ಕುಂದು-ಕೊರತೆಗೆ ವೇದಿಕೆಯಾದ ಬಜೆಟ್ ಸಲಹಾ ಸಭೆ

ದಾವಣಗೆರೆ :

           ಮಹಾನಗರ ಪಾಲಿಕೆಯ 2019-20ನೇ ಆಯ-ವ್ಯಯ ಅಂದಾಜು ಪಟ್ಟಿ ತಯಾರಿಸಲು ಸಂಘ ಸಂಸ್ಥೆಗಳು ಮತ್ತು ಸಾವರ್ಜನಿಕರಿಂದ ಸಲಹೆ ಪಡೆಯಲು ಪಾಲಿಕೆಯ ಸಭಾಂಗಣದಲ್ಲಿ ಬುಧವಾರ ಏರ್ಪಡಿಸಿದ್ದ ಸಭೆಯು ಸಾರ್ವಜನಿಕರ ಕುಂದು-ಕೊರೆತೆಗಳ ಸಭೆಯಾಗಿ ಮಾರ್ಪಟ್ಟಿತು.

           ಸಭೆಯಲ್ಲಿ ಬಹುತೇಕರು ಆಯವ್ಯಯ ಪಟ್ಟಿಗೆ ಪೂರಕವಾದ ಸಲಹೆ ಕೊಡುವುದಕ್ಕಿಂತ, ವಾರ್ಡ್‍ಗಳಲ್ಲಿನ ಸಮಸ್ಯೆಗಳ ಬಗ್ಗೆಯೇ ಹೆಚ್ಚು ಗಮನ ಸೆಳೆದ ಕಾರಣ ಹಂದಿಗಳ ಹಾವಳಿ, ಚರಂಡಿ ಸಮಸ್ಯೆ, ನೀರು ಪೋಲಾಗುವುದು, ಸ್ವಚ್ಛತೆ ಸಮಸ್ಯೆ ಹೀಗೆ ಹಲವು ಸಮಸ್ಯೆಗಳು ಅನಾವರಣಗೊಂಡವು

          ಆಗ ಮಧ್ಯ ಪ್ರವೇಶಿಸಿದ ಪಾಲಿಕೆ ಅಯುಕ್ತ ಮಂಜುನಾಥ ಬಳ್ಳಾರಿ, ನಗರದ ಅಭಿವೃದ್ಧಿ ಹಿನ್ನೆಲೆಯಲ್ಲಿ ಸಲಹೆಗಳು ನೀಡಬೇಕೆಂದು ಮನವಿ ಮಾಡಿದರೂ ಸಭೆಯಲ್ಲಿದ್ದ ಹಲವರು ಮತ್ತೆ ನಗರದ ಸಮಸ್ಯೆಗಳನ್ನೇ ಸಭೆಯ ಗಮನಕ್ಕೆ ತಂದರು.
ನಗರಸಭೆ ಮಾಜಿ ಅಧ್ಯಕ್ಷ ಕೆ.ಜಿ.ಶಿವಕುಮಾರ್ ಮಾತನಾಡಿ, ಮಹಾನಗರ ಪಾಲಿಕೆಯಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಡಗಳ ಅಭಿವೃದ್ಧಿಗೆ ಶೇ.32.5ರಷ್ಟು ಅನುದಾನವನ್ನು ಮೀಸಲಿಡಲಾಗಿದೆ. ಆದರೆ, ಈ ಅನುದಾನದಲ್ಲಿ ಕೆಲವು ವೈಯಕ್ತಿಕ ಸೌಲಭ್ಯಗಳನ್ನು ನಿಲ್ಲಿಸಲಾಗಿದೆ. ಆದ್ದರಿಂದ ಅನುದಾನ ಖರ್ಚಾಗದೆಯೇ ಹಾಗೆಯೇ ಉಳಿದಿದೆ. ಹೀಗಾಗಿ ವೈಯಕ್ತಿಕ ಸೌಲಭ್ಯಗಳನ್ನು ಮತ್ತೆ ಈ ಬಾರಿಯ ಜಜೆಟ್‍ನಲ್ಲಿ ಇಡಬೇಕೆಂದು ಸಲಹೆ ನೀಡಿದರು.

           ನಗರದ ಕೆಲವು ಪ್ರದೇಶಗಳಲ್ಲಿ ವಾಹನಗಳ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ. ಈ ಪಾರ್ಕಿಂಗ್‍ನಲ್ಲಿ ವಾಹನ ನಿಲ್ಲಿಸಲು ಕನಿಷ್ಟ ಶುಲ್ಕ ನಿಗದಿ ಮಾಡಿದರೆ, ಪಾಲಿಕೆ ಆದಾಯ ಸಂಗ್ರಹವಾಗಲಿದೆ. ಆದ್ದರಿಂದ ಬಜೆನಲ್ಲಿ ಈ ಬಗ್ಗೆ ಸೇರಿಸಬೇಕೆಂದು ಮನವಿ ಮಾಡಿದರು.

             ಗಾಂಧಿನಗರದ ಹನುಮಂತಪ್ಪ ಮಾತನಾಡಿ, ಪಾಲಿಕೆಯಲ್ಲಿ ಎಸ್ಸಿ-ಎಸ್ಟಿ ಅನುದಾನವನ್ನು ಬೇರೆ ಕಾರ್ಯಕ್ರಮಗಳಿಗೆ ಬಳಸಿಕೊಳ್ಳದೇ ಅದೇ ಸಮುದಾಯಗಳ ಅಭಿವೃದ್ಧಿಗೆ ವಿನಿಯೋಗಿಸುವ ನಿಟ್ಟಿನಲ್ಲಿ ಯೋಜನೆಗಳನ್ನು ರೂಪಿಸಿ ಬಜೆಟ್‍ನಲ್ಲಿ ಸೇರಿಸಬೇಕು. ಅಷ್ಟೇ ಅಲ್ಲದೇ ಪಾಲಿಕೆಯ ವ್ಯಾಪ್ತಿಯಲ್ಲಿ ಅನೇಕ ಸಮುದಾಯ ಭವನಗಳನ್ನು ನಿರ್ಮಾಣ ಮಾಡಲಾಗುತ್ತಿವೆ. ಆದರೆ, ಅದರಲ್ಲಿ ಬಹುಪಾಲು ಅರ್ಧಕ್ಕೆ ನಿಂತಿವೆ. ಇಂಥ ಸಮುದಾಯ ಭವನಗಳನ್ನು ಪೂರ್ಣಗೊಳಿಸಲು ಬಜೆಟ್‍ನಲ್ಲಿ ಹೆಚ್ಚಿನ ಅನುದಾನ ಮೀಸಲಿಡಬೇಕೆಂದು ಒತ್ತಾಯಿಸಿದರು.

            ಪಾಲಿಕೆಯಲ್ಲಿ ಪೌರ ಕಾರ್ಮಿಕರ ಶ್ರಮ ಹೆಚ್ಚಾಗಿದೆ. ಅವರಲ್ಲಿ ಕೆಲವು ಮಕ್ಕಳು ಪ್ರತಿಭಾವಂತರಿದ್ದು ಶಿಕ್ಷಣಕ್ಕೆ ತೊಂದರೆ ಆಗುತ್ತಿದೆ. ಈ ಹಿನ್ನೆಲೆಯಲ್ಲಿ ಪೌರ ಕಾರ್ಮಿಕರ ಮಕ್ಕಳ ಶಿಕ್ಷಣಕ್ಕೆ ಪಾಲಿಕೆ ವತಿಯಿಂದ ಬಡ್ಡಿ ರಹಿತ ಸಾಲ ನೀಡಬೇಕು. ಆ ಮೂಲಕ ಅವರ ಶಿಕ್ಷಣಕ್ಕೆ ಆದ್ಯತೆ ನೀಡಬೇಕೆಂದು ಸಲಹೆ ನೀಡಿದರು.

            ಕನ್ನಡ ಪರ ಹೋರಾಟಗಾರ ನಾಗೇಂದ್ರ ಬಂಡೀಕರ್ ಮಾತನಾಡಿ, ಮಳೆ ಬಂದ ಸಂದರ್ಭದಲ್ಲಿ ರಸ್ತೆ, ಚರಂಡಿಗಳಲ್ಲಿ ನೀರು ನಿಂತು ಜನಜೀವನ ಅಸ್ತವ್ಯಸ್ತ ಆಗುತ್ತಿದೆ. ಇದು ಹೋಗಬೇಕಾದರೆ, ನಗರದಲ್ಲಿ ಮೂರ್ನಾಲ್ಕು ಕಡೆ ರಾಜಕಾಲುವೆಗಳನ್ನು ನಿರ್ಮಿಸಬೇಕಾಗಿದೆ. ಈ ಅಂಶವನ್ನು ಬಜೆಟ್‍ನಲ್ಲಿ ಪ್ರಸ್ತಾಪಿಸಬೇಕೆಂದು ಒತ್ತಾಯಿಸಿದರು.

           ಹಿರಿಯ ಕ್ರೀಡಾಪಟು ಸಾಯಿನಾಥ್ ಕೆ.ಎಸ್ ಮಾತನಾಡಿ, ನಗರದಲ್ಲಿ ವೇಟ್ ಲಿಫ್ಟ್, ಪವರ್ ಲಿಫ್ಟ್ ಮತ್ತು ದೇಹದಾಢ್ರ್ಯ ವ್ಯಾಯಾಮಕ್ಕೆ ಸಾಮಾನ್ಯ ಜನತೆಗೆ ಒಂದು ಸುಸಜ್ಜಿತವಾದ ಶಾಲೆ ಇಲ್ಲ. ಇದರಿಂದ ಅಂತರಾಷ್ಟ್ರೀಯ ಮಟ್ಟದಲ್ಲಿ ಸ್ಪರ್ಧಿಸುವುದು ಕಷ್ಟವಾಗುತ್ತಿದೆ. ನಗರದ ನೇತಾಜಿ ಸುಭಾಷ್ ಚಂದ್ರ ಬೋಸ್ ಸ್ಟೇಡಿಯಂನಲ್ಲಿ ಸಾಮಾನ್ಯರಿಗೆ ಅವಕಾಶವಿಲ್ಲ. ಹಾಗು ಅಲ್ಲಿ ಅತ್ಯಂತ ಹಳೆಯ ಸಲಕರಣೆಗಳು ಇವೆ. ಇದರಿಂದ ಅಂತಹ ಉಪಯೋಗವಿಲ್ಲ. ಆದ್ದರಿಂದ ಆಧುನಿಕ ಸಲಕರಣೆಗಳೊಂದಿಗೆ 60*80 ಅಡಿ ಅಳತೆಯಲ್ಲಿ ಒಂದು ಹಾಲ್ ನಿರ್ಮಿಸಿ, ಎನ್‍ಐಎಸ್ ಕೋಚ್‍ನ್ನು ದೇಹಧಾಢ್ರ್ಯ ಕುರಿತು ತರಬೇತಿ ನೀಡಲು ನೇಮಿಸಬೇಕು. ಜೊತೆಗೆ ರಾಜ್ಯದಿಂದ ರಾಷ್ಟ್ರ ಮಟ್ಟಕ್ಕೆ ಆಯ್ಕೆಗೊಳ್ಳುವ ಕ್ರೀಡಾಪಟುಗಳಿಗೆ ಮೊದಲು ರಿಯಾಯ್ತಿ ದೊರೆಯುತ್ತಿದ್ದು, ಇದೀಗ ಈ ಸೌಲಭ್ಯ ಸಿಗುತ್ತಿಲ್ಲ. ಆದ್ದರಿಂದ ರಾಷ್ಟ್ರ ಮಟ್ಟದಲ್ಲಿ ಸ್ಪರ್ಧಿಸುವ ಕ್ರೀಡಾಪಟುಗಳ ಪ್ರವಾಸ ಭತ್ಯೆಯನ್ನು ಭರಿಸಿದರೆ ಅನುಕೂಲವಾಗುತ್ತದೆ ಎಂದು ಸಲಹೆ ನೀಡಿದರು.

            ಪ್ರಗತಿಪರ ಹೋರಾಟಗಾರ ಡಿ.ಅಸ್ಲಂ ಖಾನ್ ಮಾತನಾಡಿ, ಸಾರ್ವಜನಿಕರು ಹಾಗೂ ಶಾಲಾ ಮಕ್ಕಳಿಗೆ ಬೆಳಗಿನ ಸಮಯದಲ್ಲಿ ಓಡಾಡಲು ತುಂಬಾ ತೊಂದರೆಯಾಗುತ್ತಿದ್ದು, ಪಾಲಿಕೆಯ ಮುಂಭಾಗದಿಂದ ಎ.ಸಿ. ಕಚೇರಿವರೆಗೆ ಸ್ಟೀಲ್ ಬ್ರಿಡ್ಜ್ ನಿರ್ಮಾಣ ಮಾಡಬೇಕು. ದಾವಣಗೆರೆ ಹಳೇ ಭಾಗಕ್ಕೆ ನೀರಿನ ಸೌಕರ್ಯಕ್ಕಾಗಿ ಈ ಭಾಗದಲ್ಲಿ ಕೆರೆ ನಿರ್ಮಿಸಿ ಹರಿಹರದ ತುಂಗಭದ್ರ ನದಿಯಿಂದ ನೀರು ಪೂರೈಸಿ ಶಾಶ್ವತ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಿಕೊಡಬೇಕು.

            ನಗರ ಮಧ್ಯಭಾಗದಲ್ಲಿರುವ ಖಾಸಗಿ ಬಸ್ ನಿಲ್ದಾಣದಿಂದ ನಗರದಲ್ಲಿ ಓಡಾಡಲು ತೊಂದರೆಯಾಗುತ್ತಿರುವುದರಿಂದ ಸಂತೇಬೆನ್ನೂರು, ಮಲೆಬೆನ್ನೂರು, ಚನ್ನಗಿರಿ, ಲೋಕಿಕೆರೆ ಮುಂತಾದ ಸ್ಥಳಗಳಿಂದ ಬರುವ ಬಸ್‍ಗಳಿಗೆ ಚನ್ನಗಿರಿ ರಸ್ತೆ ಭಾಗದಲ್ಲಿ ಹೊಸದಾಗಿ ಒಂದು ಖಾಸಗಿ ಬಸ್ ನಿಲ್ದಾಣ ನಿರ್ಮಿಸಬೇಕು. ದಾವಣಗೆರೆ ತಾಲ್ಲೂಕು ಕಚೇರಿ ಪಕ್ಕದಲ್ಲಿರುವ ಪಾಲಿಕೆಯ ಹಳೇ ಕಟ್ಟಡವನ್ನು ಕೆಡವಿ ಸುಸಜ್ಜಿತವಾದ ಒಂದು ಶಾಪಿಂಗ್ ಕಾಂಪ್ಲೆಕ್ಸ್ ನಿರ್ಮಿಸಬೇಕು. ಹಾಗೂ ನಗರದಲ್ಲಿ ಕಸವನ್ನು ಒಂದೇ ಕಡೆ ಸಂಗ್ರಹಿಸುತ್ತಿದ್ದು, ಹೆಚ್ಚುತ್ತಿರುವ ಕಸವನ್ನು ನಗರದ ನಾಲ್ಕು ದಿಕ್ಕುಗಳಲ್ಲಿ ಸಂಗ್ರಹಿಸುವ ವ್ಯವಸ್ಥೆ ಮಾಡಬೇಕು ಎಂದು ಸಲಹೆ ನೀಡಿದರು.

              ಸಭೆಯಲ್ಲಿ ಸಂಘಟನೆಗಳ ಮುಖಂಡರಾದ ಸೋಮಶೇಖರ್, ಅನಿಲ್ ಕುಮಾರ್, ಮಲ್ಲಿಕಾರ್ಜುನ ಮಾತನಾಡಿದರು.
ಪಾಲಿಕೆ ಮೇಯರ್ ಶೋಭಾ ಪಲ್ಲಾಗಟ್ಟಿ ಅಧ್ಯಕ್ಷತೆ ವಹಿಸಿದ್ದು, ಉಪಮೇಯರ್ ಚಮನ್ ಸಾಬ್, ಆಯುಕ್ತ ಮಂಜುನಾಥ ಬಳ್ಳಾರಿ ಮತ್ತಿತರರಿದ್ದರು.

  ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link