ತಿಪಟೂರು :
ತಾಲ್ಲೂಕಿನ ಬಳುವನೇರಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೂಲಿಹಳ್ಳಿ ಗ್ರಾಮದ ದಲಿತ ಕಾಲೋನಿಯ ನಿವಾಸಿಗಳು ಸುಮಾರು ಮೂರು ವರ್ಷಗಳಿಂದಲೂ ಕುಡಿಯುವ ನೀರಿಗೆ ತೀವ್ರ ಹಾಹಾಕಾರ ಉಂಟಾಗಿದೆ ಎಂದು ತಾಲ್ಲೂಕು ಪಂಚಾಯಿತಿ ಕಛೇರಿಯ ಮುಂಭಾಗದಲ್ಲಿ ಖಾಲಿ ಬಿಂದಿಗೆಗಳನ್ನು ಪ್ರದರ್ಶಿಸುವ ಮೂಲಕ ಪ್ರತಿಭಟನೆ ನಡೆಸಿ ಅಧಿಕಾರಿಗಳಿಗೆ ಎಚ್ಚರಿಸಿದರು.
ಈ ವೇಳೆ ಕಾಲೋನಿ ನಿವಾಸಿ ರಂಗಸ್ವಾಮಿ ಮಾತನಾಡಿ, ನಮ್ಮ ಕಾಲೋನಿಯಲ್ಲಿ ಸುಮಾರು 70ಮನೆಗಳಿದ್ದು, 3 ವರ್ಷಗಳಿಂದಲೂ ಜನ-ಜಾನುವಾರುಗಳಿಗೆ ಕುಡಿಯುವ ನೀರಿಲ್ಲದಂತಾಗಿ ಪರದಾಡುವಂತಾಗಿದೆ. ಗ್ರಾಮದಲ್ಲಿರುವ ಬೋರ್‍ವೆಲ್‍ನಲ್ಲಿ ನೀರಿಲ್ಲದ ಕಾರಣ ಪ್ರತಿನಿತ್ಯ 2-3 ಕಿಲೋ ಮೀಟರ್ ದೂರದಲ್ಲಿರುವ ರಟ್ಟೇನಹಳ್ಳಿ, ಆನಿವಾಳ ಗ್ರಾಮಗಳಿಂದ ನೀರು ತರುವ ಪರಿಸ್ಥಿತಿ ಬಂದಿದೆ. ಈ ಬಗ್ಗೆ ಗ್ರಾಮ ಪಂಚಾಯಿತಿಗೆ ದೂರು ಸಲ್ಲಿಸಲು ಹೋದರೆ ಯಾವೊಬ್ಬ ಅಧಿಕಾರಿಯೂ ಗಮನಹರಿಸಿಲ್ಲ. ಪಿಡಿಓಗೆ ಈ ಬಗ್ಗೆ ತಿಳಿಸಿದರೆ ತಾಲ್ಲೂಕು ಪಂಚಾಯಿತಿ ಬಳಿ ಹೋಗಿ ಪ್ರತಿಭಟನೆ ಮಾಡಿ ಎಂದು ಹೇಳುತ್ತಾರೆ. ಮನವಿಗೆ ಸ್ಪಂದಿಸದೆ ಬೇಜವಾಬ್ದಾರಿಯಾಗಿ ನಡೆದುಕೊಳ್ಳುತ್ತಾರೆ. ದಲಿತ ಕಾಲೋನಿ ಎಂದರೆ ಅಧಿಕಾರಿಗಳಲ್ಲಿ ಅಸಡ್ಡೆ ಮನೋಭಾವ ಉಂಟಾಗಿದ್ದು, ನಮಗೆ ಕುಡಿವ ನೀರು ಪೂರೈಸದಿದ್ದಲ್ಲಿ ಗ್ರಾಮ ಪಂಚಾಯಿತಿಗೆ ಬೀಗ ಹಾಕಿ ಉಗ್ರ ಪ್ರತಿಭಟನೆ ಮಾಡಲಾಗುತ್ತದೆ ಎಂದು ಎಚ್ಚರಿಸಿದರು.
ಮತ್ತೊರ್ವ ನಿವಾಸಿ ಗಂಗಮ್ಮ ಮಾತನಾಡಿ, ಕಾಲೋನಿಯಲ್ಲಿ ನೀರಿಗೆ ಹಾಹಾಕಾರ ಉಂಟಾಗಿದ್ದು, ನೀರಿಗಾಗಿ ಇಡೀ ದಿನವನ್ನು ವ್ಯಯಿಸುವಂತಾಗಿ ಕೂಲಿ ಕೆಲಸಗಳಿಗೆ ಹೋಗದಂತಾಗಿದೆ. ಇನ್ನು ಮಕ್ಕಳು ಶಾಲೆಗೆ ಸರಿಯಾದ ಸಮಯಕ್ಕೆ ಹೋಗಲು ಸಾಧ್ಯವಾಗುತ್ತಿಲ್ಲ. ಬೇರೆಕಡೆಯಿಂದ ನೀರು ತರುವುದೆ ದೊಡ್ಡ ಸಮಸ್ಯೆಯಾಗಿದೆ. ಶೌಚಾಯಲಯಗಳಿದ್ದರೂ ನೀರಿಲ್ಲದೆ ಬಳಸಲಾಗುತ್ತಿಲ್ಲ, ಅತ್ತ ಬಟ್ಟೆ ತೊಳೆಯಲು ನೀರಿಲ್ಲದೆ ಪರದಾಡುವಂತಾಗಿದ್ದು ಕೂಡಲೆ ನಮ್ಮ ಕಾಲೋನಿಗೆ ಹೊಸ ಕೊಳವೆ ಬಾವಿ ತೆಗೆಸಿ ಅಥವಾ ಮತ್ಯಾವ ಮೂಲಕವಾದರೂ ಅಗತ್ಯ ನೀರು ಕೊಡಬೇಕೆಂದು ಅಧಿಕಾರಿಗಳನ್ನು ಒತ್ತಾಯಿಸಿದರು.
ಮನವಿ ಸ್ವೀಕರಿಸಿ ಮಾತನಾಡಿದ ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಸುರೇಶ್, ಗ್ರಾಮದಲ್ಲಿ ನೀರಿನ ಸಮಸ್ಯೆ ಇದೆ ಎಂಬುದರ ಬಗ್ಗೆ ಗ್ರಾಮ ಪಂಚಾಯಿತಿ ಅಧಿಕಾರಿಗಳು ನಮಗೆ ಯಾವುದೇ ಮಾಹಿತಿ ನೀಡಿಲ್ಲ. ಸಂಬಂಧಪಟ್ಟ ಇಲಾಖೆಗೆ ತಿಳಿಸಿ ಇನ್ನೆರಡು ದಿನಗಳೊಳಗೆ ಗ್ರಾಮದಲ್ಲಿ ಬೋರ್‍ವೆಲ್ ಕೊರೆಸಲಾಗುವುದು. ಬೇಜವಾಬ್ದಾರಿ ಹೇಳಿಕೆ ನೀಡಿರುವ ಪಿಡಿಓ ವಿರುದ್ದ ಗ್ರಾಮಸ್ಥರು ಪತ್ರ ಬರೆದುಕೊಟ್ಟರೆ ಕ್ರಮಕೈಗೊಳ್ಳುತ್ತೇನೆ ಎಂದರು.
ಪ್ರತಿಭಟನೆಯಲ್ಲಿ ದಲಿತ ಸಂಘರ್ಷ ಸಮಿತಿ ತಾಲ್ಲೂಕು ಸಂಚಾಲಕರುಗಳಾದ ನಾಗತೀಹಳ್ಳಿ ಕೃಷ್ಣಮೂರ್ತಿ, ಹೆಚ್.ಎಸ್. ಪ್ರಭುಸ್ವಾಮಿ, ರಾಘವೇಂದ್ರ, ರಂಗಸ್ವಾಮಿ, ಗ್ರಾಮದ ಮಹಿಳೆಯರಾದ ನೀಲಮ್ಮ, ಹೇಮಾವತಿ, ಶಿವಮ್ಮ, ಗೌರಮ್ಮ, ಕಲಾವತಿ, ಕಮಲಮ್ಮ, ಸಣ್ಣ, ಗೌರಮ್ಮ, ಬಸಮ್ಮ ಮತ್ತಿತರರಿದ್ದರು.