ಬೆಂಗಳೂರು:
ಆಗಸ್ಟ್ 25 ಮತ್ತು 26ರಂದು ನಡೆಸಲು ಉದ್ದೇಶಿಸಲಾಗಿದ್ದ, ಕೆಎಸ್ಆರ್ ಟಿಸಿ ಲಿಖಿತ ಪರೀಕ್ಷೆಯನ್ನು ಮುಂದೂಡಲಾಗಿದೆ. ಇದರಿಂದ ಅಭ್ಯರ್ಥಿಗಳ ಮುಖದಲ್ಲಿ ಸಂತಸ ಮೂಡಿದೆ.
ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಕೆಎಸ್ಆರ್ ಟಿಸಿ ಮೇಲ್ವಿಚಾರಕೇತರ ಹಾಗೂ ತಾಂತ್ರಿಕ ಸಿಬ್ಬಂದಿಗಳ ನೇಮಕಾತಿ ಪರೀಕ್ಷೆಯನ್ನು ಮುಂದೂಡಲಾಗಿದೆ.
ಸಹಾಯಕ ಲೆಕ್ಕಿಗ 71, ಸಹಾಯಕ ಸಂಚಾರ ನಿರೀಕ್ಷಕ 128, ಸಹಾಯಕ ಉಗ್ರಾಣ ರಕ್ಷಕ 34, ಅಂಕಿ ಅಂಶ ಸಹಾಯಕ 41 ಹುದ್ದೆಗಳಿಗೆ 2016 ರಲ್ಲಿ ಅರ್ಜಿ ಆಹ್ವಾನಿಸಿತ್ತು. 2016 ರಿಂದ ಅರ್ಜಿ ಹಾಕಿ ಲಿಖಿತ ಪರೀಕ್ಷೆಗಾಗಿ ಕಾಯುತ್ತಿದ್ದ ಲಕ್ಷಾಂತರ ಅಭ್ಯರ್ಥಿಗಳು ಅವಕಾಶದಿಂದ ವಂಚಿತರಾಗಲಿದ್ದರು.
ಇದರಿಂದ ಪ್ರವಾಹ ಪೀಡಿತ ಜಿಲ್ಲೆಗಳ ಅಭ್ಯರ್ಥಿಗಳೂ ಸಹ ಆತಂಕಗೊಂಡಿದ್ದರು. ಮನವಿಯನ್ನು ಪರಿಗಣಿಸಿ, ಪರಿಸ್ಥಿತಿಯನ್ನು ಅವಲೋಕಿಸಿ ಸಾರಿಗೆ ಸಚಿವರು ಉದ್ದೇಶಿತ ಲಿಖಿತ ಪರೀಕ್ಷಾ ದಿನಾಂಕವನ್ನು ಮುಂದೂಡಲು ಸೂಚಿಸಿದ್ದಾರೆ.
ಕೆಲ ದಿನಗಳ ಹಿಂದಷ್ಟೇ ಪೊಲೀಸ್ ಇಲಾಖೆ ಇದೇ ತಿಂಗಳು 9 ರಂದು ನಡೆಯಬೇಕಿದ್ದ ಪೊಲೀಸ್ ಕಾನ್ಸ್ಟೇಬಲ್ ಹುದ್ದೆಗಳ ಲಿಖಿತ ಪರೀಕ್ಷೆಯನ್ನ ಮುಂದೂಡಿತ್ತು. ಆದರೆ ಕೆಎಸ್ಆರ್ಟಿಸಿ ಪರೀಕ್ಷೆಯನ್ನು ಮುಂದೂಡಿರಲಿಲ್ಲ.