ಕೃಷಿ ದೇಶದ ಆರ್ಥಿಕ ಬೆಳವಣಿಗೆಯ ಇಂಜಿನ್ – ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಕೃಷಿ ಕ್ಷೇತ್ರದ ಅಭಿವೃದ್ಧಿ ದೇಶದ ಅಭಿವೃದ್ಧಿಗೆ ಪೂರಕ
ಬೆಂಗಳೂರು: ಕೃಷಿ ಕ್ಷೇತ್ರ ನಮ್ಮ ದೇಶದ ಆರ್ಥಿಕತೆಯನ್ನು ಮುಂದಕ್ಕೆ ತೆಗೆದುಕೊಂಡು ಹೋಗುವ ಎಂಜಿನ್ ಇದ್ದಂತೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಬೆಂಗಳೂರಿನಲ್ಲಿ ಆಯೋಜಿಸಲಾಗಿದ್ದ ದೇಶದ ಎಲ್ಲಾ ರಾಜ್ಯಗಳ ಕೃಷಿ ಮತ್ತು ತೋಟಗಾರಿಕೆ ಸಚಿವರ ರಾಷ್ಟ್ರೀಯ ಸಮ್ಮೇಳನದಲ್ಲಿ ಪಾಲ್ಗೊಂಡು  ಅವರು ಮಾತನಾಡಿದರು.
 “ದೇಶದಲ್ಲಿ ಉತ್ಪಾದನೆ, ಐಟಿ ಬಿಟಿ ಸೇರಿದಂತೆ ಹಲವಾರು ವಲಯಗಳಿವೆ. ಆದರೆ ನಮ್ಮ ದೇಶದ ಆರ್ಥಿಕ ಬೆಳವಣಿಗೆಯನ್ನು ಮುಂದಕ್ಕೆ ತೆಗೆದುಕೊಂಡು ಹೋಗುವ ಎಂಜಿನ್  ಎಂದರೆ ಅದು ಕೃಷಿ” ಎಂದು ಬಸವರಾಜ ಬೊಮ್ಮಾಯಿ ಹೇಳಿದರು.
“ಕೃಷಿ ಕೇವಲ ಒಂದು ವಲಯವಷ್ಟೇ ಅಲ್ಲ. ಅದು ದೇಶದ ಒಂದು ಸಂಸ್ಕೃತಿಯಾಗಿದೆ.  ಇದು ದೇಶದ ಭ್ರಾತೃತ್ವದ ಬೆನ್ನೆಲುಬಾಗಿದೆ. ದೇಶದ ಯಾವುದೇ ಭಾಗದಲ್ಲೇ ಆದರೂ ರೈತನ ಜೀವನ ಪದ್ಧತಿ ಒಂದೇ ರೀತಿಯನ್ನು ಪ್ರತಿಬಿಂಬಿಸುತ್ತದೆ. ಕೃಷಿಯಲ್ಲಿ ೧% ಬೆಳವಣಿಗೆ ಆದರೆ ಉತ್ಪಾದನಾ ವಲಯದಲ್ಲಿ ೪% ಬೆಳವಣಿಗೆ ಆಗುತ್ತದೆ ಮತ್ತು ೧೦% ಬೆಳವಣಿಗೆ ಸೇವಾ ವಲಯದಲ್ಲಿ ಆಗುತ್ತದೆ” ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಕೃಷಿ ಕೇವಲ ಆರ್ಥಿಕತೆ ಮುಂದೆ ತೆಗೆದುಕೊಂಡು ಹೋಗುವುದು ಮಾತ್ರವಲ್ಲದೇ, ರಾಷ್ಟ್ರದ ಜನರಿಗೆ ಆಹಾರ ಭದ್ರತೆಯನ್ನೂ ನೀಡುತ್ತಿದೆ. ಸ್ವಾತಂತ್ರ್ಯದ ಸಮಯದಲ್ಲಿ ನಮ್ಮ ದೇಶದಲ್ಲಿ ಇದ್ದದ್ದು ಕೇವಲ ೩೩ ಕೋಟಿ ಜನಸಂಖ್ಯೆ. ಆದ್ರೆ ಆಹಾರ ಭದ್ರತೆ ಇರಲಿಲ್ಲ. ಈಗ ನಾವು ೧೩೦ ಕೋಟಿಗೂ ಹೆಚ್ಚು ಇದ್ದೇವೆ. ಆದರೂ ಆಹಾರ ಭದ್ರತೆ ಇದೆ. ಯಾವ ದೇಶವು ಆಹಾರ ಉತ್ಪಾದನೆಯಲ್ಲಿ ಸ್ವಾಲವಂಬನೆ ಪಡೆದಿದ್ದರೆ, ಅದು ಸ್ವಾಭಿಮಾನಿ ರಾಷ್ಟ್ರವಾಗುತ್ತದೆ. ನಮ್ಮ ರಾಷ್ಟ್ರವು ಇದನ್ನು ಸಾಧಿಸಿದೆ. ಇದು ನಮ್ಮ ರೈತರ, ಸಂಶೋಧಕರ ದೀರ್ಘಕಾಲದ ಪ್ರಯತ್ನ, ಜತೆಗೆ ನಮ್ಮೆಲ್ಲರ ಅಚ್ಚುಮೆಚ್ಚಿನ ಪ್ರಧಾನಿ ಅವರ ದೂರದೃಷ್ಟಿ ಫಲದಿಂದ ಆಗಿದೆ ಎಂದು ಬಸವರಾಜ ಬೊಮ್ಮಾಯಿ ಅವರು ತಿಳಿಸಿದರು.
ಸ್ವಾತಂತ್ರ್ಯಾ ನಂತರ ಮೊದಲ ೧೫ ವರ್ಷಗಳಲ್ಲಿ ಮತ್ತು ಮೊದಲು ಮೂರು ಪಂಚವಾರ್ಷಿಕ ಯೋಜನೆಯಲ್ಲಿ ಕೃಷಿಯಲ್ಲಿ ನಾವು ವಿಫಲವಾದೆವು. ಯಾಕೆಂದರೆ ನಾವು ಕೃಷಿಯ ಪ್ರಾಮುಖ್ಯತೆ ಬಗ್ಗೆ ತಿಳಿದುಕೊಂಡಿರಲಿಲ್ಲ. ಆಗಲೇ ಕೃಷಿವಲಯ ಪ್ರಾಮುಖ್ಯತೆ ಪಡೆದುಕೊಂಡಿದ್ದರೆ ನಮ್ಮ ದೇಶ ಇಂದು ಇನ್ನಷ್ಟು ಉತ್ತಮ ಸ್ಥಿತಿಯಲ್ಲಿ ಇರುತ್ತಿತ್ತು. ಕೃಷಿ ತಂತ್ರಜ್ಞಾನ ಎಷ್ಟೇ ಮುಂದುವರೆದಿದ್ದರೂ ರೈತನ ಸ್ಥಿತಿ ಈಗಲೂ ಕೆಳಮಟ್ಟದಲ್ಲೇ ಇದೆ. ಆದ್ದರಿಂದ ಕೃಷಿ ವಲಯದಲ್ಲಿ ಇನ್ನಷ್ಟು ಬಂಡವಾಳ ಹೂಡಿಕೆ ಆಗಬೇಕಿದೆ. ಈ ಮೂಲಕ ರೈತನ ಜೀವನ ಮಟ್ಟ ಸುಧಾರಣೆ ಆಗಬೇಕಿದೆ. ಇದರಿಂದ ಕೃಷಿ ವಲಯ ಉತ್ತಮಗೊಳ್ಳುತ್ತದೆ. ಆದ್ದರಿಂದ ರೈತ ಕೇಂದ್ರಿತ ಪಾಲಿಸಿಗಳನ್ನು ಜಾರಿ ಮಾಡಲು ನಾನು ಮನವಿ ಮಾಡಿಕೊಳ್ಳುತ್ತೇನೆ ಎಂದು ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಅವರಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮನವಿ ಮಾಡಿದರು.
ಕರ್ನಾಟಕ ರಾಜ್ಯ ನೈಸರ್ಗಿಕವಾಗಿ ೧೦ ವಿವಿಧ ಪರಿಸರ ಹವಾಮಾನ ವಲಯ ಹೊಂದಿದೆ. ೩೦೦ ದಿನಗಳ ಸೂರ್ಯಕಿರಣ ಲಭ್ಯವಿರುವುದರಿಂದ ವರ್ಷವಿಡೀ ಕೃಷಿ ಕೆಲಸವನ್ನು ಮಾಡಬಹುದಾಗಿದೆ. ಇದರಿಂದಾಗಿಯೇ ಕೋವಿಡ್ ಸಮಯದಲ್ಲೂ ನಮ್ಮ ರಾಜ್ಯದ ಕೃಷಿ ಉತ್ಪಾದನೆ ಶೇ ೧೦ ರಷ್ಟು ಹೆಚ್ಚಳವಾಗಿತ್ತು. ಇದರ ಜತೆಗೆ ಕೃಷಿಯಲ್ಲಿ ಡಿಜಿಟಲೈಸೇಷನ್ ಅನ್ನು ತರಬೇಕಿದೆ. ಕರ್ನಾಟಕವು ಇದರಲ್ಲಿ ಮುಂದಿದ್ದು, ನಮ್ಮೆಲ್ಲಾ ಭೂ ದಾಖಲಾತಿಗಳು ೨ ದಶಕಗಳ ಹಿಂದೆಯೇ ಡಿಜಿಟಲ್ ರೂಪ ಪಡೆದಿವೆ ಎಂದರು. ಈ ಮೂಲಕ ರಾಜ್ಯದಲ್ಲಿ ಬಳಕೆ ಇರುವ ಭೂ ದಾಖಲಾತಿ ಸಾಫ್ಟವೇರ್ ನ್ನು ಇತರೆ ರಾಜ್ಯಗಳೂ ಬಳಕೆ ಮಾಡಿಕೊಳ್ಳಿ ಎಂದು ಮುಖ್ಯಮಂತ್ರಿಗಳು ಸಲಹೆ ನೀಡಿದರು.
ಕೇಂದ್ರದ ವಾಟರ್ ಶೆಡ್ ಕಾರ್ಯಕ್ರಮದ ಮೂಲಕ ಮಣ್ಣು ಸವೆಯುವುದನ್ನು ತಡೆಯುತ್ತಿದ್ದು, ಇದಕ್ಕಾಗಿ ವೈಜ್ಞಾನಿಕ ವಿಧಾನದಲ್ಲಿ ಕಾರ್ಯಕ್ರಮಗಳನ್ನು ರೂಪಿಸಲಾಗಿದೆ. ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಜಾರಿಗೆ ತಂದಿದ್ದ ಭೂ ಚೇತನ ಕಾರ್ಯಕ್ರಮವು ಭಾರೀ ಯಶಸ್ವಿ ಆಗಿತ್ತು ಹಾಗೂ ಅದರಿಂದ ಭೂ ಫಲವತ್ತತೆ ಬಗ್ಗೆ ಸಂಪೂರ್ಣ ಮಾಹಿತಿ ದೊರಕಿತ್ತು. ಆದ್ದರಿಂದ ಭೂ ಚೇತನ ಕಾರ್ಯಕ್ರಮವನ್ನು ಮತ್ತೆ ರಾಜ್ಯದಲ್ಲಿ ಜಾರಿಗೆ ತರುವ ಬಗ್ಗೆ ನಮ್ಮ ಸರ್ಕಾರ ನಿರ್ಧಾರ ಮಾಡಿದೆ ಎಂದು ತಿಳಿಸಿದರು. ಇದೇ ಸಂದರ್ಭದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ರಾಜ್ಯ ಕೃಷಿ ವಲಯಕ್ಕೆ ಕೇಂದ್ರದಿಂದ ಸಿಗುತ್ತಿರುವ ಸೌಲಭ್ಯ ಮತ್ತು ಅನುದಾನಗಳಿಗಾಗಿ ಕೇಂದ್ರ ಕೃಷಿ ಸಚಿವರಿಗೆ ಕೃತಜ್ಞತೆ ಸಲ್ಲಿಸಿದರು.
ಕರ್ನಾಟಕವು ಈಗಾಗಲೇ ಕೃಷಿ ಕ್ಷೇತ್ರದಲ್ಲಿ ಪಾರಮ್ಯ ಸಾಧಿಸಿದ್ದು, ಈಗ ಇಡೀ ರಾಷ್ಟ್ರದಲ್ಲೇ ಮೊದಲ ಬಾರಿಗೆ ರೈತರಿಗಾಗಿ ಕ್ಷೀರ ಬ್ಯಾಂಕ್ ಅನ್ನು ಸ್ಥಾಪನೆ ಮಾಡಲಾಗುತ್ತಿದೆ. ರಾಜ್ಯದಲ್ಲಿ ಬೇರೆ ಬೇರೆ ಹಾಲು ಉತ್ಪಾದನಾ ಸಂಘಗಳಿಂದ ೨೩ ಸಾವಿರ ಕೋಟಿ ವಹಿವಾಟು ನಡೆಸಲಾಗಿದ್ದು, ಇದು ಒಂದೇ ಬ್ಯಾಂಕ್ ಮೂಲಕ ವಹಿವಾಟು ನಡೆಸಲು ಸುಲಭವಾಗುವಂತೆ ಯೋಜನೆ ರೂಪಿಸಲಾಗಿದೆ. ಈ ಮೂಲಕ ರೈತರಿಗೆ ಕಡಿಮೆ ಬಡ್ಡಿ ದರದಲ್ಲಿ ಸಾಲವನ್ನೂ ಕೊಡಬಹುದಾಗಿದೆ. ಈಗಾಗಲೇ ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರು ಇದರ ಲೋಗೋ ಅನಾವರಣ ಮಾಡಿದ್ದು, ಈ ಬ್ಯಾಂಕ್ ಸಂಪೂರ್ಣ ರೈತರಿಂದ ರೈತರಿಗಾಗಿ ಮಾತ್ರ ಕಾರ್ಯಾಚರಣೆ ಮಾಡಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಇದೇ ಸಂದರ್ಭದಲ್ಲಿ ಮುಖ್ಯಮಂತ್ರಿ ಬೊಮ್ಮಾಯಿ ಅವರು ಕೃಷಿ ವಲಯದಲ್ಲಿ ರಾಜ್ಯ ಸರ್ಕಾರರ ವಿವಿಧ ಯೋಜನೆಗಳ ಬಗ್ಗೆ ಸಮ್ಮೇಳನದಲ್ಲಿ ನೆರೆದಿದ್ದ ಪ್ರತಿನಿಧಿಗಳಿಗೆ ತಿಳಿಸಿದರು. ಸಮ್ಮೇಳನದಲ್ಲಿ ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಸಚಿವ ನರೇಂದ್ರ ಸಿಂಗ್ ತೋಮರ್, ಕೇಂದ್ರ ಆರೋಗ್ಯ ಮತ್ತು ರಸಗೊಬ್ಬರ ಹಾಗೂ ರಾಸಾಯನಿಕ ಖಾತೆ ಸಚಿವ ಮನ್ ಸುಖ್ ಮಾಂಡವೀಯ, ಕೇಂದ್ರ ಕೃಷಿ ಖಾತೆ ರಾಜ್ಯ ಸಚಿವರಾದ ಕುಮಾರಿ ಶೋಭಾ ಕರಂದ್ಲಾಜೆ ಹಾಗೂ ಕೈಲಾಶ್ ಚೌಧುರಿ ಮತ್ತು ರಾಜ್ಯದ ಕೃಷಿ ಸಚಿವ ಬಿ.ಸಿ. ಪಾಟೀಲ್, ತೋಟಗಾರಿಕೆ ಸಚಿವ ಮುನಿರತ್ನ ಮತ್ತು ಇತರರು ಉಪಸ್ಥಿತರಿದ್ದರು.

Recent Articles

spot_img

Related Stories

Share via
Copy link
Powered by Social Snap