ಹಿರಿಯೂರು :
ನಗರದ ಕೆನರಾಬ್ಯಾಂಕಿನಲ್ಲಿ ತಾಲ್ಲೂಕಿನ ಕೃಷಿಕರು ಕೃಷಿ ಉದ್ದೇಶಕ್ಕಾಗಿ ಸುಮಾರು 3 ಲಕ್ಷ ರೂಗಳವರೆಗೆ ತಮ್ಮ ಚಿನ್ನಾಭರಣಗಳನ್ನು ಅಡವಿಟ್ಟು ಸಾಲ ಪಡೆದಿದ್ದು, ಈ ಸಾಲವನ್ನು ಸರ್ಕಾರದ ಆದೇಶದಂತೆ ಶೇ. 4ರ ಬಡ್ಡಿ ಧರದಲ್ಲಿ ಹಣ ಕಟ್ಟಿ ರಿನ್ಯೂವಲ್ ಮಾಡಿಸಿದ್ದರು. ಬ್ಯಾಂಕ್ ಮ್ಯಾನೇಜರ್ ಸುಮಾರು ಶೇ 11 ರಷ್ಟು ಹೆಚ್ಚಿನ ಬಡ್ಡಿ ನಮೂದಿಸಿ, ಚಿನ್ನಾಭರಣಗಳನ್ನು ಹರಾಜು ಹಾಕುವುದಾಗಿ ರೈತರಿಗೆ ಪದೇ ಪದೇ ನೋಟೀಸ್ ನೀಡಿ ಕೃಷಿಕರಿಗೆ ಮಾನಸಿಕ ಹಿಂಸೆ ನೀಡುತ್ತಿದ್ದಾರೆ ಎಂಬುದಾಗಿ ತಾ||ರೈತಸಂಘದ ಅಧ್ಯಕ್ಷ ಕೆ.ಸಿ.ಹೊರಕೇರಪ್ಪ ಆರೋಪಿಸಿದರು.
ತಾಲ್ಲೂಕು ರೈತ ಸಂಘದ ಪದಾಧಿಕಾರಿಗಳ ನೇತೃತ್ವದಲ್ಲಿ ನಗರದ ಕೆನರಾ ಬ್ಯಾಂಕ್ ಶಾಖೆಗೆ ಮುತ್ತಿಗೆಹಾಕಿ ಪ್ರತಿಭಟನೆ ನಡೆಸಿ ನಂತರ ಪ್ರತಿಭಟನಾಕಾರರನ್ನು ಉದ್ದೇಶಿಸಿ ಅವರು ಮಾತನಾಡಿದರು.
ಜಿಲ್ಲಾ ರೈತ ಸಂಘದ ಗೌ||ಅಧ್ಯಕ್ಷ ಎಸ್.ಪಿ.ಶಿವಕುಮಾರ್ ಮಾತನಾಡಿ, ಈ ರೀತಿಯ ಬ್ಯಾಂಕ್ ಗಳ ಕಿರುಕುಳದಿಂದಾಗಿ ತಾಲ್ಲೂಕಿನಲ್ಲಿ ರೈತರ ಆತ್ಮಹತ್ಯೆಯ ಪ್ರಕರಣಗಳು ಹೆಚ್ಚಾಗುತ್ತಿವೆ ಎಂದರಲ್ಲದೆ ಈ ರೈತ ವಿರೋಧಿ ನೀತಿ ಅನುಸರಿಸುತ್ತಿರುವ ಬ್ಯಾಂಕ್ ಮ್ಯಾನೇಜರ್ ವಿರುದ್ಧ ಸರ್ಕಾರ ಈ ಕೂಡಲೇ ಸೂಕ್ತ ಕ್ರಮ ಕೈಗೊಳ್ಳುವಂತೆ ಅವರು ಆಗ್ರಹಿಸಿದರು.
ಈ ಪ್ರತಿಭಟನೆಯಲ್ಲಿ ತಾಲ್ಲೂಕು ರೈತ ಸಂಘದ ಗೌ||ಅಧ್ಯಕ್ಷ ಎ.ಕೃಷ್ಣಸ್ವಾಮಿ, ಆಲೂರು ಸಿದ್ದರಾಮಣ್ಣ, ದಸ್ತಗಿರಿ ಸಾಬ್, ಕೆ.ಟಿ.ತಿಪ್ಪೇಸ್ವಾಮಿ, ಶಿವಕುಮಾರ್ ಈಶ್ವರಗೆರೆ, ತಿಮ್ಮಾರೆಡ್ಡಿ,ಕಲ್ಪನಾ, ಲಕ್ಷ್ಮೀದೇವಿ, ರತ್ನಮ್ಮ, ದಾಕ್ಷಾಯಣಿ, ಅಕ್ಬರ್ ಅಲಿ, ಮುಕುಂದಪ್ಪ, ಸೋಮಸುಂದರಂ, ಅರಳೀಕೆರೆ ತಿಪ್ಪೇಸ್ವಾಮಿ, ಕೃಷ್ಣಾನಾಯ್ಕ್, ಸೆಲ್ವರಾಜ್, ವಿಜಯಕುಮಾರ್, ಆಲೂರು ಹುಲಿಯಪ್ಪ, ಮೂರ್ತಪ್ಪ, ರೇವಣ್ಣ, ರಾಮಕೃಷ್ಣ, ಷಣ್ಮುಗಂ, ಗೌಸ್ ಪೀರ್, ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು. ಪ್ರತಿಭಟನೆ ಸಂದರ್ಭದಲ್ಲಿ ಸಿ.ಪಿ.ಐ ಗುರುರಾಜ್ ಹಾಗೂ ಪಿ.ಎಸ್.ಐ.ಮಂಜುನಾಥ್ ಸೂಕ್ತ ಬಂದೋಬಸ್ತ್ ವ್ಯವಸ್ಥೆ ಕಲ್ಪಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ