ಕೆರೆಗಳು ತುಂಬಿದ್ದರೂ ಅಚ್ಚುಕಟ್ಟು ಪ್ರದೇಶಕ್ಕೆ ನೀರಿಲ್ಲ…!

ತಿಪಟೂರು:

                     ಸರ್ಕಾರದ ನೀತಿಯಿಂದ ಕೃಷಿಯಿಂದ ವಿಮುಖರಾಗುತ್ತಿರುವ ರೈತರು

ತಿಪಟೂರು ಉಪ ವಿಭಾಗದಲ್ಲಿ ಬರುವ ನೊಣವಿನಕೆರೆ, ಆಲ್ಬ್ಬೂರು, ಸಾಸಲಹಳ್ಳಿ, ಬಜಗೂರು ಹಾಗೂ ತುರುವೇಕೆರೆ ತಾಲ್ಲೂಕಿನ ಮಲ್ಲಾಘಟ್ಟಕೆರೆಯ ಅಚ್ಚುಕಟ್ಟು ಪ್ರದೇಶಕ್ಕೆ ಸೂಕ್ತ ಸಯಮದಲ್ಲಿ ನೀರು ಬಿಡುತ್ತಿಲ್ಲ. ಇದರಿಂದ ಸಮಯಕ್ಕೆ ಸರಿಯಾಗಿ ಬೆಳೆಯು ಬರುವುದಿಲ್ಲವೆಂದು ಹಲವಾರು ರೈತರು ಕೃಷಿಯಿಂದ ವಿಮುಖವಾಗುತ್ತಿದ್ದಾರೆ.

ಭತ್ತ ಕಾಳು ಕಟ್ಟುವ ಹಂತದಲ್ಲಿ ನೀರು ನಿಲ್ಲಿಸುತ್ತಾರೆ :

“ವ್ಯವಸಾಯ ಮನೆ ಮಕ್ಕಳೆಲ್ಲಾ ಸಾಯ” ಎಂಬ ಗಾದೆಮಾತನ್ನು ಸತ್ಯ ಮಾಡುವಂತೆ ತಿಪಟೂರು ಉಪವಿಭಾಗ ಮಟ್ಟದ ನೀರಾವರಿ ಸಲಹಾ ಸಮಿತಿಯು ನಡೆದುಕೊಳ್ಳುವಂತೆ ಕಾಣುತ್ತಿದೆ. ಹಿಂದಿನಂದಲೂ ಡಿಸೆಂಬರ್ ಕೊನೆಯ ವಾರದಲ್ಲಿ ಕೆರೆಯ ತೂಬನ್ನು ಎತ್ತಿ ಅಚ್ಚುಕಟ್ಟು ಪ್ರದೇಶಕ್ಕೆ ನೀರನ್ನು ಬಿಡಲಾಗುತ್ತಿತ್ತು.

ಈ ಸಂದರ್ಭಲ್ಲಿ ರೈತರು ಉತ್ತಮವಾದ ಬೆಳೆಯನ್ನು ಪಡೆದ ಬಹುತೇಕ ಉದಾಹರಣೆಗಳು ಇವೆ. ಆದರೆ ಕಾಲ ಬದಲಾದಂತೆ ತೂಬಿನ ಹತ್ತಿರದಿಂದ ಹೊರಟ ನೀರು ಅಚ್ಚುಕಟ್ಟು ಪ್ರದೇಶದ ಕೊನೆಯ ಭಾಗವನ್ನು ತಲುಪುವುದರೊಳಗಾಗಿ ತೂಬಿನ ಹತ್ತಿರದಲ್ಲಿ ಬೆಳೆ ಬರುತ್ತದೆ. ಇಲ್ಲಿ ಬೆಳೆ ಬಂದಿತೆಂದು ನೀರನ್ನು ನಿಲ್ಲಿಸುತ್ತಾರೆ.

ಆದರೆ ಕೊನೆಯ ಭಾಗದಲ್ಲಿ ಇನ್ನೂ ಕಾಳುಕಟ್ಟುವ ಹಂತದಲ್ಲಿದ್ದ ಭತ್ತದ ಪೈರನ್ನು ಉಳಿಸಿಕೊಳ್ಳಲು ರೈತರು ನೀರಿನ ಇತರೆ ಮೂಲವನ್ನು ಹುಡುಕಿಕೊಳ್ಳಬೇಕು ಇಲ್ಲದೇ ಹೋದರೆ ನಮಗೂ ಇದಕ್ಕೂ ಆಗಿಬರುವುದಿಲ್ಲವೆಂದು ಕೃಷಿ ಮಾಡುವುದನ್ನೆ ಬಿಡಬೇಕು ಈ ರೀತಿ ಇದೆ ಈ ಭಾಗದ ಅನ್ನದಾತನ ಪರಿಸ್ಥಿತಿ.

ಸಬೂಬು ಹೇಳುವ ಅಧಿಕಾರಿಗಳು :

ತಿಪಟೂರು ತಾಲ್ಲೂಕಿನ ನೊಣವಿನ ಕೆರೆಯ ಅಚ್ಚುಕಟ್ಟು ಪ್ರದೇಶ ಸೇರಿದಂತೆ ಸುಮಾರು 700 ಹೆಕ್ಟೇರ್ ಹಾಗೂ ತುರುವೇಕೆರೆಯ ಮಲ್ಲಾಘಟ್ಟಕೆರೆಯ ಸುಮಾರು 350 ಹೆಕ್ಟೇರ್ ಪ್ರದೇಶವನ್ನು ತಿಪಟೂರು ಉಪ ವಿಭಾಗದ ವ್ಯಾಪ್ತಿಗೆ ಬರುತ್ತದೆ ಹಾಗೂ ಈ ಸಮಿತಿಗೆ ಉಪ ವಿಭಾಗಾಧಿಕಾರಿಗಳು ಅಧ್ಯಕ್ಷರಾಗಿರುತ್ತಾರೆ.

ಈ ಬಗ್ಗೆ ಹೇಮಾವತಿ ನಾಲಾ ಅಧಿಕಾರಿಗಳನ್ನು ಕೇಳಿದರೆ ನಾವು ವರದಿಯನ್ನು ಉಪ ವಿಭಾಗಾಧಿಕಾರಿಗಳಿಗೆ ಕೊಟ್ಟಿದ್ದು, ಅವರು ಸಭೆ ಕರೆದು ನೀರನ್ನು ಬಿಡುತ್ತಾರೆಂದು ಹೇಳಿ ತಪ್ಪಿಸಿಕೊಳ್ಳುತ್ತಾರೆ. ಕಳೆದ ವರ್ಷದ ಸಭೆಯಲ್ಲಿ ನೊಣವಿನಕೆರೆ ಅಚ್ಚುಕಟ್ಟು ಪ್ರದೇಶದ ಅಧ್ಯಕ್ಷ ಸ್ವಾಮಿ ಮಾತನಾಡುತ್ತಾ ಹೇಳಿದಂತೆ ಉಪ ವಿಭಾಧಿಕಾರಿಗಳು ಬದಲಾಗುತ್ತಿದ್ದಾರೆಯೆ ವಿನಹ ರೈತರ ಜ್ವಲಂತ ಸಮಸ್ಯೆಗಳು ಬಗೆಹರಿಯುತ್ತಿಲ್ಲ ಎಂದಿದ್ದರು.

ಕಾಲುವೆಗಳನ್ನು ಸ್ವಚ್ಛ ಮಾಡಲು ಹಣವಿಲ್ಲ :

ಅಧಿಕಾರಿಗಳು ಕೆರೆಯ ಕಾಲುವೆಗಳನ್ನು ಯಾವುದೊ ಜೆಸಿಬಿಯನ್ನು ಬಳಸಿ ಅಲ್ಲಿ ಇಲ್ಲಿ ನಾಲ್ಕಾರು ಗಿಡಗಳನ್ನು ಕಿತ್ತು ಕಾಲುವೆಯನ್ನು ಅಚ್ಚುಕಟ್ಟು ಮಾಡಿದ್ದೇವೆಂದು ಹೇಳುತ್ತಾರೆ. ಆದರೇ ಕಾಲುವೆಗಳು ರಸ್ತೆಯ ಪಕ್ಕದಲ್ಲಿ ಮಾತ್ರ ಅರೆಬರೆ ಮಾತ್ರ ಸ್ವಚ್ಛವಾಗುತ್ತವೆ. ಇನ್ನುಳಿದಂತೆ ಕೊನೆಯ ಭಾಗಕ್ಕೆ ನೀರು ಸಾಗುವುದೆ ಇಲ್ಲ. ಕೇಳಿದರೆ ಕಾಲುವೆಗಳನ್ನು ಸ್ವಚ್ಛಮಾಡಲು ಹಣವಿಲ್ಲ ಎನ್ನುತ್ತಾರೆ.

ಆದರೇ ಈ ಸಂಕ್ರಾಂತಿ ಮುಗಿದರೂ ತಿಪಟೂರು ವಿಭಾಗ ಮಟ್ಟದ ನೀರಾವರಿ ಸಲಹಾ ಸಮಿತಿಯ ಸಭೆಯಲ್ಲಿ ಉಪ ವಿಭಾಗಾಧಿಕಾರಿಗಳು ಕರೆದಿಲ್ಲ, ಇವರು ಸಭೆಯನ್ನು ಕರೆದು ಕಾಲುವೆಗಳನ್ನು ಸರಿಪಡಿಸಿ ನೀರು ಬಿಡುವುದು ಯಾವಾಗ ಎಂದು ಅಚ್ಚುಕಟ್ಟು ಪ್ರದೇಶದ ರೈತರು ಚಕ್ರವಾಕ ಪಕ್ಷಿಯು ಮಳೆಯ ನೀರಿಗಾಗಿ ಕಾಯುವಂತೆ ಕಾಯುತ್ತಾ ಕುಳಿತಿದ್ದಾರೆ.

ಕಚೇರಿಯಲ್ಲಿ ಕುಳಿತು ಕೆಲಸ ಮಾಡುವವರಿಗೆ ರೈತರ ಕಷ್ಟವೆಲ್ಲಿ ತಿಳಿಯುತ್ತದೆ, ಸೂಕ್ತ ಸಮಯಕ್ಕೆ ಅಚ್ಚುಕಟ್ಟು ಪ್ರದೇಶಕ್ಕೆ ನೀರನ್ನು ಬಿಟ್ಟರೆ ಬೆಳೆಯು ಸಮೃದ್ಧವಾಗಿ ಬರುತ್ತದೆ. ಆದರೆ ಅಧಿಕಾರಿಗಳಿಗೆ ಸಮಯ ಸಿಕ್ಕಾಗ ಸಭೆ ಕರೆದು ನೀರು ಬಿಟ್ಟರೆ ಬೆಳೆ ಬರುವುದಿಲ್ಲ, ನೀರು ಸಾಕಾಗುವುದಿಲ್ಲ ಇದರಿಂದ ರೈತರು ಕೃಷಿಯಿಂದ ವಿಮುಖರಾಗುತ್ತಿದ್ದಾರೆ.

– ಬಸ್ತಿಹಳ್ಳಿ ರಾಜಣ್ಣ, ರೈತ ಸಂಘದ ಅಧ್ಯಕ್ಷ

                  ಕೆರೆಯಲ್ಲಿ ನೀರು ಎಷ್ಟಿದೆ ಹಾಗೂ ಎಷ್ಟು ದಿನಗಳು ನೀರನ್ನು ಬಿಡಬಹುದು ಎಂಬ ಬಗ್ಗೆ ಉಪ ವಿಭಾಗಾಧಿಕಾರಿಗಳಿಗೆ ಮಾಹಿತಿಯನ್ನು ನೀಡಿದ್ದೇವೆ. ಶೀಘ್ರದಲ್ಲಿಯೆ ಉಪ ವಿಭಾಗಾಧಿಕಾರಿಗಳು ಸಭೆಯನ್ನು ಕರೆದು ನೀರನ್ನು ಬಿಡುತ್ತಾರೆ.

–  ಹೇಮಾವತಿ ನಾಲಾ ಅಧಿಕಾರಿ, ಹೆಡಗರಹಳ್ಳಿ

 

  -ರಂಗನಾಥ್ ಪಾರ್ಥಸಾರಥಿ

          ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link