ಬೆಂಗಳೂರು : ಪಶ್ಚಿಮ ಘಟ್ಟ ಪ್ರದೇಶದಲ್ಲಿ ವಾಸಿಸುವ ಜನತೆಯ ಭವಿಷ್ಯಕ್ಕೆ ಮಾರಕವಾಗುವ ಪಶ್ಚಿಮಘಟ್ಟ ಕುರಿತ ಕೇಂದ್ರ ಪರಿಸರ ಸಚಿವಾಲಯದ ಅಧಿಸೂಚನೆ ವಿರೋಧಿಸಿ ಮಲೆನಾಡು ಪ್ರದೇಶವನ್ನು ಪ್ರತಿನಿಧಿಸುವ ಶಾಸಕರ ಸಭೆಯನ್ನು ಜುಲೈ 18 ರಂದು, ಗೃಹ ಸಚಿವ ಆರಗ ಜ್ಞಾನೇಂದ್ರ ರವರು ಕರೆದಿದ್ದಾರೆ.
ಕಳೆದ ವಾರ, ಕೇಂದ್ರ ಪರಿಸರ ಮತ್ತು ಅರಣ್ಯ ಸಚಿವಾಲಯ, ಕರ್ನಾಟಕ ರಾಜ್ಯವೂ ಒಳಗೊಂಡಂತೆ ಒಟ್ಟು 56826 ಚದರ ಕಿಲೋ ಮೀಟರ್ ಪ್ರದೇಶವನ್ನು ಪರಿಸರ ಸೂಕ್ಷ್ಮ ಪ್ರದೇಶವೆಂದು ಅಧಿಸೂಚನೆ ಹೊರಡಿಸಿದ್ದು ಆಕ್ಷೇಪಣೆ ಸಲ್ಲಿಸಲು ಎರಡು ತಿಂಗಳು ಗಡುವು ನೀಡಲಾಗಿದೆ ಎಂದರು.
“ಒಂದು ವೇಳೆ ಈ ಅಧಿಸೂಚನೆ ಅನುಷ್ಠಾನಗೊಂಡರೆ, ಮಲೆನಾಡು ನಿವಾಸಿಗಳ ಬದುಕು ಮಸುಕಾಗುತ್ತದೆ ಅಭಿವೃದ್ದಿ ಕುಂಟುತ್ತದೆ ಹಾಗೂ ತೀವ್ರ ಆರ್ಥಿಕ ಹಾನಿಗೆ ತುತ್ತಾಗಬೇಕಾಗುತ್ತದೆ”.
ಕರ್ನಾಟಕ ಸರಕಾರ ಈ ಹಿಂದೆ ಆಡಿ ಕಸ್ತೂರಿರಂಗನ್ ಸಮಿತಿ ವರದಿಯನ್ನು ತಿರಸ್ಕರಿಸಿದೆ ಹಾಗೂ ತನ್ನ ನಿಲುವಿನ ಬಗ್ಗೆ ಸ್ಪಷ್ಟ ಅಭಿಪ್ರಾಯ ತಿಳಿಸಿದೆ ಆ ನಿಲುವಿನಲ್ಲಿ ಯಾವುದೇ ಬದಲಾವಣೆ ಮಾಡಬಾರದೆಂಬ ಈ ಭಾಗದ ಶಾಸಕರ ಆಗ್ರಹವಾಗಿದೆ, ಎಂದಿರುವ ಸಚಿವರು, ಸೋಮವಾರದ ಸಭೆಯಲ್ಲಿ, ಅಧಿಸೂಚನೆ ಯನ್ನು ವಿರೋಧಿಸಿ, ಗೊತ್ತುವಳಿಯನ್ನು ಮಂಡನೆ ಮಾಡಲಾಗುವುದು, ಎಂದೂ ತಿಳಿಸಿದ್ದಾರೆ.