ಮತ್ತೆ ಪ್ರಾಧಿಕಾರದ ಮುಂದೆ ಹೋದರೆ ನೀರು ಬಿಡುಗಡೆಯಲ್ಲಿ ಮತ್ತಷ್ಟು ವಿಳಂಬ ಆಗಲಿದೆ. ಆದ್ದರಿಂದ ಮುಂದಿನ ವಿಚಾರಣೆ ತನಕ ನಿತ್ಯವೂ ಇಂತಿಷ್ಟು ನೀರು ಹರಿಸಲು ನೀವು ಸೂಚನೆ ನೀಡಬೇಕು ಎಂದು ತಮಿಳುನಾಡು ಪರ ವಕೀಲ ಮುಕುಲ್ ರೋಹ್ಟಗಿ ವಾದಿಸಿದರು.
ಆದರೆ, ನೀರು ಬಿಡುಗಡೆ ಬಗ್ಗೆ ಆದೇಶಿಸಲು ಹಿಂದೇಟು ಹಾಕಿದ ನ್ಯಾಯಪೀಠ, ಕೇಂದ್ರ ಸರ್ಕಾರದ ಹೆಚ್ಚುವರಿ ಸಾಲಿಸಿಟಟ್ ಜನರಲ್ ಐಶ್ವರ್ಯ ಭಾಟಿ ತಿಳಿಸಿದಂತೆ, ಸೋಮವಾರದಂದು ಕಾವೇರಿ ನೀರು ನಿಯಂತ್ರಣ ಸಮಿತಿ ಸಭೆ ನಡೆಸಲಿದೆ. ಮುಂದಿನ 15 ದಿನಗಳಿಗೆ ಅನ್ವಯ ಆಗುವಂತೆ ಎಷ್ಟು ನೀರು ಬಿಡಬೇಕು ಎನ್ನುವುದನ್ನು ಈ ಸಮಿತಿ ಶಿಫಾರಸು ಮಾಡಲಿದೆ.
ಅದರ ಪಾಲನೆಯಾಗಿದೆಯೇ ಇಲ್ಲವೇ ಎಂಬುದನ್ನು ಕಾವೇರಿ ಪ್ರಾಧಿಕಾರ ಪರಿಶೀಲಿಸಲಿ. ಜತೆಗೆ, 15 ದಿನಗಳಿಗೆ ಅನ್ವಯ ಆಗುವಂತೆ ದಿನಕ್ಕೆ 10 ಸಾವಿರ ಕ್ಯೂಸೆಕ್ ನೀರು ಬಿಡಬೇಕು ಎಂದು ಈ ಹಿಂದೆ ಆದೇಶಿಸಿದ್ದ ಪ್ರಾಧಿಕಾರದ ಆದೇಶವನ್ನು ಕರ್ನಾಟಕ ಪಾಲಿಸಿದೆಯೇ ಎಂಬುದನ್ನೂ ಅಧ್ಯಯನ ನಡೆಸಿ ಪ್ರಾಧಿಕಾರವು ಸುಪ್ರೀಂಕೋರ್ಟ್ಗೆ ಮುಂದಿನ ಶುಕ್ರವಾರದ ಒಳಗಾಗಿ ವರದಿ ಸಲ್ಲಿಸಲಿ ಎಂದು ಸೂಚನೆ ನೀಡಿದೆ.
ಕಾವೇರಿ ನೀರು ನಿಯಂತ್ರಣಾ ಸಮಿತಿ ಸಭೆ ಸೋಮವಾರ ನಡೆಯಲಿದ್ದು, ಮುಂದಿನ 15 ದಿನಗಳಿಗೆ ಇಂತಿಷ್ಟು ಪ್ರಮಾಣದ ನೀರು ಹರಿಸಬೇಕು ಎಂದು ಆದೇಶಿಸುವ ಸಾಧ್ಯತೆ ಇದೆ. ನಿಯಂತ್ರಣ ಸಮಿತಿ ನೀಡುವ ಸೂಚನೆ ಬಗ್ಗೆ ಪ್ರಾಧಿಕಾರ ಪರಿಶೀಲನೆ ನಡೆಸಿ, ಕಣಿವೆ ರಾಜ್ಯಗಳ ಜತೆ ಸಭೆ ನಡೆಸುವುದೇ ಎಂಬ ಬಗ್ಗೆ ಖಚಿತತೆ ಇಲ್ಲ. ಅದು ಸೋಮವಾರದ ಸಭೆ ನಂತರ ಗೊತ್ತಾಗಬಹುದು ಎಂದು ರಾಜ್ಯದ ವಕೀಲರೊಬ್ಬರು ಹೇಳಿದ್ದಾರೆ.
ನೀರು ಬಿಡುಗಡೆ ವಿಷಯದಲ್ಲಿ ಕಾವೇರಿ ಪ್ರಾಧಿಕಾರವೇ ನಿರ್ಣಾಯಕ ಎಂಬ ಸಂದೇಶವನ್ನು ಕೋರ್ಟ್ ರವಾನೆ ಮಾಡಿರುವುದು ಒಳ್ಳೆಯ ಬೆಳವಣಿಗೆ. ಪದೇಪದೆ ಕೋರ್ಟ್ಗೆ ದೂರು ಸಲ್ಲಿಸಬೇಡಿ, ತಜ್ಞರ ಮುಂದೆ ನಿಮ್ಮ ವಾದಗಳನ್ನು ಮಂಡಿಸಿ, ಪರಿಹಾರ ಪಡೆದುಕೊಳ್ಳಿ ಎಂಬ ಸಂದೇಶವನ್ನೂ ಪರೋಕ್ಷವಾಗಿ ತಮಿಳುನಾಡಿಗೆ ನೀಡಿದೆ ಎಂದು ಹಿರಿಯ ವಕೀಲರು ಅಭಿಪ್ರಾಯಪಟ್ಟಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
