ಚಿತ್ರದುರ್ಗ;
ಜಿಲ್ಲೆಯಲ್ಲಿ ಬರುವ ದಿನಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉಲ್ಣಗೊಳ್ಳುವ ಸಾಧ್ಯತೆಗಳಿರುವ ಸಮಸ್ಯಾತ್ಮಕ ಗ್ರಾಮಗಳನ್ನು ಈಗಲೆ ಗುರುತಿಸಿ, ಸಮಸ್ಯೆಗೆ ಪರಿಹಾರ ಕೈಗೊಳ್ಳುವ ಸಲುವಾಗಿ ಕ್ರಿಯಾ ಯೋಜನೆಯನ್ನು ಸಿದ್ಧಪಡಿಸುವಂತೆ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಸೌಭಾಗ್ಯ ಬಸವರಾಜನ್ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಗುರುವಾರದಂದು ಏರ್ಪಡಿಸಲಾದ ಜಿ.ಪಂ. ಮಾಸಿಕ ಕೆ.ಡಿ.ಪಿ. ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ ಮುಂಗಾರು ಮಳೆಯ ತೀವ್ರ ಕೊರತೆಯಿಂದಾಗಿ ಬರ ಪರಿಸ್ಥಿತಿ ತಲೆದೋರಿದ್ದು, ಈಗಾಗಲೆ ಹೊಸದುರ್ಗ ಮತ್ತು ಹೊಳಲ್ಕೆರೆ ತಾಲ್ಲೂಕುಗಳನ್ನು ಹೊರತುಪಡಿಸಿ, ಉಳಿದ ತಾಲ್ಲೂಕುಗಳನ್ನು ಬರಪೀಡಿತ ತಾಲ್ಲೂಕುಗಳೆಂದು ಸರ್ಕಾರ ಘೋಷಿಸಿದೆ. ಅಲ್ಲದೆ ಪ್ರಕೃತಿ ವಿಕೋಪ ಪರಿಹಾರ ಕಾರ್ಯಗಳಿಗಾಗಿ ಸರ್ಕಾರ ಮೊದಲ ಹಂತದ ಅನುದಾನವನ್ನೂ ಬಿಡುಗಡೆ ಮಾಡಿದೆ. ಜಿಲ್ಲೆಯಲ್ಲಿ ಮಳೆ ಕೊರತೆಯ ಕಾರಣದಿಂದಾಗಿ ಮೊಳಕಾಲ್ಮೂರು ತಾಲ್ಲೂಕು-16, ಚಳ್ಳಕೆರೆ-03 ಹಾಗೂ ಚಿತ್ರದುರ್ಗ-03 ಸೇರಿದಂತೆ ಒಟ್ಟು 22 ಗ್ರಾಮಗಳಲ್ಲಿ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ ಎಂದರು
ಬರುವ ದಿನಗಳಲ್ಲಿ ನೀರಿನ ಸಮಸ್ಯೆ ತಲೆದೋರುವ ಗ್ರಾಮಗಳ ಸಂಖ್ಯೆ ಹೆಚ್ಚಾಗುವ ಸಾಧ್ಯತೆಗಳಿದ್ದು, ಸಮಸ್ಯಾತ್ಮಕ ಗ್ರಾಮಗಳನ್ನು ಗುರುತಿಸಿ, ಸಮಸ್ಯೆ ಪರಿಹಾರಕ್ಕೆ ಈಗಲೆ ಮಾರ್ಗೋಪಾಯ ಕಂಡುಕೊಳ್ಳಬೇಕು ಎಂದು ಹೇಳಿದರು.
ಜಿಲ್ಲೆಯ ಪ್ರತಿಯೊಂದು ಗ್ರಾಮ ಪಂಚಾಯತಿಗಳಲ್ಲಿ ಗ್ರಾಮವಾರು ನೀರಿನ ಮೂಲಗಳನ್ನು ಈಗಲೆ ಗುರುತಿಸಿಕೊಂಡು, ಬರುವ ದಿನಗಳಲ್ಲಿ ಜನರಿಗೆ ನೀರಿನ ಪೂರೈಕೆಯಲ್ಲಿ ವ್ಯತ್ಯಯವಾಗದಂತೆ ಯೋಜನೆ ಕೈಗೊಳ್ಳಲು ಕ್ರಿಯಾಯೋಜನೆಯನ್ನು ಸಿದ್ಧಪಡಿಸಿ ಸಲ್ಲಿಸುವಂತೆ ಅಧ್ಯಕ್ಷರು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಕಾರ್ಯಪಾಲಕ ಅಭಿಯಂತರರಿಗೆ ಸೂಚನೆ ನೀಡಿದರು.
ಇದಕ್ಕೆ ದನಿಗೂಡಿಸಿದ ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪಿ.ಎನ್. ರವೀಂದ್ರ ಅವರು, ಬರಪರಿಸ್ಥಿತಿಯಲ್ಲಿ ಕುಡಿಯುವ ನೀರಿನ ಪೂರೈಕೆ ವಿಷಯವು ಸವಾಲಿನ ಸಂಗತಿಯಾಗಿದೆ. ಅನುದಾನಕ್ಕೆ ಯಾವುದೇ ಕೊರತೆ ಇಲ್ಲ. ಬರ ಪರಿಸ್ಥಿತಿಯನ್ನು ಸಮರ್ಥವಾಗಿ ಎದುರಿಸಲು ಅಧಿಕಾರಿಗಳು ಈಗಿನಿಂದಲೆ ಸಿದ್ಧರಾಗಬೇಕು ಎಂದು ಹೇಳಿದರು
ಗ್ರಾಮವಾರು ಜಲಮೂಲಗಳನ್ನು ಗುರುತಿಸುವ ಸಂದರ್ಭದಲ್ಲಿ ಖಾಸಗಿ ಬೋರ್‍ವೆಲ್‍ಗಳನ್ನೂ ಗುರುತಿಸಬೇಕು. ತಹಸಿಲ್ದಾರ್, ಎಇಇ ಹಾಗೂ ಶಾಸಕರನ್ನೊಳಗೊಂಡ ಕಾರ್ಯಪಡೆ ಸಭೆಯಲ್ಲಿ ಚರ್ಚಿಸಿ, ಸೂಕ್ತ ನಿರ್ಧಾರ ಕೈಗೊಳ್ಳಬೇಕು. ಅಗತ್ಯವೆನಿಸಿದಲ್ಲಿ, ಖಾಸಗಿ ಬೋರ್‍ವೆಲ್‍ಗಳನ್ನು ವಶಕ್ಕೆ ಪಡೆದು, ನೀರು ಪೂರೈಸಲು ಕ್ರಮ ಕೈಗೊಳ್ಳಬೇಕು. ಇವ್ಯಾವುದೂ ಸಾಧ್ಯವಾಗದ ಪರಿಸ್ಥಿತಿಯಲ್ಲಿ ಮಾತ್ರ, ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಬೇಕು. ಇದು ಕೊನೆಯ ಆಯ್ಕೆಯಾಗಿರಬೇಕು. ಒಂದು ವೇಳೆ ಟ್ಯಾಂಕರ್ ಮೂಲಕ ಸರಬರಾಜು ಮಾಡಬೇಕಾದ ಸಂದರ್ಭ ಬಂದಲ್ಲಿ, ಸೂಕ್ತ ದಾಖಲೀಕರಣ ಮಾಡುವುದು ಅಗತ್ಯ, ಅಧಿಕಾರಿಗಳು ಮನಸೋಇಚ್ಛೆ ಕಾರ್ಯ ಕೈಗೊಂಡು, ಸಮರ್ಪಕ ದಾಖಲೀಕರಣ ಮಾಡಿಕೊಳ್ಳದಿದ್ದಲ್ಲಿ ಬಿಲ್ ಪಾವತಿಯಾಗುವುದು ಕಷ್ಟ ಎಂದು ಎಚ್ಚರಿಕೆ ನೀಡಿದರು
ಜಿ.ಪಂ. ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಕೆ. ಅನಂತ್ ಮಾತನಾಡಿ, ಜಿಲ್ಲೆಯಲ್ಲಿ ಸ್ಥಾಪಿಸಲಾಗಿರುವ ಶುದ್ಧ ಕುಡಿಯುವ ನೀರಿನ ಘಟಕಗಳಲ್ಲಿ ಜನರಿಗೆ ಪೂರೈಕೆ ಮಾಡಲಾಗುತ್ತಿರುವ ನೀರಿನ ಗುಣಮಟ್ಟದ ಪರಿಶೀಲನೆ ನಡೆಸುವುದು ಅಗತ್ಯವಾಗಿದೆ. ವಿಶ್ವ ಆರೋಗ್ಯ ಸಂಸ್ಥೆ ಮಾನದಂಡದಂತೆ ಕುಡಿಯುವ ನೀರಿನಲ್ಲಿ ಇರಬೇಕಾದ ಪ್ರಮಾಣದಲ್ಲಿ ಅಗತ್ಯ ಖನಿಜಾಂಶಗಳು ಇಲ್ಲವೆಂಬುದಾಗಿ ಕೇಳಿಬಂದಿದ್ದು, ಈ ನಿಟ್ಟಿನಲ್ಲಿ ಜಿಲ್ಲೆಯಲ್ಲಿರುವ ಶುದ್ಧ ಕುಡಿಯುವ ನೀರಿನ ಘಟಕಗಳಲ್ಲಿ ಪೂರೈಕೆ ಮಾಡುತ್ತಿರುವ ನೀರಿನ ಗುಣಮಟ್ಟದ ಪರೀಕ್ಷೆ ಮಾಡಿಸುವುದು ಅಗತ್ಯವಾಗಿದೆ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಜಿ.ಪಂ. ಅಧ್ಯಕ್ಷರು, ಡಿಸೆಂಬರ್ ಒಳಗಾಗಿ ಜಿಲ್ಲೆಯ ಎಲ್ಲ ಆರ್.ಒ ಗಳ ನೀರಿನ ಗುಣಮಟ್ಟ ಪರಿಶೀಲಿಸಿ, ವರದಿ ಸಲ್ಲಿಸುವಂತೆ ಸಂಬಂಧಿಸಿದ ಅಧಿಕಾರಿಗೆ ನಿರ್ದೇಶನ ನೀಡಿದರು.
ವಾರದಲ್ಲಿ ಬೆಳೆ ಹಾನಿ ಸಮೀಕ್ಷೆ : ಜಿಲ್ಲೆಯಲ್ಲಿ 3.58 ಲಕ್ಷ ಹೆ. ಪ್ರದೇಶದಲ್ಲಿ ಮುಂಗಾರು ಬಿತ್ತನೆಯಾಗಿ, 2.66 ಲಕ್ಷ ಹೆ. ನಲ್ಲಿ ಬೆಳೆ ನಷ್ಟವಾಗಿರುವ ಅಂದಾಜಿದೆ. ಬರಪೀಡಿತ ನಾಲ್ಕು ತಾಲ್ಲೂಕುಗಳಲ್ಲಿ 1.41 ಲಕ್ಷ ಹೆ. ನಲ್ಲಿ ಬೆಳೆ ನಷ್ಟವಾಗಿದ್ದು, ಜಿಲ್ಲೆಯಲ್ಲಿ ಒಟ್ಟಾರೆ ಶೇ. 85 ರಷ್ಟು ಬೆಳೆ ಹಾನಿಯಾಗಿರುವ ಅಂದಾಜಿದೆ. ನಾಲ್ಕು ತಾಲ್ಲೂಕುಗಳಲ್ಲಿ ಬೆಳೆ ಹಾನಿಯ ಸಮೀಕ್ಷೆ ಕೈಗೊಳ್ಳಲಾಗುತ್ತಿದ್ದು, ಒಂದು ವಾರದೊಳಗೆ ಸಮೀಕ್ಷೆ ಪೂರ್ಣಗೊಳ್ಳುವ ಸಾಧ್ಯತೆ ಇದೆ ಎಂದು ಜಂಟಿ ಕೃಷಿ ನಿರ್ದೇಶಕ ಲಕ್ಷ್ಮಣ್ ಸಭೆಗೆ ಮಾಹಿತಿ ನೀಡಿದರು.
ಹೊಸದುರ್ಗ ಮತ್ತು ಹೊಳಲ್ಕೆರೆ ತಾಲ್ಲೂಕುಗಳನ್ನೂ ಕೂಡ ಬರಪೀಡಿತ ತಾಲ್ಲೂಕುಗಳೆಂದು ಘೋಷಿಸಲು ಪೂರಕ ವರದಿಯೊಂದಿಗೆ ಕಳೆದ ಸೆ. 15 ರಂದು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಹೇಳಿದರು
4. 54 ಕೋಟಿ ತೋಟಗಾರಿಕೆ ಬೆಳೆ ವಿಮೆ : ತೋಟಗಾರಿಕೆ ಉಪನಿರ್ದೇಶಕಿ ಸವಿತ ಅವರು ಮಾತನಾಡಿ, ಜಿಲ್ಲೆಯಲ್ಲಿ 2016-17 ನೇ ಸಾಲಿನ ಹವಾಮಾನ ಆಧಾರಿತ ಬೆಳೆವಿಮೆ ಯೋಜನೆಯಡಿ ತೋಟಗಾರಿಕೆ ಬೆಳೆ ನಷ್ಟ ಅನುಭವಿಸಿದ ರೈತರಿಗೆ 4. 54 ಕೋಟಿ ರೂ. ಬೆಳೆ ವಿಮೆ ಘೋಷಣೆಯಾಗಿದ್ದು, ಈವರೆಗೆ 3.59 ಕೋಟಿ ರೂ. ವಿಮೆ ಮೊತ್ತ ಪಾವತಿ ಇತ್ಯರ್ಥಗೊಂಡಿದೆ. ಇನ್ನೂ 94 ಲಕ್ಷ ರೂ. ಬೆಳೆ ವಿಮೆ ಇತ್ಯರ್ಥವಾಗಬೇಕಿದ್ದು, ಹತ್ತು ದಿನಗಳ ಒಳಗಾಗಿ ಇತ್ಯರ್ಥಗೊಳ್ಳಲಿದೆ ಎಂದು ಹೇಳಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತಿ ಉಪಾಧ್ಯಕ್ಷೆ ಎಸ್.ಪಿ. ಸುಶೀಲಮ್ಮ, ಜಿ.ಪಂ. ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಡಿ.ಕೆ. ಶಿವಮೂರ್ತಿ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








