ಹುಳಿಯಾರು:
ಹುಳಿಯಾರಿನ ಶ್ರೀಕೆಂಚಮ್ಮದೇವಿ ದೇವಾಲಯದಲ್ಲಿ ಶ್ರಾವಣ ಮಾಸದ ಕಡೆ ಭಾನುವಾರದ ಅಂಗವಾಗಿ ವಿಶೇಷ ಪೂಜೆ ಹಾಗೂ ಕನ್ನೇಕೇರು ಸೇರಿದಂತೆ ವಿವಿಧ ಧಾರ್ಮಿಕ ಕೈಂಕರ್ಯಗಳು ಹಾಗೂ ಅನ್ನಸಂತರ್ಪಣೆ ನಡೆಯಿತು.
ಪ್ರತಿ ವರ್ಷದ ಶ್ರಾವಣ ಮಾಸದಲ್ಲಿ ಕೆಂಚಮ್ಮ ದೇವಿಯ ಕನ್ನಿಕೆರೆ ಸೇವೆ ನಡೆದುಕೊಂಡು ಬರುತ್ತಿದ್ದು ಇದರ ಅಂಗವಾಗಿ ಕೆಂಚಮ್ಮ ದೇವಿ, ದುರ್ಗಮ್ಮ ದೇವಿ ಹಾಗು ಹುಳಿಯಾರಮ್ಮ ದೇವಿಯನ್ನು ದೇವಾಲಯದಿಂದ ಹುಳಿಯಾರು ಕೆರೆ ಏರಿ ಮೇಲಿರುವ ಕೆಂಚಮ್ಮನವರ ಮೂಲಸ್ಥಾನಕ್ಕೆ ಕರೆತರಲಾಯಿತು. ನಂತರ ಕಳಸ ಸ್ಥಾಪನೆ ಗಂಗಮ್ಮನ ಪೂಜೆ ಕಾರ್ಯಕ್ರಮ ನಡೆಯಿತು.
ಕಳಸವನ್ನು ಹೊತ್ತ ಹೆಣ್ಣುಮಕ್ಕಳು ಗ್ರಾಮ ದೇವತೆಗಳೊಂದಿಗೆ ನಡೆಮುಡಿಯೊಂದಿಗೆ ಪಟ್ಟಣದ ರಾಜ ಬೀದಿ ಮೂಲಕ ಸಾಗುತ್ತಾ ದೇವಿಯ ಒಡಪುಗಳನ್ನು ಹಾಡುತ್ತಾ ಮಂಗಳ ವಾದ್ಯದೊಂದಿಗೆ ಲಿಂಗಾಯತರ ಬಡಾವಣೆಯಲ್ಲಿರುವ ಕೆಂಚಮ್ಮ ದೇವಾಲಯಕ್ಕೆ ಕರೆ ತಂದು ಪೂಜೆ ಸಲ್ಲಿಸಿ ವಿಸರ್ಜಿಸಲಾಯಿತು.
ಅಮ್ಮನವರ ಅಭಿಷೇಕ ಅರ್ಚನೆ, ಅಲಂಕಾರ ಸೇರಿದಂತೆ ವಿವಿಧ ಪೂಜೆ ಕಾರ್ಯಗಳು ನಡೆದು ಮಹಾಮಂಗಳರತಿ ನಂತರ ಭಕ್ತಾಧಿಗಳಿಗೆ ಅನ್ನಸಂತರ್ಪಣೆ ನಡೆಯಿತು. ಸಂಜೆ ಪುನಃ ಎಲ್ಲಾ ದೇವರುಗಳನ್ನು ಪನಿವಾರ ಸೇವೆಗಾಗಿ ಕೆಂಚಮ್ಮನ ತೋಪಿನ ಬಳಿಯ ಮೂಲಸ್ಥಾನಕ್ಕೆ ಕರೆದೊಯ್ದು ಅಮ್ಮನವರಿಗೆ ಆರತಿ ಸೇವೆ ಸಲ್ಲಿಸಿ ಪನಿವಾರ ವಿತರಿಸುವ ಮೂಲಕ ಮಂಗಳ ಹಾಡಲಾಯಿತು.
ಈ ಸಂದರ್ಭದಲ್ಲಿ ದೇವಾಲಯ ಸಮಿತಿಯ ನಂಜುಂಡಪ್ಪ, ಶಿವನಂಜಪ್ಪ, ಚನ್ನಬಸವಯ್ಯ, ಷಡಾಕ್ಷರಿ, ಪಟೇಲ್ ರಾಜಕುಮಾರ್, ಮಲ್ಲಿಕಾರ್ಜುನಯ್ಯ, ದುರ್ಗಾಪರಮೇಶ್ವರಿ ದೇವಾಲಯದ ಅಧ್ಯಕ್ಷ ಪಟಾಕಿ ಶಿವಣ್ಣ, ಕನ್ವೀನಿಯರ್ ಹು.ಕೃ.ವಿಶ್ವನಾಥ್ ಸೇರಿದಂತೆ ಹುಳಿಯಾರು, ಕಾಮಶೆಟ್ಟಿಪಾಳ್ಯ, ಸೋಮಜ್ಜನಪಾಳ್ಯ, ಕೆ.ಸಿ.ಪಾಳ್ಯದ, ಲಿಂಗಪ್ಪನ ಪಾಳ್ಯದ ಅಪಾರ ಸಂಖ್ಯೆಯ ಭಕ್ತಾದಿಗಳು ಆಗಮಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ