ಕೆಎಸ್‍ಓಯು ಗತವೈಭವಕ್ಕಾಗಿ ಪಠ್ಯ ಅಪ್‍ಡೇಟ್ ಆಗಲಿ

ದಾವಣಗೆರೆ:

              ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಗತವೈಭವ ಮರುಕಳಿಸಬೇಕಾದರೆ, ಕಾಲಕ್ಕೆ ತಕ್ಕಂತೆ ಪಠ್ಯಗಳು ಹಾಗೂ ಬೋಧಕರು ಅಪ್‍ಡೇಟ್ ಆಗಬೇಕೆಂದು ವಿಶ್ವ ವಿದ್ಯಾನಿಲಯಗಳ ರಾಜ್ಯ ಅಧ್ಯಪಕರ ಸಂಘದ ಮಾಜಿ ಅಧ್ಯಕ್ಷ ಪ್ರೊ.ಸಿ.ಹೆಚ್.ಮುರುಗೇಂದ್ರಪ್ಪ ಪ್ರತಿಪಾದಿಸಿದರು.

               ನಗರದ ಹೊರವಲಯದ ಜೆ.ಹೆಚ್.ಪಟೇಲ್ ಬಡಾವಣೆಯಲ್ಲಿರುವ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಪ್ರಾದೇಶಿಕ ಕೇಂದ್ರದಲ್ಲಿ ಸೋಮವಾರ ಏರ್ಪಡಿಸಿದ್ದ ಗಣ್ಯರೊಂದಿಗೆ ಕೆಎಸ್‍ಓಯು ಸಂವಾದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಹಿಂದೇ ನಾವು ಓದುತ್ತಿದ್ದ ಪಠ್ಯಗಳನ್ನೇ ಇಂದಿನ ವಿದ್ಯಾರ್ಥಿಗಳಿಗೂ ಬೋಧಿಸುತ್ತಿರುವುದು ಸರಿಯಲ್ಲ. ಬದಲಾಗುತ್ತಿರುವ ಕಾಲಕ್ಕೆ ತಕ್ಕಂತೆ, ವಿವಿಯ ಪಠ್ಯಗಳು ಹಾಗೂ ಬೋಧಕರು ಅಪ್‍ಡೇಟ್ ಆಗಬೇಕು. ಆಗ ಮಾತ್ರ ಕೆಎಸ್‍ಓಯುನ ಗತವೈಭವ ಮರುಕಳಿಸಲು ಸಾಧ್ಯವಾಗಲಿದೆ ಎಂದರು.

                 ದೂರ ಶಿಕ್ಷಣ ಅಂದರೇನೆ ಈಗ ಪರೀಕ್ಷೆಯಲ್ಲಿ ಸಾಮೂಹಿಕ ನಕಲು(ಮಾಸ್ ಕಾಪಿ) ಮಾಡಿಸುವ ಕೇಂದ್ರಗಳು ಎಂಬ ಅಭಿಪ್ರಾಯ ಇದೆ. ಆದರೆ, ಇಡೀ ಭಾರತದಲ್ಲಿಯೇ ಇಂದಿರಾಗಾಂಧಿ ಮುಕ್ತ ವಿಶ್ವವಿದ್ಯಾನಿಲಯ(ಇಗ್ನೋ) ಹಾಗೂ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ ಇವರಡರಲ್ಲಿ ಮಾತ್ರ ಪಾರದರ್ಶಕವಾಗಿ ಪರೀಕ್ಷೆ ನಡೆಸಲಾಗುತ್ತಿದೆ. ಆದರೆ, ಇನ್ನುಳಿದಂತೆ ಬಹುತೇಕ ದೂರ ಶಿಕ್ಷಣ ನೀಡುವ ಮುಕ್ತ ವಿವಿಗಳ ಅಧ್ಯಯನ ಕೇಂದ್ರಗಳಲ್ಲಿ ಪ್ರವೇಶದ ಸಂದರ್ಭದಲ್ಲಿಯೇ ಪರೀಕ್ಷೆಯಲ್ಲಿ ನಕಲು ಮಾಡಿಸಲು 5 ಸಾವಿರ ರೂ. ಹಣ ಕಟ್ಟಿಸಿಕೊಳ್ಳುತ್ತಾರೆ. ಹೀಗಾಗಿ ಪ್ರಸ್ತುತ ಶಿಕ್ಷಣ ಎಂಬುದು ಮಾರುಕಟ್ಟೆಯ ಸರಕಾದಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

          ಮಾತೃ ಭಾಷೆಯ ಜೊತೆಗೆ ಸಮೂಹ ಸಂಹವನಕ್ಕಾಗಿ ಇಂಗ್ಲಿಷ್ ಕಮ್ಯನಿಕೇಷನ್ ಕೋರ್ಸ್ ಆರಂಭಿಸುವ ಅವಶ್ಯಕತೆ ಇದೆ. ಅಲ್ಲದೆ, ನೀವು ನಿಮ್ಮ ವಿವಿಯಲ್ಲಿ ಪ್ರವೇಶ ಪಡೆದಿರುವ ವಿದ್ಯಾರ್ಥಿಗಳಿಗೆ ನಡೆಸುವ ಕಾಂಟ್ಯಾಕ್ಟ್ ಕ್ಲಾಸ್‍ಗಳು ಕೇವಲ ಕಾಟಾಚಾರಕ್ಕೆ ಮಾತ್ರ ನಡೆಸಬಾರದು. ಅಲ್ಲದೆ, ಕಾಲೇಜುಗಳಿಗೆ ಹೊರತು ಪಡಿಸಿ, ಬೇರ್ಯಾರಿಗೂ ಅಧ್ಯಯನ ಕೇಂದ್ರ ನೀಡಬಾರದು ಎಂದು ಕೆಎಸ್‍ಓಯುನ ಪ್ರಾದೇಶಿಕ ನಿರ್ದೇಶಕರಿಗೆ ಸಲಹೆ ನೀಡಿದರು.

           ವಾರ್ತಾಧಿಕಾರಿ ಡಿ.ಅಶೋಕಕುಮಾರ್ ಮಾತನಾಡಿ, ಹಲವು ಕಾರಣಗಳಿಂದ ಅರ್ಧಕ್ಕೆ ವಿದ್ಯಾಭ್ಯಾಸ ಮೊಟಕು ಗೊಳಿಸಿರುವವರಿಗೆ ಶಿಕ್ಷಣ ಮುಂದುವರೆಸಲು ಕೆಎಸ್‍ಓಯುನಲ್ಲಿ ಪೂರಕವಾದ ವಾತಾವರಣವಿದೆ. ಆದ್ದರಿಂದ ಈ ಅವಕಾಶದ ಸದುಪಯೋಗ ಪಡೆದುಕೊಳ್ಳಬೇಕೆಂದು ಕಿವಿಮಾತು ಹೇಳಿದರು.

          ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ.ಹೆಚ್.ಎಸ್.ಮಂಜುನಾಥ್ ಕುರ್ಕಿ ಮಾತನಾಡಿ, ಈ ಮುಕ್ತ ವಿವಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಕೆಲವರ ಬಾಹ್ಯ ವಿಷಯಗಳಿಂದ, ಅಂತರಂಗದ ಅರಿವಿನ ಕೊರತೆಯಿಂದ ಹಾಗೂ ನಿಯಮಾವಳಿಗಳನ್ನು ಉಲ್ಲಂಘಿಸಿ ಕೆಲಸ ಮಾಡಿದ್ದರ ಪರಿಣಾಮ ಈ ವಿವಿಯ ಸೇವೆ ಸ್ಥಗತಿಗೊಂಡಿತ್ತು. ಆದರೆ, ಈಗ ಮತ್ತೆ ಕೆಎಸ್‍ಓಯುಗೆ 2017ರ ಓಡಿಎಲ್‍ನ ನಿಯಮಾವಳಿಗಳಂತೆ ಮತ್ತೆ ಐದು ವರ್ಷಗಳಿಗೆ ಮಾನ್ಯತೆ ದೊರೆತಿದೆ. ಆದ್ದರಿಂದ ಈ ನಿಯಮಾವಳಿಗಳು ಪುಸ್ತಕಕ್ಕೆ ಸೀಮಿತವಾಗಿ, ಮತ್ತೆ ವಿವಿ ಮುಚ್ಚುವ ಪರಿಸ್ಥಿತಿ ನಿರ್ಮಾಣವಾಗದಂತೆ ನೋಡಿಕೊಳ್ಳಬೇಕೆಂದು ಸಲಹೆ ನೀಡಿದರು.

          ಒಂದು ವಿವಿ ತನ್ನ ಗುಣಮಟ್ಟ ಕಾಯ್ದುಕೊಳ್ಳಬೇಕಾದರೆ, ಬರೀ ಸಂವಾದ ಮತ್ತು ಪ್ರಚಾರಗಳಿಂದ ಮಾತ್ರ ಸಾಧ್ಯವಿಲ್ಲ. ಗುಣಮಟ್ಟ ಕಾಯ್ದುಕೊಳ್ಳಲು ಪ್ರವೇಶ, ಪರೀಕ್ಷೆ, ಫಲಿತಾಂಶ ಹಾಗೂ ಪಾರದರ್ಶಕ ಆಡಳಿತ ವ್ಯವಸ್ಥೆ ಇರಬೇಕು. ಈ ನಾಲ್ಕು ಅಂಶಗಳ ಮೇಲೆ, ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡುವಂತಾಗಲಿ ಎಂದು ಆಶಿಸಿದರು.

          ಯುಬಿಡಿಟಿ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಡಾ.ಯತೀಶ್ಚಂದ್ರ ಮಾತನಾಡಿ, ಯಾರಿಗೆ ಕಲಿಕೆ ದೂರವಾಗಿರುತ್ತಿತ್ತೋ, ಅಂಥವರಿಗೆ ವಿದ್ಯಾರ್ಹತೆ ಕಲ್ಪಿಸಬೇಕೆಂಬ ಉದ್ದೇಶದಿಂದ 1996ರಲ್ಲಿ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ ಆರಂಭವಾಯಿತು. ಇದರ ಮೂಲ ಆಶಯ ಮನೆ ಬಾಗಿಲಿಗೆ ಶಿಕ್ಷಣ ತಲುಪಿಸುವಂಥದ್ದಾಗಿದೆ ಎಂದರು.ವಿದ್ಯಾರ್ಥಿ ಮಂಜುನಾಥ್ ಮಾತನಾಡಿ, ಕೆಎಸ್‍ಓಯುನ ಬಗ್ಗೆ ಸಮಗ್ರವಾದ ಮಾಹಿತಿ ನೀಡಲು ಮೊಬೈಲ್ ಆಪ್ ಒಂದನ್ನು ಅಭಿವೃದ್ಧಿ ಪಡಿಸಬೇಕೆಂದು ಸಲಹೆ ನೀಡಿದರು.

         ಪ್ರಾಸ್ತಾವಿಕ ಮಾತನಾಡಿದ ಕೆಎಸ್‍ಓಯುನ ಪ್ರಾದೇಶಿಕ ನಿರ್ದೇಶಕ ಡಾ.ಸುಧಾಕರ್ ಹೊಸಳ್ಳಿ, ಕಳೆದ ಮೂರು ವರ್ಷಗಳಿಂದ ನಮ್ಮ ಕೆಎಸ್‍ಓಯುಗೆ ಗ್ರಹಣ ಹಿಡಿದಂತಾಗಿತ್ತು. ಆದರೆ, ಇಂದು ಆ ಗ್ರಹಣ ಬಿಡಿಸುವ ಕಾರ್ಯಕ್ರಮ ಇದಾಗಿದೆ. ದೇಶದಲ್ಲಿ ಹಲವು ವಿವಿಗಳು ದೂರ ಶಿಕ್ಷಣವನ್ನು ನೀಡುತ್ತಿವೆ. ಆದರೆ, ಮುಂದಿನ ಐದು ಶೈಕ್ಷಣಿಕ ವರ್ಷಗಳಿಗೆ ವಿದ್ಯಾರ್ಥಿಗಳ ಪ್ರವೇಶಕ್ಕೆ ಯುಜಿಸಿ ಅನುಮತಿ ನೀಡಿರುವುದು ಕೆಎಸ್‍ಓಯುಗೆ ಮಾತ್ರ. ಇಡೀ ದೇಶದಲ್ಲಿ ಇಗ್ನೋ ಹೊರತು ಪಡಿಸಿದರೆ, ವಿದ್ಯಾರ್ಥಿಗಳಿಗೆ ಪೂರಕವಾಗಿರುವ ಎಲ್ಲಾ ರೀತಿಯ ಮೌಲಭೂತ ಸೌಕರ್ಯಹೊಂದಿರುವ ವಿವಿ ಯಾವುದಾದರು ಇದ್ದರೆ ಕೆಎಸ್‍ಓಯು ಮಾತ್ರ. ಹೀಗಾಗಿ ಇನ್ನೂ ಮುಂದೆ ವಿವಿ ಮುಚ್ಚುವ ಮಾತೇ ಇಲ್ಲ ಎಂದರು.

          ಇನ್ನೂ ಮುಂದೆ ವಿವಿಗೆ ದಾಖಲಾದ ವಿದ್ಯಾರ್ಥಿಗಳಿಗೆ ಕಾಂಟ್ಯಾಕ್ಟ್ ಪ್ರೋಗ್ರಾಮ್ ನಡೆಸಲು ಸಂಪನ್ಮೂಲ ವ್ಯಕ್ತಿಗಳನ್ನು ಆಯ್ಕೆ ಮಾಡಿಕೊಳ್ಳಲು ಯುಜಿಸಿಗೆ ಆ ವ್ಯಕ್ತಿಯ ಸಮಗ್ರಮಾಹಿತಿ ನೀಡಬೇಕು. ಆಗ ಯುಜಿಸಿ ಸುಶಿಕ್ಷಿತ ಮತ್ತು ಅಧ್ಯಯನಶೀಲರನ್ನು ಸಂಪನ್ಮೂಲ ವ್ಯಕ್ತಿಯ ಆಯ್ಕೆಗೆ ಅನುಮತಿ ನೀಡಲಿದೆ. ಹೀಗಾಗಿ ದೂರ ಶಿಕ್ಷಣಕ್ಕೂ ಮತ್ತು ನಿರಂತರ ಶಿಕ್ಷಣಕ್ಕೂ ಯಾವುದೇ ವ್ಯತ್ಯಾಸವಿಲ್ಲ. ನಮ್ಮಲ್ಲಿ ಸ್ನಾತಕ ಮತ್ತು ಸನಾತಕೋತ್ತರ ಪದವಿ ಪಡೆದ ಸುಮಾರು 170 ಜನರು ಕೆಎಎಸ್ ಪರೀಕ್ಷೆ ಪಾಸ್ ಮಾಡಿಕೊಂಡು ಉನ್ನತ ಸ್ಥಾನದಲ್ಲಿದ್ದಾರೆ. ಅಲ್ಲದೆ, ವಿವಿಯ ಬಗ್ಗೆ ಸಮಗ್ರ ಮಾಹಿತಿ ನೀಡುವ ಆಪ್ ಸಹ ಅಭಿವೃದ್ಧಿ ಪಡಿಸಲಾಗುವುದು ಎಂದರು.

            ಕಾರ್ಯಕ್ರಮದಲ್ಲಿ ಎಸ್‍ಬಿಸಿ ಕಾಲೇಜಿನ ಪ್ರಾಂಶುಪಾಲ ಕೆ.ಷಣ್ಮುಖ, ಯುಬಿಡಿಟಿ ಕಾಲೇಜಿನ ಪ್ರಾಧ್ಯಾಪಕ ಡಾ.ಮಂಜುನಾಥ್, ವಿದ್ಯಾರ್ಥಿ ಪೋಷಕರುಗಳಾದ ಸನಾವುಲ್ಲಾ, ಬಸವರಾಜ್ ಎಸ್.ಎಸ್. ಮತ್ತಿತರರು ಉಪಸ್ಥಿತರಿದ್ದರು. ಟಿ.ಮಂಜುನಾಥ್ ಪ್ರಾರ್ಥಿಸಿದರು. ರವಿ.ಹೆಚ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap