ಕುರುಬ ಸಮಾಜದ ನೇಕಾರರ ಕಾಯಕಲ್ಪಕ್ಕಾಗಿ ಸಿದ್ದರಾಮಯ್ಯ ಕೊಡುಗೆ ಅಪಾರ

ಚಳ್ಳಕೆರೆ

     ರಾಜ್ಯದ ಕುರುಬ ಸಮಾಜದ ನೇಕಾರರ ಅನುಕೂಲಕ್ಕಾಗಿ ನಿರ್ಗಮನ ಮುಖ್ಯಮಂತ್ರಿ ಸಿದ್ದರಾಮಯ್ಯ ಹಲವಾರು ಯೋಜನೆಗಳ ಮೂಲಕ ಆರ್ಥಿಕ ನೆರವು ನೀಡಿದ್ದು, ಪ್ರಸ್ತುತ ಜೆಡಿಎಸ್ ಕಾಂಗ್ರೆಸ್ ಮೈತ್ರಿಕೂಟದ ಸರ್ಕಾರವೂ ಸಹ ಈ ಸಮಾಜದ ನೇಕಾರರ ಅಭ್ಯುದಯಕ್ಕೆ ಶ್ರಮಿಸಲಿದೆ ಎಂದು ಶಾಸಕ ಟಿ.ರಘುಮೂರ್ತಿ ತಿಳಿಸಿದರು.

      ಅವರು, ಶನಿವಾರ ಮಧ್ಯಾಹ್ನ ಎ.ಜಿ.ರಸ್ತೆಯಲ್ಲಿರುವ ಕರ್ನಾಟಕ ಸಹಕಾರ ಖಾದಿಯೇತರ ಉಣ್ಣೆ ಕೈಮಗ್ಗ ನೇಕಾರರ ಮಹಾ ಮಂಡಲದ ಆವರಣದಲ್ಲಿ 30 ಲಕ್ಷ ವೆಚ್ಚದಲ್ಲಿ ಎರಡು ಉಣ್ಣೆ ಮತ್ತು ದಾರ ದಾಸ್ತಾನು ಕೊಠಡಿಗಳ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು. ಈಗಾಗಲೇ ರಾಜ್ಯಮಟ್ಟದ ಈ ನೇಕಾರ ಮಹಾಮಂಡಳಕ್ಕೆ 2 ಕೋಟಿಗೂ ಹೆಚ್ಚು ನೆರವನ್ನು ನೀಡಲಾಗಿದೆ. ನೇಕಾರರ ಸಮುದಾಯದ ಪ್ರಾಥಮಿಕ ಸಂಘಗಳಿಗೆ ಅತಿ ಕಡಿಮೆ ಬಡ್ಡಿ ಹಾಗೂ ರಿಯಾಯ್ತಿ ದರದಲ್ಲಿ ಸಾಲ ಸೌಲಭ್ಯವನ್ನು ಒದಗಿಸಲಾಗಿದೆ. ಉಣ್ಣೆ, ಕಂಬಳಿ ಮಾರಾಟಕ್ಕಾಗಿ ವಿಶಾಲವಾದ ಮಾರುಕಟ್ಟೆಯನ್ನು ಇಲ್ಲಿನ ಕೆಎಸ್‍ಆರ್‍ಟಿಸಿ ನಿಲ್ದಾಣದ ಬಳಿ ಸ್ಥಾಪಿಸಲಾಗಿದೆ. ಸಮುದಾಯ ಸರ್ಕಾರದ ಯೋಜನೆಗಳನ್ನು ಸದುಪಯೋಗ ಪಡಿಸಿಕೊಂಡು ಆರ್ಥಿಕ ಮುನ್ನಡೆ ಸಾಧಿಸುವಂತೆ ಮನವಿ ಮಾಡಿದರು.

        ಸಂಘದ ಅಧ್ಯಕ್ಷ ಸೂರನಹಳ್ಳಿ ಕೆ.ಜಗದೀಶ್ ಮಾತನಾಡಿ, ಕಳೆದ 5 ವರ್ಷಗಳ ಅವಧಿಯಲ್ಲಿ ಶಾಸಕ ಟಿ.ರಘುಮೂರ್ತಿಯವರು ಈ ಸಂಸ್ಥೆಯ ಅಭ್ಯುದಯಕ್ಕಾಗಿ ಹಲವಾರು ಯೋಜನೆಗಳ ಮೂಲಕ ಹಣ ನೀಡಿದ್ಧಾರಲ್ಲದೆ, ಸಂಘದ ಅಭಿವೃದ್ಧಿಗೆ ಮಾರ್ಗದರ್ಶನ ನೀಡಿರುತ್ತಾರೆ. ಪ್ರತಿಯೊಂದು ಹಂತದಲ್ಲೂ ಈ ಮಹಾಮಂಡಲ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರವನ್ನು ವಹಿಸಿದ್ಧಾರೆ. ರಾಜ್ಯ ಮಟ್ಟದ ಈ ಸಂಸ್ಥೆ ಇಂದು ಉತ್ತಮ ಅಭಿವೃದ್ಧಿ ಪಡೆಯಲು ಶಾಸಕರ ಸಹಕಾರವೇ ಕಾರಣವೆಂದರು.

        ಕಾರ್ಯಕ್ರಮದಲ್ಲಿ ಸಹಕಾರಿ ದುರೀಣ ಆರ್.ಮಲ್ಲೇಶಪ್ಪ, ನಿರ್ದೇಶಕರಾದ ಎನ್.ಜಯರಾಮ್, ಜಗನ್ನಾಥ, ಜಿ.ಮಲ್ಲಿಕಾರ್ಜುನಪ್ಪ, ಎಲ್.ಚಂದ್ರಯ್ಯ, ಶೇಖರಪ್ಪ, ರಾಜ್ಯ ಕಾರ್ಯದರ್ಶಿ ಎಂ.ಪಾತಲಿಂಗಪ್ಪ, ಗುಮಾಸ್ತ ಟಿ.ಗಂಗಾಧರ ಮುಂತಾದವರು ಭಾಗವಹಿಸಿದ್ದರು.

               ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link