ಕೆಎಸ್‍ಆರ್‍ಟಿಸಿ ನೌಕರರಿಂದ ಕೊಡಗು ಸಂತ್ರಸ್ಥರಿಗೆ ಒಂದು ದಿನದ ವೇತನ

ತುಮಕೂರು:

             ತುಮಕೂರು ಜಿಲ್ಲಾ ಕೆ.ಎಸ್.ಆರ್.ಟಿ.ಸಿ. ನೌಕರರ ಸಂಘದಿಂದ ಕೊಡಗು ನೆರೆ ಸಂತ್ರಸ್ಥರ ನಿಧಿಗೆ ತಮ್ಮ ಒಂದು ದಿನದ ವೇತನವಾದ 16,81,124 ರೂಗಳ ಚೆಕ್ಕನ್ನು ಶುಕ್ರವಾರ ನೌಕರರ ಸಂಘದ ಪದಾಧಿಕಾರಿಗಳು, ವಿಭಾಗೀಯ ನಿಯಂತ್ರಣಾಧಿಕಾರಿ ಎ.ಎನ್.ಗಜೇಂದ್ರಕುಮಾರ್ ಅವರಿಗೆ ಸಲ್ಲಿಸಿದರು.
               ಈ ವೇಳೆ ಮಾತನಾಡಿದ ಕೆಎಸ್‍ಆರ್‍ಟಿಸಿ ನೌಕರರ ಕನ್ನಡ ಕ್ರಿಯಾ ಸಮಿತಿಯ ಅಧ್ಯಕ್ಷ ವಿ.ಡಿ.ಹನುಮಂತರಾಯಪ್ಪ, ಕೆ.ಎಸ್.ಆರ್.ಟಿ.ಸಿ ನೌಕರರು ಈ ಹಿಂದೆಯೂ ರಾಜ್ಯದ ವಿವಿಧೆಡೆಗಳಲ್ಲಿ ಕಂಡು ಬಂದ ನೆರೆ ಹಾವಳಿಯಿಂದ ಮನೆ, ಮಠ ಕಳೆದುಕೊಂಡು ಜನರಿಗೆ ತಮ್ಮ ಕೈಲಾದ ಸಹಾಯ ಮಾಡಿದ್ದು,ಪ್ರಸ್ತುತ ಎಲ್ಲಾ ನೌಕರರು ತಮ್ಮ ಒಂದು ದಿನದ ವೇತನವನ್ನು ಕೊಡಗು ಸಂತ್ರಸ್ಥರ ನಿಧಿಗೆ ನೀಡುವಂತೆ ಮುಖ್ಯಮಂತ್ರಿಗಳಿಗೆ ತಲುಪಿಸಲು ವಿಭಾಗೀಯ ನಿಯಂತ್ರಣಾಧಿಕಾರಿಗಳಿಗೆ ಸಲ್ಲಿಸುವ ಮೂಲಕ ಅವರಿಗೆ ನೈತಿಕ ಬೆಂಬಲ ತುಂಬುವ ಕೆಲಸ ಮಾಡಿದ್ದೇವೆ ಎಂದರು.
                 ಕಾರ್ಮಿಕರ ಮುಖಂಡರಾದ ಅಕ್ತರ್ ಪಾಷ ಮಾತನಾಡಿ,ನಾಡಿನ ಜನತೆ ತೊಂದರೆಗೆ ಒಳಗಾದಾಗ ಜಾತಿ, ಧರ್ಮ ಮೀರಿ ಅವರಿಗೆ ಸಹಾಯ ಹಸ್ತ ಚಾಚುವ ಕೆಲಸವನ್ನು ತಮ್ಮ ದೈನಂದಿನ ವೃತ್ತಿಯ ನಡುವೆಯೂ ನಮ್ಮ ನೌಕರರು ಮಾಡಿದ್ದಾರೆ ಎಂದರು.
ನೌಕರರ ಸಂಘದವರು ನೀಡಿದ ಚೆಕ್ ಸ್ವೀಕರಿಸಿ ಮಾತನಾಡಿದ ತುಮಕೂರು ವಿಭಾಗೀಯ ನಿಯಂತ್ರಣಾಧಿಕಾರಿ ಎ.ಎನ್.ಗಜೇಂದ್ರಕುಮಾರ್,ಸಾರಿಗೆ ನಿಗಮದ ನೌಕರರು ಬಹಳಷ್ಟು ಶ್ರಮಜೀವಿಗಳು, ಹಗಲು ರಾತ್ರಿ ಎನ್ನದೆ ಈ ನಾಡಿನ ಜನರ ಸೇವೆ ಮಾಡುತ್ತಿದ್ದಾರೆ.ಅವರ ನೀಡುವ ಪ್ರತಿ ಪೈಸೆಯೂ ಬಹಳ ಶ್ರಮದಿಂದ ಗಳಿಸಿದ ಹಣವಾಗಿದೆ.ಇದನ್ನು ಕೊಡಗು ಸಂತ್ರಸ್ಥರ ನಿಧಿಗೆ ನೀಡುತ್ತಿರುವುದು ಸಂತೋಷದ ವಿಚಾರವಾಗಿದೆ.ಇದು ಕೊಡಗಿನ ಜನರಿಗೆ ಬಹಳ ಉಪಯುಕ್ತವಾಗಲಿದೆ ಎಂದರು.
ಈ ಸಂದರ್ಭದಲ್ಲಿ ಅಧಿಕಾರಿಗಳಾದ ಪಕೃದ್ದೀನ್,ಬಸವರಾಜು,ನಾಗೇಶಕುಮಾರ್,ಹಂಸವೀಣಾ,ಹೆಚ್.ಎಸ್.ರಾಜಶೇಖರ್, ರಾಮಾಂಜನೇಯ ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು

Recent Articles

spot_img

Related Stories

Share via
Copy link