ತುಮಕೂರು:
ಶಿಕ್ಷಣ ಕಾಶಿ ಎಂದೇ ಹೆಸರಾಗಿರುವ ತುಮಕೂರು ಜಿಲ್ಲೆಯು ಕೈಗಾರಿಕಾ ಕೇಂದ್ರವಾಗಿ ಬೆಳೆಯುತ್ತಿದೆ ಎಂದು ಉಪ ಮುಖ್ಯಮಂತ್ರಿ, ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದರು.
ನಗರದ ಮಹಾತ್ಮಗಾಂಧಿ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದ್ದ 72ನೇ ಸ್ವಾತಂತ್ರ್ಯೋತ್ಸವ ದಿನಾಚರಣೆಯಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡುತ್ತಿದ್ದ ಅವರು, ವಸಂತ ನರಸಾಪುರ ಕೈಗಾರಿಕಾ ಪ್ರದೇಶದಲ್ಲಿ ಈಗಾಗಲೇ ಅತಿ ದೊಡ್ಡ ಫುಡ್ ಪಾರ್ಕ್, ಬಿದರೆಹಳ್ಳ ಕಾವಲ್ ಗ್ರಾಮದ 610 ಎಕರೆ ಪ್ರದೇಶದಲ್ಲಿ ಹೆಚ್‍ಎಎಲ್‍ನ ಹೆಲಿಕಾಪ್ಟರ್ ತಯಾರಿಕಾ ಘಟಕ, ಎಚ್‍ಎಂಟಿ ಕಾರ್ಖಾನೆ ಇದ್ದಂತಹ ಪ್ರದೇಶದಲ್ಲಿ ಕೇಂದ್ರ ಸರ್ಕಾರದ ಇಸ್ರೊ ಸಂಸ್ಥೆಯ ಸಂಶೋಧನಾ ಕೇಂದ್ರ, ಪಾವಗಡದಲ್ಲಿ ಸುಮಾರು 13,000 ಎಕರೆ ಪ್ರದೇಶದಲ್ಲಿ ಅತಿ ದೊಡ್ಡ ಸೋಲಾರ್ ಪಾರ್ಕ್ ನಿರ್ಮಾಣ ಹಾಗೂ ತುಂಬುಗಾನಹಳ್ಳಿ ಗ್ರಾಮದಲ್ಲಿ ಪೊಲೀಸ್ ಅಕಾಡೆಮಿ ಸ್ಥಾಪನೆಯಾಗುತ್ತಿರುವುದು ಜಿಲ್ಲೆಯು ಅಭಿವೃದ್ಧಿ ಪಥದತ್ತ ಸಾಗುತ್ತಿರುವುದಕ್ಕೆ ಸಾಕ್ಷಿಯಾಗಿದೆ ಎಂದರು.
ಸ್ವಾತಂತ್ರ್ಯ ಗಳಿಸಿ 71 ವರ್ಷಗಳು ತುಂಬಿದ್ದು, ನಮ್ಮ ದೇಶವು ಪ್ರಪಂಚದಲ್ಲಿ ತನ್ನದೇ ಆದ ಸ್ಥಾನವನ್ನು ಪಡೆಯುವಲ್ಲಿ ಯಶಸ್ಸನ್ನು ಸಾಧಿಸಿದೆ. ದೇಶವು ಎಲ್ಲಾ ಕ್ಷೇತ್ರಗಳಲ್ಲಿ ಅಭಿವೃದ್ಧಿ ಪಥದಲ್ಲಿ ಸಾಗುತ್ತಿರುವುದು ಹೆಮ್ಮೆಯ ವಿಷಯವಾಗಿದೆ. ದೇಶದಾದ್ಯಂತ ಕೃಷಿ ಕ್ಷೇತ್ರದಲ್ಲಿ ಉತ್ತಮ ಪ್ರಗತಿ ಸಾಧಿಸಿ ಸ್ವಾವಲಂಬಿ ಆಹಾರ ಉತ್ಪಾದನೆ ಸಾಧಿಸಲಾಗಿದೆ. ಕೈಗಾರಿಕಾ ಕ್ಷೇತ್ರದಲ್ಲಿ ಹೆಚ್ಚಿನ ಪ್ರಗತಿ ಸಾಧಿಸಲಾಗಿದೆ. ಸಾಮಾಜಿಕ ಸಮಾನತೆ, ಭಾತೃತ್ವ, ಲಿಂಗ ಸಮಾನತೆಗೆ ಆದ್ಯತೆ ನೀಡಲಾಗಿದೆ. ದೇಶವು ಇಂದು ಶೇ.74 ರಷ್ಟು ಸಾಕ್ಷರತೆ ಸಾಧಿಸಿ ಅಭಿವೃದ್ಧಿಗೆ ಪೂರಕವಾಗುವಂತೆ ಪ್ರಜೆಗಳನ್ನು ಶಿಕ್ಷಿತರನ್ನಾಗಿ ಮಾಡಲಾಗುತ್ತಿದೆ ಎಂದವರು ತಿಳಿಸಿದರು.
ದೇಶ ಸ್ವಾತಂತ್ರ್ಯ ಗಳಿಸಲು ಮಹಾತ್ಮಗಾಂಧೀಜಿಯವರ ನೇತೃತ್ವದಲ್ಲಿ ನಡೆದಂತಹ ಅಸಹಕಾರ ಚಳವಳಿ, ಉಪ್ಪಿನ ಸತ್ಯಾಗ್ರಹ, ಬ್ರಿಟೀಷರೇ ಭಾರತ ಬಿಟ್ಟು ತೊಲಗಿ ಎಂಬಂತಹ ಚಳವಳಿಗಳು ದೇಶದಾದ್ಯಂತ ನಡೆದವು. ಗಾಂಧೀಜಿಯವರು ದೇಶ ಬಾಂಧವರಿಗೆ ಮಾಡು ಇಲ್ಲವೆ ಮಡಿ ಎಂದು ಕರೆ ನೀಡಿ ಜನರನ್ನು ಹುರಿದುಂಬಿಸಿದರು.
ಸ್ವಾತಂತ್ರ್ಯ ಚಳವಳಿಯಲ್ಲಿ ಭಾಗವಹಿಸಿದ್ದ ಮೋತಿಲಾಲ್ ನೆಹರೂ, ವಿಜಯಲಕ್ಷ್ಮೀ ಪಂಡಿತ್, ಸರ್ದಾರ್ ವಲ್ಲಭಬಾಯಿ ಪಟೇಲ್, ರಾಜಗೋಪಾಲಚಾರಿ, ಜವಹರಲಾಲ್ ನೆಹರೂ, ಅಬ್ದುಲ್ ಕಲಾಂ, ಆಜಾದ್, ಕಸ್ತೂರ್ ಬಾ ಗಾಂಧಿ, ರಾಜೇಂದ್ರ ಪ್ರಸಾದ್ ಮುಂತಾದವರು ಸ್ಮರಣೀಯರಾಗಿದ್ದಾರೆ ಎಂದರು.
ನಮ್ಮ ಬೆಂಗಳೂರು ಸಿಲಿಕಾನ್ ಸಿಟಿ ಎಂಬ ಖ್ಯಾತಿ ಪಡೆದಿರುವುದು ಕರ್ನಾಟಕದ ಹೆಗ್ಗಳಿಕೆಯಾಗಿದೆ. ಇಂದು ಅಖಂಡ ಕರ್ನಾಟಕವು ಅಭಿವೃದ್ಧಿ ಪಥದಲ್ಲಿ ಸಾಗಿದೆ. ರಾಜ್ಯದಲ್ಲಿ ನಿರ್ಮಾಣಗೊಂಡಿರುವ ನೀರಾವರಿ ಯೋಜನೆಗಳು ಕೃಷಿ ಕ್ಷೇತ್ರದ ಸಾಧನೆಗೆ ಬೆನ್ನೆಲುಬಾಗಿದೆ.
ಬಡವರ ಪರವಾದ ಅನ್ನಭಾಗ್ಯ ಯೋಜನೆ, ಅಕ್ಷರ ದಾಸೋಹ, ಕ್ಷೀರಭಾಗ್ಯ, ವಿದ್ಯಾಸಿರಿ ಮೊದಲಾದ ಯೋಜನೆಗಳ ಮೂಲಕ ರಾಜ್ಯವನ್ನು ಪ್ರಗತಿಯತ್ತ ಕೊಂಡೊಯ್ಯಲಾಗುತ್ತಿದೆ. ಲಿಂಗ ಸಮಾನತೆಯ ತತ್ವದಡಿಯಲ್ಲಿ ಮಹಿಳೆಯರಿಗೆ ವಿಶೇಷ ಅವಕಾಶ ಕಲ್ಪಿಸುವ ಮೂಲಕ ಹಾಗೂ ಸಮಸ್ತ ಜನರ ಅಭಿವೃದ್ಧಿಗಾಗಿ ಕಲ್ಯಾಣ ಯೋಜನೆಗಳನ್ನು ರೂಪಿಸುವ ಮೂಲಕ ಅಭಿವೃದ್ಧಿಯತ್ತ ದಾಪುಗಾಲು ಇಡಲಾಗುತ್ತಿದೆ ಎಂದರು.
ತುಮಕೂರು ವಿವಿಧತೆಯಲ್ಲಿ ಏಕತೆಯನ್ನು ಸಾಧಿಸುವ, ನಮ್ಮ ಸ್ವಾತಂತ್ರ್ಯ ಹೋರಾಟಗಾರರು ನೀಡಿರುವ ತತ್ವಗಳು, ಆದರ್ಶಗಳನುಸಾರ ಸಹಬಾಳ್ವೆಯಿಂದ ಅಭಿವೃದ್ಧಿ ಹೊಂದುತ್ತಿರುವ ಜಿಲ್ಲೆಯಾಗಿರುತ್ತದೆ. ಸರ್ಕಾರ, ಜಿಲ್ಲೆಯ ಎಲ್ಲಾ ಚುನಾಯಿತ ಜನಪ್ರತಿನಿಧಿಗಳು, ಅಧಿಕಾರಿಗಳು, ಮಾಧ್ಯಮದವರು ಹಾಗೂ ಸಾರ್ವಜನಿಕರ ಸಹಕಾರದೊಂದಿಗೆ ಜಿಲ್ಲೆಯನ್ನು ಇನ್ನೂ ಹೆಚ್ಚಿನ ಪ್ರಗತಿಯತ್ತ ಕೊಂಡೊಯ್ಯಲು ಬಯಸಿದ್ದು, ಅದರಂತೆ ಕಾರ್ಯೋನ್ಮುಖರಾಗೋಣ ಎಂದವರು ಆಶಿಸಿದರು.
ಮತ್ತೊಮ್ಮೆ ಸ್ವಾತಂತ್ರ್ಯ ಚಳವಳಿಯಲ್ಲಿ ಭಾಗವಹಿಸಿದ್ದ ಎಲ್ಲಾ ಸ್ವಾತಂತ್ರ್ಯ ಹೋರಾಟಗಾರರನ್ನು ಮತ್ತು ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರನ್ನು ಸ್ಮರಿಸುತ್ತಾ ನಮ್ಮ ಮುಂದಿನ ಪೀಳಿಗೆಗೆ ಹುತಾತ್ಮರುಗಳ ತತ್ವಗಳು, ಆದರ್ಶಗಳನ್ನು ಅಳವಡಿಸಿಕೊಂಡು ಶಾಂತಿ, ಸಹಬಾಳ್ವೆ, ಸೌಹಾರ್ದಯುತ ಜೀವನ ಮತ್ತು ಅಭಿವೃದ್ಧಿಗೆ ಮಾರ್ಗದರ್ಶನ ನೀಡುತ್ತಾ ಶ್ರಮಿಸೋಣ ಎಂದರು.
ಮಳೆಯ ಅವಾಂತರ : ಕವಾಯತು ರದ್ದು:
ಮಂಗಳವಾರ ರಾತ್ರಿ ಸುರಿದ ಮಳೆಯಿಂದ ಕ್ರೀಡಾಂಗಣದೊಳಗೆ ನೀರು ತುಂಬಿಕೊಂಡಿತ್ತು. ಬುಧವಾರ ಬೆಳಗ್ಗೆಯಿಂದಲೂ ತುಂತುರು ಮಳೆ ಬರುತ್ತಿತ್ತು. ಇದರಿಂದಾಗಿ ಕ್ರೀಡಾಂಗಣ ಮಳೆಯಿಂದ ತೋಯ್ದುಕೊಂಡ ಕಾರಣ ಅಲ್ಲಿ ಕವಾಯತು ಮಾಡಲು ಸಾಧ್ಯವಾಗಲಿಲ್ಲ. ಶಾಲಾ ಮಕ್ಕಳಿಂದ ಆಯೋಜನೆಗೊಂಡಿದ್ದ ಸಾಂಸ್ಕೃತಿಕ ಕಾರ್ಯಕ್ರಮಗಳು ಕೂಡ ರದ್ದಾಗಿತ್ತು. ನಂತರ ಜಿಲ್ಲಾಧಿಕಾರಿಗಳ ಅನುಮತಿಯೊಂದಿಗೆ ಮಕ್ಕಳಿಂದ ಎರಡು ನೃತ್ಯ ಪ್ರದರ್ಶನಗಳು ನಡೆದವು.