“ಕೈ” ದುರ್ಬಲವಾಗಿದೆ ಎಂದವರಿಗೆ ತಕ್ಕ ಉತ್ತರ

 

ದಾವಣಗೆರೆ:

  ಕಾಂಗ್ರೆಸ್‍ಗೆ ಹಿನ್ನಡೆಯಾಗಿದೆ, ಅದು ದುರ್ಬಲಗೊಂಡಿದೆ ಎನ್ನುವವರಿಗೆ ಸ್ಥಳೀಯ ಸಂಸ್ಥೆಗಳ ಚುನಾವಣೆಯ ಫಲಿತಾಂಶ ತಕ್ಕ ಉತ್ತರ ನೀಡಲಿದೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.
ಸೋಮವಾರ ನಗರದ ಬಾಪೂಜಿ ಅತಿಥಿ ಗೃಹದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ 3 ಮಹಾನಗರ ಪಾಲಿಕೆ ಸೇರಿದಂತೆ 108 ಸ್ಥಳೀಯ ಸಂಸ್ಥೆಗಳಿಗೆ ನಡೆಯುತ್ತಿರುವ ಚುನಾವಣೆಯಲ್ಲಿ ಅತೀ ಹೆಚ್ಚು ಸಂಸ್ಥೆಗಳ ಕೈವಶ ಆಗಲಿದೆ ಎಂಬ ನಿರೀಕ್ಷೆ ಇದ್ದು, ಈ ಚುನಾವಣೆಗಳ ಫಲಿತಾಂಶದಲ್ಲಿ ಕಾಂಗ್ರೆಸ್ ಸಿಂಹಪಾಲು ಪಡೆಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

   ವಿಧಾಸಭಾ ಚುನಾವಣೆಯಲ್ಲಿ ಕಾಂಗ್ರೆಸ್‍ಗೆ ನಿರೀಕ್ಷಿತ ಫಲಿತಾಂಶ ದೊರೆತಿಲ್ಲ. ಇದಕ್ಕೆ ಬೇರೆ, ಬೇರೆ ಕಾರಣಗಳಿವೆ. ಆದರೆ, ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಉತ್ತಮ ಫಲಿತಾಂಶ ಬರುವ ನಿರೀಕ್ಷೆ ಇದೆ. ಏಕೆಂದರೆ, ಸಿದ್ದರಾಮಯ್ಯ ಅವರ ನೇತೃತ್ವದ ಐದು ವರ್ಷಗಳ ಅವಧಿಯಲ್ಲಿ ಜನಪರ ಕಾರ್ಯಕ್ರಮಗಳ ಪ್ರಯೋಜನ ಜನತೆ ಪಡೆದಿರುವುದು, ಈ ಸಮ್ಮಿಶ್ರ ಸರ್ಕಾರದ ಭಾಗವಾಗಿರುವ ಕಾಂಗ್ರೆಸ್ ಹಿಂದಿನ ಯೋಜನೆಗಳನ್ನು ಮುಂದುವರೆಸಲಿದೆ ಎಂಬ ಭಾವನೆ ಹಾಗೂ ನಗರಗಳ ಅಭಿವೃದ್ಧಿಯ ದೃಷ್ಟಿಯಿಂದ ಈ ಚುನಾವಣೆಯಲ್ಲಿ ಜನತೆ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಲಿದ್ದಾರೆಂಬ ವಿಶ್ವಾಸ ಇದೆ ಎಂದು ಹೇಳಿದರು.

   ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ನಮ್ಮ ಪಕ್ಷದ ಕಾರ್ಯಕರ್ತರು ಅತ್ಯುತ್ಸಾಹದಿಂದ ಮತ ಯಾಚಿಸುತ್ತಿದ್ದಾರೆ. ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಂಡು ಬರಲೆಬೇಕೆಂಬ ಪಣವನ್ನು ಪಕ್ಷದ ಮುಖಂಡರು ತೊಟ್ಟಿದ್ದಾರೆ. ಪಕ್ಷದ ವರ್ಚಸ್ಸು ಸಹ ಚೆನಾಗಿದೆ. ಈ ಎಲ್ಲಾ ಕಾರಣಗಳಿಂದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಪ್ರಥಮ ಸ್ಥಾನದಲ್ಲಿ ಫಲಿತಾಂಶ ಪಡೆಯಲಿದೆ ಎಂದರು.
ಸ್ಥಳೀಯ ಸಂಸ್ಥೆಗಳಲ್ಲಿ ಪಕ್ಷಕ್ಕೆ ಉತ್ತಮ ಫಲಿತಾಂಶ ಬರುವುದರಿಂದ ನಮ್ಮ ಕಾರ್ಯಕರ್ತರ ಆತ್ಮವಿಶ್ವಾಸ ಇಮ್ಮಡಿಗೊಳ್ಳಲಿದೆ ಎಂದ ಅವರು, ಮುಂಬರುವ ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಲೋಕಸಭಾ ಕ್ಷೇತ್ರಗಳ ಮುಖಂಡರನ್ನು ಕರೆಸಿ, ಕ್ಷೇತ್ರವಾರು ಚರ್ಚೆ ನಡೆಸಲಾಗುತ್ತಿದೆ. ಅಲ್ಲದೆ, ಪಕ್ಷದ ಕಾರ್ಯಕರ್ತರನ್ನು ಅಣಿಗೊಳಿಸಲಾಗುತ್ತಿದ್ದು, ಬಿಜೆಪಿಯ ವಂಚನೆ, ಸುಳ್ಳು, ವೈಶಮ್ಯ, ಭ್ರಷ್ಟಾಚಾರವನ್ನು ಜನರಿಗೆ ಹೇಗೆ ಮುಟ್ಟಿಸಬೇಕೆಂಬುದರ ಬಗ್ಗೆ ತರಬೇತಿ ನೀಡಲಾಗುತ್ತಿದೆ ಎಂದು ಹೇಳಿದರು.

  ಸ್ವತಃ ಸಿದ್ದರಾಮಯ್ಯನವರೇ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರವನ್ನು ಬೀಳಿಸುತ್ತಾರೆಂಬುದು ಕೇವಲ ಊಹಾ-ಪೋಹಾ, ಎಐಸಿಸಿ ಅಧ್ಯಕ್ಷ ರಾಹುಲ್‍ಗಾಂಧಿ ಹಾಗೂ ಸಿದ್ದರಾಮಯ್ಯನವರ ಮಾರ್ಗದರ್ಶನದಲ್ಲೇ ಈ ಮೈತ್ರಿ ಸರ್ಕಾರ ರಚನೆಯಾಗಿದ್ದು, ಐದು ವರ್ಷಗಳ ಕಾಲ ಅಧಿಕಾರ ನಡೆಸಲು ಜೆಡಿಎಸ್‍ನವರಿಗೆ ಅಗ್ರಿಮೆಂಟ್ ಬರೆದು ಕೊಟ್ಟಿದ್ದೇವೆ. ಮುಖ್ಯಮಂತ್ರಿ ಬದಲಾವಣೆ ವಿಷಯ ಈಗ ಪ್ರಸ್ತುತವಲ್ಲ. ಮತ್ತೊಂದು ಚುನಾವಣೆಯ ನಂತರವೇ ಮುಖ್ಯಮಂತ್ರಿ ಬದಲಾಗಲಿದ್ದಾರೆ. ಈ ಸರ್ಕಾರಕ್ಕೆ ಕಾಂಗ್ರೆಸ್ ಪೂರ್ಣ ಬೆಂಬಲ ಕೊಟ್ಟಿದ್ದು, ಮುಖ್ಯಮಂತ್ರಿ ಕುಮಾರಸ್ವಾಮಿ ಜನಹಿತ ಕಾಯುವ ಕೆಲಸ ಮಾಡಬೇಕಷ್ಟೇ ಎಂದು ಹೇಳಿದರು.

  ಈ ಸಂದರ್ಭದಲ್ಲಿ ಹರಿಹರ ಶಾಸಕ ಎಸ್.ರಾಮಪ್ಪ, ಮಾಜಿ ಶಾಸಕರುಗಳಾದ ಡಿ.ಜಿ.ಶಾಂತನಗೌಡ, ಹೆಚ್.ಪಿ.ರಾಜೇಶ್, ಕೆಪಿಸಿಸಿ ಕಾರ್ಯದರ್ಶಿಗಳಾದ ಮಂಜುಳಾರಾಜ್, ಬಲ್ಕಿಶ್ ಭಾನು, ಜಯಸಿಂಹ, ಡಿ.ಬಸವರಾಜ್, ಸೂರಜ್ ಹೆಗಡೆ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್.ಬಿ.ಮಂಜಪ್ಪ, ಮುಖಂಡರುಗಳಾದ ಕೆಂಗೋ ಹನುಮಂತಪ್ಪ, ಸೈಯದ್ ಸೈಫುಲ್ಲಾ, ಪಿ.ರಾಜಕುಮಾರ್, ಅಯೂಬ್ ಪೈಲ್ವಾನ್, ಎ.ನಾಗರಾಜ, ಕೆ.ಎಸ್.ಬಸವಂತಪ್ಪ, ಬಿ.ಹೆಚ್.ವೀರಭದ್ರಪ್ಪ, ಓಬಳೇಶಪ್ಪ, ಸೈಯದ್ ಖಾಲೀದ್, ಆರೀಫ್ ಮತ್ತಿತರರು ಹಾಜರಿದ್ದರು.

Recent Articles

spot_img

Related Stories

Share via
Copy link
Powered by Social Snap