ಕೇಂದ್ರ ಸರ್ಕಾರದಿಂದ ಜಿಲ್ಲೆಗೆ 40 ಸಾವಿರ ಕೋಟಿ ಅನುದಾನ- ಜನಾರ್ಥನಸ್ವಾಮಿ

ಚಳ್ಳಕೆರೆ

          ಪ್ರಧಾನ ಮಂತ್ರಿ ನರೇಂದ್ರ ಮೋದಿ ನಗರ ಹಾಗೂ ಗ್ರಾಮೀಣ ಪ್ರದೇಶಗಳ ಅಭಿವೃದ್ಧಿಗೆ ಹೆಚ್ಚು ಆದ್ಯತೆ ನೀಡುತ್ತಿದ್ದು, ಎನ್‍ಡಿಎ ಸರ್ಕಾರದ ಕಾಲಾವಧಿಯಲ್ಲಿ ಚಿತ್ರದುರ್ಗ ಜಿಲ್ಲೆಗೆ ಇದುವರೆಗೂ 40 ಸಾವಿರ ಕೋಟಿ ಅನುದಾನವನ್ನು ಕೇಂದ್ರ ಸರ್ಕಾರ ನೀಡಿದೆ ಎಂದು ಮಾಜಿ ಲೋಕಸಭಾ ಸದಸ್ಯ ಜನಾರ್ಥನಸ್ವಾಮಿ ತಿಳಿಸಿದರು.

           ಅವರು, ಬುಧವಾರ ನಗರದ 1 ಮತ್ತು 2ನೇ ವಾರ್ಡ್‍ಗಳಲ್ಲಿ ಬಿಜೆಪಿ ಅಭ್ಯರ್ಥಿಗಳಾದ ಸಾಕಮ್ಮ ಮತ್ತು ಜೆ.ಕೆ.ರವಿಪರ ಮನೆ ಮನೆಗೂ ತೆರಳಿ ಪ್ರಚಾರ ಕೈಗೊಂಡರಲ್ಲದೆ ನಂತರ ಪತ್ರಿಕೆಯೊಂದಿಗೆ ಮಾತನಾಡುತ್ತಾ, ಸ್ಥಳೀಯ ಸಂಸ್ಥೆಗಳ ಚುನಾವಣೆಯ ಫಲಿತಾಂಶಗಳು ರಾಷ್ಟ್ರ ಮಟ್ಟದಲ್ಲಿ ಭಾರತೀಯ ಜನತಾ ಪಕ್ಷದ ಗೌರವವನ್ನು ಎತ್ತಿಹಿಡಿಯುವ ಹಿನ್ನೆಲೆಯಲ್ಲಿ ಇಲ್ಲಿನ ನಗರಸಭೆಯ ಚುನಾವಣೆಯಲ್ಲಿ ಮತದಾರರು ಮತ್ತೊಮ್ಮೆ ರಾಷ್ಟ್ರದ ಪ್ರಧಾನ ಮಂತ್ರಿಯಾಗಿ ನರೇಂದ್ರ ಮೋದಿಯವರೇ ಎರಡನೇ ಬಾರಿ ಅಧಿಕಾರಕ್ಕೆ ಬರಲಿ ಎಂದು ಮತಚಲಾಯಿಸಬೇಕೆಂದರು. ಈಗಾಗಲೇ ಚಿತ್ರದುರ್ಗ ನಗರಸಭೆ ಮತ್ತು ಹೊಸದುರ್ಗ ಪುರಸಭೆ ವ್ಯಾಪ್ತಿಯಲ್ಲಿ ಪ್ರಚಾರ ಕೈಗೊಂಡಿದ್ದು, ಬಿಜೆಪಿ ಪರವಾಗಿ ಬಲವಾದ ಅಲೆ ಇದೆ ಎಂದರು.

            ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಪ್ರಧಾನ ಮಂತ್ರಿಯವರ ಮಾರ್ಗದರ್ಶನದಲ್ಲಿ ಚುನಾವಣೆ ನಡೆದಿದ್ದು, ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪನವರ ನೇತೃತ್ವದಲ್ಲಿ 104 ಸ್ಥಾನಗಳನ್ನು ಗಳಿಸಿ ರಾಜ್ಯದಲ್ಲಿ ಅತಿ ಹೆಚ್ಚು ಸ್ಥಾನಗಳನ್ನು ಪಡೆದು ರಾಷ್ಟ್ರೀಯ ಪಕ್ಷವಾಗಿ ಬಿಜೆಪಿ ಹೊರ ಹೊಮ್ಮಿತ್ತು. ರಾಜ್ಯದ ಜನತೆಯ ಇಚ್ಚೆ ಬಿಜೆಪಿ ಆಡಳಿತ ಬಯಸಿತ್ತು. ಆದರೆ, ಕಾಂಗ್ರೆಸ್ ಪಕ್ಷದ ರಾಜಕೀಯ ಕುತಂತ್ರದಿಂದ ಜೆಡಿಎಸ್ ಮೈತ್ರಿ ಸರ್ಕಾರ ಆಡಳಿತ ನಡೆಸುತ್ತಿದೆ. ರಾಷ್ಟ್ರ ರಾಜ್ಯ ಹಾಗೂ ಸ್ಥಳೀಯ ಸಂಸ್ಥೆಯಲ್ಲಿ ಒಂದೇ ಪಕ್ಷದ ಆಡಳಿತವಿದ್ದಲ್ಲಿ ಅಭಿವೃದ್ಧಿಯ ವೇಗ ಹೆಚ್ಚುತ್ತದೆ ಎಂದರು. ಈ ನಿಟ್ಟಿನಲ್ಲಿ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಇನ್ನೂ ಹೆಚ್ಚು ಸಂಘಟಕನಾತ್ಮಕವಾಗಿ ಚುನಾವಣೆಯಲ್ಲಿ ತೊಡಗಿಕೊಳ್ಳುವಂತೆ ಮನವಿ ಮಾಡಿದರು. ಇದೇ ಸಂದರ್ಭದಲ್ಲಿ ಇತ್ತೀಚೆಗೆ ತಾನೇ ನಿಧನರಾದ ತಿಪ್ಪೇಸ್ವಾಮಿಯವರ ಬಗ್ಗೆ ಮಾತನಾಡಿದ ಅವರು, ರಾಜ್ಯದ ಪರಿಶಿಷ್ಟ ವರ್ಗದ ಸಮುದಾಯದ ಹಿರಿಯ ರಾಜಕಾರಣಿಯಾಗಿದ್ದ ಅವರ ಸಾವು ತುಂಬಲಾರದ ನಷ್ಟವೆಂದರು.

              ಜಿಲ್ಲೆಯಲ್ಲಿ ಇನ್ನೂ ಹೆಚ್ಚಿನ ಕೈಗಾರಿಕೆಗಳು ಸ್ಥಾಪಿತವಾಗಬೇಕಿದೆ. ಉದ್ಯೋಗವಿಲ್ಲದೆ ಪರಿತಪಿಸುತ್ತಿರುವ ಸಾವಿರಾರು ನಿರುದ್ಯೋಗಿಗಳಿಗೆ ಉದ್ಯೋಗ ಪಡೆಯುವ ಕನಸು ನನಸಾಗಬೇಕಿದೆ. ಈ ನಿಟ್ಟಿನಲ್ಲಿ ಕೈಗಾರಿಕೆಗಳ ಸ್ಥಾಪನೆಗೆ ಒತ್ತು ನೀಡಬೇಕಿದೆ. ನಗರದ ಜನತೆ ಈ ಬಾರಿಯ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷಕ್ಕೆ ಹೆಚ್ಚಿನ ಸ್ಥಾನ ನೀಡುವಲ್ಲಿ ಸಫಲರಾಗುವರು ಎಂಬ ವಿಶ್ವಾಸ ನನಗೆ ಇದೆ ಎಂದರು.

              ಈ ಸಂದರ್ಭದಲ್ಲಿ ಯುವ ಮುಖಂಡ ಕೆ.ಟಿ.ಕುಮಾರಸ್ವಾಮಿ, ಜಿಲ್ಲಾ ಉಪಾಧ್ಯಕ್ಷ ಬಿ.ಎಸ್.ಶಿಪುತ್ರಪ್ಪ, ಮಂಡಲಾಧ್ಯಕ್ಷ ಬಿ.ವಿ.ಸಿರಿಯಣ್ಣ, ಹಿರಿಯ ಮುಖಂಡ ವೆಂಕಟಪ್ಪ, ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ವೆಂಕಟೇಶ್, ಡಿ.ಎಂ.ತಿಪ್ಪೇಸ್ವಾಮಿ, ಸಿ.ಬಿ.ಬಾಲರಾಜು, ಸಿ.ಎಸ್.ಪ್ರಸಾದ್, ಅಭ್ಯರ್ಥಿಗಳಾದ ಸಾಕಮ್ಮ, ಜೆ.ಕೆ.ರವಿ, ಶಿವಕುಮಾರ್, ನಾಗೇಶ್, ಎಂವೈಟಿ ಸ್ವಾಮಿ, ಎ.ವಿಜಯೇಂದ್ರ, ಕ್ಯಾತಣ್ಣ, ಬಿ.ತಿಪ್ಪೇಸ್ವಾಮಿ ಮುಂತಾದವರು ಉಪಸ್ಥಿತರಿದ್ದರು.

          ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap