ಚಿತ್ರದುರ್ಗ:
ಉದ್ದಿಮೆದಾರರು, ಬಂಡವಾಳ ಶಾಹಿಗಳು ಹಾಗೂ ಕಾರ್ಪೊರೇಟ್ ಕಂಪನಿಗಳ ಪರವಾಗಿರುವ ಕೇಂದ್ರ ಸರ್ಕಾರದ ವಿರುದ್ದ ಭಾರತ ಕಮ್ಯುನಿಸ್ಟ್ ಪಕ್ಷ ಜಿಲ್ಲಾ ಸಮಿತಿಯಿಂದ ಮಂಗಳವಾರ ಗಾಂಧಿವೃತ್ತದಲ್ಲಿ ಪ್ರತಿಭಟನೆ ನಡೆಸಲಾಯಿತು.
ದಾವಣಗೆರೆ ರಸ್ತೆಯಲ್ಲಿರುವ ಕಮ್ಯುನಿಸ್ಟ್ ಕಾರ್ಯಾಲಯದಿಂದ ಮೆರವಣಿಗೆ ಮೂಲಕ ಗಾಂಧಿವೃತ್ತಕ್ಕೆ ಆಗಮಿಸಿದ ಪ್ರತಿಭಟನಾಕಾರರು ಕೇಂದ್ರ ಸರ್ಕಾರದ ವಿರುದ್ದ ಧಿಕ್ಕಾರಗಳನ್ನು ಕೂಗಿದರು.
ಪ್ರತಿಭಟನೆಯ ನೇತೃತ್ವ ವಹಿಸಿದ್ದ ಭಾರತ ಕಮ್ಯುನಿಸ್ಟ್ ಪಕ್ಷ ಜಲ್ಲಾ ಸಮಿತಿಯ ಸಹ ಕಾರ್ಯದರ್ಶಿ ಕಾಂ.ಜಿ.ಸಿ.ಸುರೇಶ್‍ಬಾಬು ಮಾತನಾಡಿ ಚುನಾವಣಾ ಪೂರ್ವದಲ್ಲಿ ದೇಶದ ಜನರಿಗೆ ಪೊಳ್ಳು ಭರವಸೆಗಳನ್ನು ನೀಡಿದ ನರೇಂದ್ರಮೋದಿ ದೇಶದ ಪ್ರಧಾನಿಯಾದ ಮೇಲೆ ಕಾರ್ಮಿಕರು, ರೈತರು, ಕೂಲಿಕಾರರು, ಬಡವರು, ಮಧ್ಯಮ ವರ್ಗದವರನ್ನು ಸಂಪೂರ್ಣವಾಗಿ ಕಡೆಗಣಿಸಿ ಬಂಡವಾಳಶಾಹಿಗಳ ಪರವಾಗಿ ನಿಂತಿದ್ದಾರೆ. ಪೆಟ್ರೋಲ್, ಡೀಸೆಲ್, ಗ್ಯಾಸ್ ಸಿಲಿಂಡರ್ ಹಾಗೂ ಅಗತ್ಯ ವಸ್ತುಗಳ ಬೆಲೆಯನ್ನು ನಿಯಂತ್ರಿಸಲು ದೇಶದ ಪ್ರಧಾನಿಗೆ ಆಗುತ್ತಿಲ್ಲ. ಶಿಕ್ಷಣ ಮತ್ತು ಆರೋಗ್ಯ ಶುಲ್ಕವನ್ನು ಹೆಚ್ಚಿಸಿ ಎಲ್ಲಾ ವಸ್ತುಗಳ ಮೇಲೆ ಜಿ.ಎಸ್.ಟಿ.ವಿಧಿಸಿರುವುದು ಜನತೆಗೆ ಹೊರೆಯಾಗಿದೆ ಎಂದು ಖಂಡಿಸಿದರು.
ಕಾಂ.ಸಿ.ವೈ.ಶಿವರುದ್ರಪ್ಪ ಮಾತನಾಡುತ್ತ ಜೀವನಾಶ್ಯಕ ವಸ್ತುಗಳ ಬೆಲೆಯನ್ನು ಗಗನಕ್ಕೇರಿಸಿರುವ ಕೇಂದ್ರ ಸರ್ಕಾರ ದುಡಿಯುವ ಕೈಗಳಿಗೆ ಉದ್ಯೋಗ ನೀಡುವಲ್ಲಿ ವಿಫಲವಾಗಿದೆ. ಅನ್ನದಾತ ರೈತನ ಸಾಲ ಮನ್ನ ಮಾಡಲು ಆಸಕ್ತಿಯಿಲ್ಲ. ರೈತರ ಕೃಷಿ ಉತ್ಪನ್ನಗಳಿಗೆ ನ್ಯಾಯಯುತವಾದ ಬೆಲೆ ನೀಡುವ ಡಾ.ಎಂ.ಎಸ್.ಸ್ವಾಮಿನಾಥ್‍ನ್ ವರದಿಯನ್ನು ಕೂಡಲೇ ಯಥಾವತ್ತಾಗಿ ಜಾರಿಗೆ ತರಬೇಕು ಎಂದು ಒತ್ತಾಯಿಸಿದರು.
ಕಾರ್ಮಿಕರ ಹಿತರಕ್ಷಣೆಗಾಗಿಯೇ ಇರುವ ಕೆಲವು ಕಾನೂನುಗಳನ್ನು ಬಂಡವಾಳಶಾಹಿಗಳ ಪರವಾಗಿ ತಿದ್ದುಪಡಿ ಮಾಡುವುದನ್ನು ಕೈಬಿಡಬೇಕು. ದಲಿತರು, ಅಲ್ಪಸಂಖ್ಯಾತರು, ಮಹಿಳೆ ಮಕ್ಕಳ ಮೇಲೆ ನಿರಂತರವಾಗಿ ನಡೆಯುತ್ತಿರುವ ದೌರ್ಜನ್ಯ ಅತ್ಯಾಚಾರ, ಕಿರುಕುಳಗಳು ನಿಲ್ಲಬೇಕು. ಲೋಕಪಾಲ ನೇಮಕ ಮಾಡಿ ಭ್ರಷ್ಟಾಚಾರವನ್ನು ತಡೆಗಟ್ಟಬೇಕು. ಮಾಹಿತಿ ಹಕ್ಕು ಕಾನೂನಿಗೆ ತಿದ್ದುಪಡಿ ಮಸೂದೆ ಹಿಂದಕ್ಕೆ ಪಡೆಯಬೇಕು. ಕಾಶ್ಮೀರ ಸೇರಿದಂತೆ ದೇಶದ ಗಡಿಗಳಲ್ಲಿ ಮಿತಿಮೀರಿರುವ ಉಗ್ರಗಾಮಿಗಳ, ಭಯೋತ್ಪಾದಕರ ಹುಟ್ಟಡಗಿಸಿ ಅಲ್ಲಿನ ಅಮಾಯಕರಿಗೆ ಸೂಕ್ತ ರಕ್ಷಣೆ ನೀಡಬೇಕು ಎಂದು ಆಗ್ರಹಿಸಿದರು.
ಎ.ಐ.ಟಿ.ಯು.ಸಿ.ರಾಜ್ಯ ಪ್ರಧಾನ ಕಾರ್ಯದರ್ಶಿ ಶಿವಣ್ಣ, ಕುಮಾರಣ್ಣ, ಸತ್ಯಕೀರ್ತಿ, ಗಣೇಶ್, ಉಮಾಪತಿ, ರಮೇಶ್, ಜಮುನಾಬಾಯಿ ಇನ್ನು ಮುಂತಾದವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.