ತುಮಕೂರು
ನಗರದಲ್ಲಿ ಹತ್ತು ರೂಪಾಯಿ ನಾಣ್ಯವನ್ನು ಯಾವ ಅಂಗಡಿಗಳಲ್ಲಿಯೂ ತೆಗೆದುಕೊಳ್ಳುತ್ತಿಲ್ಲವೆಂಬ ವ್ಯಾಪಕವಾದ ದೂರುಗಳು ಹರಿದಾಡುತ್ತಿವೆ. ಯಾವುದೇ ಕಿರಾಣಿ ಅಂಗಡಿಯಾಗಲೀ, ಹೋಟೆಲ್ಲುಗಳಾಗಲೀ, ಪೆಟ್ಟಗೆ ಅಂಗಡಿಗಳಲ್ಲಾಗಲೀ ಈ ನಾಣ್ಯವನ್ನು ಚಲಾವಣೆ ಮಾಡಲು ಸಾಧ್ಯವಿಲ್ಲದ ಪರಿಸ್ಥಿತಿ ಉಂಟಾಗಿದೆ. ನಗರದಲ್ಲಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಮುಖ್ಯ ಶಾಖೆಯಲ್ಲಿಯೂ ಕೂಡಾ ಇದೇ ಅನುಭವವನ್ನು ಗ್ರಾಹಕರು ಅನುಭವಿಸಿದ್ದಾರೆ ಎಂಬ ಸುದ್ದಿಯೂ ಇದೆ. ನಾಣ್ಯದ ಕೈ ಬದಲಾವಣೆಗೆ ಒಪ್ಪದ ಬ್ಯಾಂಕಿನವರು, 30 ಕ್ಕಿಂತ ಹೆಚ್ಚಿನ ನಾಣ್ಯಗಳನ್ನು ಒಂದೇ ಬಾರಿ ಖಾತೆಗೆ ಜಮಾ ಮಾಡುವುದಾದರೆ ಮಾತ್ರ ಒಪ್ಪಿಕೊಳ್ಳುತ್ತಿದ್ದಾರೆ, ಇಲ್ಲವಾದರೆ ತಿರಸ್ಕರಿಸುತ್ತಾರೆ ಎನ್ನುವ ದೂರುಗಳಿವೆ. ಈ ಕುರಿತು ಹೆಸರು ಹೇಳಲಿಚ್ಛಿಸದ ಗ್ರಾಹಕರೊಬ್ಬರು “ ಸಾರ್ 30 ನಾಣ್ಯಗಳನ್ನು ಒಂದೇ ಬಾರಿ ಖಾತೆಗೆ ಜಮೆ ಮಾಡುವಷ್ಟು ದೊರಕದೆ ಇದ್ದಾಗ ಏನು ಮಾಡುವುದು..ಹತ್ತು ಹನ್ನೆರಡು ನಾಣ್ಯಗಳನ್ನು ತೆಗೆದುಕೊಂಡು ಹೋಗಿ ಬದಲಾಯಿಸಿ ಕೊಡುವಂತೆ ಕೇಳಿದರೆ ತಿರಸ್ಕರಿಸುವ ಬ್ಯಾಂಕಿನವರು, ಬದಲಾಯಿಸಲು ಸಾಧ್ಯವಿಲ್ಲ, ಯಾರಿಗೆ ಬೇಕಾದರೂ ದೂರು ಕೊಡಿ ಪರವಾಗಿಲ್ಲ ಎನ್ನುತ್ತಾರೆ. ಯಾವ ಅಂಗಡಿಗಳವರು ತಿರಸ್ಕರಿಸುತ್ತಾರೋ ಅಂತಹವರ ಮೇಲೆ ಕಂಪ್ಲೇಂಟ್ ನೀಡಿ ಎನ್ನುವ ಉದಾಸೀನ ಮನೋಭಾವವನ್ನು ಪ್ರದರ್ಶಿಸುತ್ತಾರೆ. ಹತ್ತು ರೂಪಾಯಿಗೆಲ್ಲಾ ಪೊಲೀಸ್ ಸ್ಟೇಷನ್ ಮೆಟ್ಟಿಲು ಸಾಧ್ಯವೇ ಎಂದು ಅಭಿಪ್ರಾಯ ವ್ಯಕ್ತಪಡಿಸುತ್ತಾರೆ. ತುಮಕೂರು ತಾಲ್ಲೂಕಿನ ಊರ್ಡಿಗೆರೆಯಲ್ಲಿ ಐದು ರೂಪಾಯಿಯ ನೋಟನ್ನು ಯಾರೂ ತೆಗೆದುಕೊಳ್ಳುವುದಿಲ್ಲ. ಅಲ್ಲಿ ಐದು ರೂಪಾಯಿ ನೋಟಿನ ಚಲಾವಣೆಯೂ ಯಾವುದೇ ಕಾರಣಕ್ಕೂ ಸಾಧ್ಯವಿಲ್ಲವೆಂಬ ಮಾಹಿತಿ ಇದೆ. ಇಲ್ಲಿ ಐದು ರೂಪಾಯಿ ನಾಣ್ಯದ ಚಲಾವಣೆ ಯಾವುದೇ ತೊಂದರೆಯಿಲ್ಲ ಎಂಬ ಸುದ್ದಿಯಿದೆ. ಸಂಬಂಧಿಸಿದವರು ಇತ್ತ ಗಮನಹರಿಸಿ ಗ್ರಾಹಕರಿಗೆ ನೆರವಾಗಬೇಕಿದೆ.