ಹರಪನಹಳ್ಳಿ:
ಜಿಲ್ಲೆಯಲ್ಲಿ ತಡವಾಗಿ ಬಿತ್ತನೆ ಮಾಡಲಾದ ಮೆಕ್ಕೆಜೋಳ ಬೆಳೆಗೆ ಕಾಣಿಸಿಕೊಂಡಿರುವ ಫಾಲ್‍ಆರ್ಮಿವರ್ಮ್ (ವಿದೇಶಿ ಸೈನಿಕ ಹುಳ) ಕೀಟಬಾಧೆ ಹಿನ್ನೆಲೆಯಲ್ಲಿ ತಾಲ್ಲೂಕಿನ ಕುಂಚೂರು ಹಾಗೂ ಇಟ್ಟಿಗುಡಿ ಗ್ರಾಮಗಳ ಜಮೀನುಗಳಿಗೆ ಉಪವಿಭಾಗಾಧಿಕಾರಿ ಜಿ.ನಜ್ಮಾ ಮತ್ತು ತಹಶೀಲ್ದಾರ ಕೆ.ಗುರುಬಸವರಾಜ, ಸಹಾಯಕ ಕೃಷಿ ನಿರ್ದೇಶಕ ಆರ್.ತಿಪ್ಪೇಸ್ವಾಮಿ ಅವರು ಭೇಟಿ ನೀಡಿ ಪರಿಶೀಲಿಸಿದರು.
ಜಿಲ್ಲೆಯಲ್ಲಿ ತಡವಾಗಿ ಬಿತ್ತನೆ ಮಾಡಿದ 3 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಈ ಕೀಟಬಾಧೆ ಕಂಡು ಬಂದಿದೆ. ಈ ಕೀಟವು ಮೆಕ್ಕೆಜೋಳ ಬೆಳೆ ಸೇರಿದಂತೆ, ಭತ್ತ, ಹೈಬ್ರಿಡ್ ಜೋಳ, ರಾಗಿ ಮುಂತಾದ ಬೆಳೆಗಳಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆಯಿದೆ. ರೈತರು ನಿರ್ಲಕ್ಷ ಮಾಡದೇ ತಕ್ಷಣ ಸಸ್ಯ ಸಂರಕ್ಷಣಾ ನಿಯಂತ್ರಣಕ್ಕೆ ಕ್ರಮ ವಹಿಸುವಂತೆ ಅಧಿಕಾರಿಗಳು ಮನವಿ ಮಾಡಿದರು.
ಕೀಟದ ಹಾವಳಿ ಹೆಚ್ಚಾದಲ್ಲಿ ಇಮಾಮೆಕ್ಟಿನ್ ಬೆಂಜೋಯೆಟ್ 0.4 ಗ್ರಾಂ ಲಿ. ನೀರಿಗೆ ಅಥವಾ ಲ್ಯಾಂಬ್ಡಾ ಸೈಹ್ಲೋ ಹತ್ರಿನ್ ಕೀಟನಾಶಕ 2 ಮಿಲಿ ಲೀ ನೀರಿಗೆ ಅಥವಾ ಸ್ಪಿನೋಸ್ಯಾಡ್0.3 ಮಿಲಿಲೀ ನೀರಿಗೆ ಬೆರೆಸಿ ಬೆಳೆಯ ಸುಳಿಯಲ್ಲಿ ಪೂರ್ಣವಾಗಿ ನೆನೆಯುವಂತೆ ಸಿಂಪರಣೆ ಮಾಡಬೇಕು. ರೈತ ಸಂಪರ್ಕ ಕೇಂದ್ರಗಳಲ್ಲಿ ಕೀಟನಾಶಕಗಳು ರಿಯಾಯ್ತಿ ದರದಲ್ಲಿ ಲಭ್ಯವಿದೆ ಎಂದು ಸಹಾಯಕ ಕೃಷಿ ನಿರ್ದೇಶಕ ಆರ್.ತಿಪ್ಪೇಸ್ವಾಮಿ ಮಾಹಿತಿ ನೀಡಿದರು.ಈ ಸಂದರ್ಭದಲ್ಲಿ ಗ್ರಾಮಸ್ಥರು, ರೈತರು, ಅಧಿಕಾರಿಗಳು ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ