ಹರಪನಹಳ್ಳಿ,
ಏನೇ ಕೆಲಸ ಕಾರ್ಯಗಳಿದ್ದರೂ ನೇರವಾಗಿ ನನ್ನ ಬಳಿ ಬಂದು ಕೇಳಿ, ಆದರೆ ಬಿಜೆಪಿ ಅಭ್ಯರ್ಥಿಗೆ ಮತ ಹಾಕುವುದನ್ನು ಮರೆಯಬೇಡಿ ಎಂದು ಜಗಳೂರು ಶಾಸಕ ಎಸ್ .ವಿ.ರಾಮಚಂದ್ರಪ್ಪ ಮತದಾರರಿಗೆ ಹೇಳಿದರು.
ತಾಲೂಕಿನ ಅರಸಿಕೇರಿಯಲ್ಲಿ ದಾವಣಗೆರೆ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಜಿ.ಎಂ.ಸಿದ್ದೇಶ್ವರ ಅವರ ಪರವಾಗಿ ಭಾನುವಾರ ಮತ ಯಾಚನೆ ಮಾಡಿ ಮಾತನಾಡಿದರು. ಏನೇ ಕೆಲಸಗಳಿದ್ದರೂ ನೇರವಾಗಿ ನನ್ನ ಬಳಿ ಬಂದು ಕೇಳಿ ಎಂದರು.
ರಾಜ್ಯದಲ್ಲಿ ನಮ್ಮ ಸರ್ಕಾರವಿಲ್ಲದಿದ್ದರೂ ಸಮ್ಮಿಶ್ರ ಸರ್ಕಾರದ ಮೇಲೆ ಒತ್ತಡ ಹಾಕಿ ನಮ್ಮ ನಮ್ಮ ಕ್ಷೇತ್ರಗಳಿಗೆ ಅಭಿವೃದ್ದಿ ಕೆಲಸ ಮಾಡಿಸುತ್ತಲಿವೆ, ಈ ಭಾಗದ ಕುಡಿಯುವ ನೀರಿನ ಸಮಸ್ಯೆ ಶೀಘ್ರ ಬಗೆಹರಿಸುತ್ತೇವೆ ಎಂದು ಅವರು ಹೇಳಿದರು.
ಸಣ್ಣ ಪುಟ್ಟ ತಪ್ಪಾಗಿದ್ದರೆ ಮರೆತು ದೇಶದ ಹಿತದೃಷ್ಠಿಯಿಂದ ಜಾತಿ, ಮತ, ಎನ್ನದೆ ಬಿಜೆಪಿ ಅಭ್ಯರ್ಥಿ ಜಿ.ಎಂ.ಸಿದ್ದೇಶ್ವರ ಅವರಿಗೆ ಮತ ಕೊಟ್ಟು ಗೆಲ್ಲಿಸಿ ಎಂದು ಅವರು ಕೋರಿದರು.
ಅಭ್ಯರ್ಥಿ ಜಿ.ಎಂ.ಸಿದ್ದೇಶ್ವರ ಅವರ ಪುತ್ರ, ಬಿಜೆಪಿ ಯುವ ಮುಖಂಡ ಜಿ.ಅನಿತ್ ಕುಮಾರ ಅವರು ಮಾತನಾಡಿ ಈ ಚುನಾವಣೆ ಭವ್ಯ ಭಾರತದ ಹರಿಕಾರ ನರೇಂದ್ರಮೋದಿಯವರನ್ನು ಮತ್ತೊಮ್ಮೆ ಪ್ರಧಾನಿ ಮಾಡಲು ಹೊರಟಿರುವ ಚುನಾವಣೆಯಾಗಿದ್ದು, ನಮ್ಮ ತಂದೆವರಿಗೆ ಮತ ಹಾಕುವುದರ ಮೂಲಕ ಮೋದಿಯವರ ಕೈ ಬಲಪಡಿಸಿ ಎಂದು ತಿಳಿಸಿದರು.
ರಾಜ್ಯದಲ್ಲಿ ನಮ್ಮ ಸರ್ಕಾರವಿಲ್ಲ, ಈಗ ಇರುವುದು ಎಚ್ ಎಂ ಟಿ ಸರ್ಕಾರ ( ಹಾಸನ, ಮಂಡ್ಯ,ತುಮಕೂರು ) ಆದ್ದರಿಂದ ಈ ಭಾಗಕ್ಕೆ ಅನುದಾನ ಕಡಿಮೆ ಕೊಡಲಾಗುತ್ತದೆ, ಆದಾಗ್ಯು ಶಾಸಕ ಎಸ್ .ವಿ.ರಾಮಚಂದ್ರಪ್ಪ, ನಮ್ಮ ತಂದೆ ಸಿದ್ದೇಶ್ವರ ಅವರು ಹೋರಾಟ ಮಾಡಿ ಇಲ್ಲಿಗೆ ಅನುದಾನ ತರುತ್ತಾರೆ ಎಂದು ಅವರು ತಿಳಿಸಿದರು.
ಜನಧನ್ ಖಾತೆ, ಭೀಮಾ ಫಸಲ್ , ಗ್ಯಾಸ ಸಿಲಿಂಡರ್ ಸೇರಿದಂತೆ ಬಡವರಿಗೆ ನೇರವಾಗಿ ತಲುಪುವ ಯೋಜನೆಗಳನ್ನು ಮೋದಿಯವರು ಅನುಷ್ಠಾನಗೊಳಿಸಿದ್ದಾರೆ, ಆದ್ದರಿಂದ ಬಿಜೆಪಿ ಅಭ್ಯರ್ಥಿ ಗೆ ಮತ ಹಾಕಿ ಗೆಲ್ಲಿಸ್ಸಿ ಎಂದು ಅವರು ಮನವಿ ಮಾಡಿದರು.
ಅರಸಿಕೇರಿ ಬಿಜೆಪಿ ಯುವ ಮುಖಂಡ ವೈ.ಡಿ.ಅಣ್ಣಪ್ಪ ಮಾತನಾಡಿ ದಾವಣಗೆರೆ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಸಿದ್ದೇಶ್ವರ ಅವರಿಗೆ, ಮತ ಹಾಕಿ, ಬಳ್ಳಾರಿ ಕ್ಷೇತ್ರದಲ್ಲಿ ಸ್ಪರ್ದಿಸಿರುವ ನಮ್ಮ ತಂದೆ ದೇವೇಂದ್ರಪ್ಪ ಅವರ ಪರವಾಗಿ ಆ ಕ್ಷೇತ್ರದ ವ್ಯಾಪ್ತಿಯಲ್ಲಿರುವ ತಮ್ಮ ಬೀಗರು, ಬಿಜ್ಜರಿಗೆ ಮನವೊಲಿಸಿ ಮತ ಹಾಕಿಸಿ, ತಮ್ಮ ಏನೆ ಕೆಲಸ, ಕಾರ್ಯಗಳಿದ್ದರೂ ಮಾಡಿ ಕೊಡುತ್ತೇವೆ ಎಂದು ಅವರು ಹೇಳಿದರು.
ವಕೀಲ ಕೆ.ಎಂ.ವಿಶ್ವನಾಥಯ್ಯ, ಜಿ.ಪಂ ಸದಸ್ಯ ಡಿ.ಸಿದ್ದಪ್ಪ, ಚಟ್ನಿಹಳ್ಳಿ ರಾಜಪ್ಪ, ಬಾಲೇನಹಳ್ಳಿ ಕೆಂಚನಗೌಡ, ಜಿ.ಪಂ ಮಂಜಣ್ಣ, ಶಿವಯೋಗಿ, ಬಿಸ್ತುವಳ್ಳಿ ಭಾಬು, ಮತ್ತಿತರರು ಉಪಸ್ಥಿತರಿದ್ದರು.