ಕೊಟ್ಟೂರೇಶ್ವರ ಸ್ವಾಮಿಯ ಪಲ್ಲಕ್ಕಿ ಮಹೋತ್ಸವವದೊಂದಿಗೆ ವೈಭವದ ದಸರಾ ತೆರೆ

ಕೊಟ್ಟೂರು :

       ಶ್ರದ್ದಾ ಭಕ್ತಿಗಳೊಂದಿಗೆ ಆಚರಣೆಗೊಂಡ ವಿಜಯದಶಮಿ ಹಬ್ಬ ಆರಾಧ್ಯ ದೈವ ಶ್ರೀ ಗುರುಕೊಟ್ಟೂರೇಶ್ವರ ಸ್ವಾಮಿಯ ಬೆಳ್ಳಿಯ ಪಲ್ಲಕ್ಕಿ ಮಹೋತ್ಸವವದೊಂದಿಗೆ ವೈಭವದಿಂದ ಶುಕ್ರವಾರ ಸಂಜೆ ಅಂತಿಮ ತೆರೆಕಂಡಿತು. ದಸರಾ ನಿಮಿತ್ಯ ಪಟ್ಟಣದಲ್ಲಿನ ಕೋಟೆ ಬಾಗದ ಊರಮ್ಮನ ದೇವಸ್ಥಾನ, ಕಾಳಮ್ಮದೇವಿ ದೇವಸ್ಥಾನ, ಬನಶಂಕರಿ, ಚೌಡೇಶ್ವರಿ ದೇವಸ್ಥಾನಗಳಲ್ಲಿ ವಿಶೇಷ ಪೂಜೆ, ಶ್ರೀರಾಮ ಕನ್ನಿಕಾಪರಮೇಶ್ವರಿ ದೇವಸ್ಥಾನದಲ್ಲಿ ದಿನಂಪ್ರತಿ ವಿವಿಧ ಬಗೆಯ ಅಲಂಕಾರ ಮತ್ತು ಸಾಂಸ್ಕøತಿಕ ಕಾರ್ಯಕ್ರಮಗಳು ನಿರಂತರ ಸಾಗಿದ್ದವು.

       ಕೊನೆಯ ದಿನವಾದ ಶುಕ್ರವಾರದಂದು ದಸರಾದ ಅಂಗವಾಗಿ ಶ್ರೀ ಗುರುಕೊಟ್ಟೂರೇಶ್ವರ ಸ್ವಾಮಿಯ ಬೆಳ್ಳಿ ಪಲ್ಲಕ್ಕಿಯ ವೈಭವದ ಪಲ್ಲಕ್ಕಿ ಮಹೋತ್ಸವ ವಿಜೃಂಭಣೆಯಿಂದ ಸಾಗಿತು. ಅಕ್ಬರ್ ಬಾದುಷಹ ನೀಡಿದ್ದ ಖಡ್ಗವನ್ನು ಪಲ್ಲಕ್ಕಿಯಲ್ಲಿ ಇರಿಸಲಾಗಿತ್ತು. ಕ್ರಿಯಾಮೂರ್ತಿಗಳಾದ ಆರ್.ಎಂ.ಪ್ರಕಾಶ್ ಸ್ವಾಮಿ ಕೊಟ್ಟೂರು ದೇವರು ನೇತೃತ್ವದಲ್ಲಿ ಪಲ್ಲಕ್ಕಿ ಉತ್ಸವ ಹಿರೇಮಠದಿಂದ ಶುಕ್ರವಾರ ಸಂಜೆ 4.30ಕ್ಕೆ ಆರಂಭಗೊಂಡಿತು.

       ಈ ಮಹೊತ್ಸವ ತೇರು ಬಜಾರ್ ಮೂಲಕ ಸಾಗಿ ಹ್ಯಾಳ್ಯಾ ರಸ್ತೆಯಲ್ಲಿನ ಬನ್ನಿಕಟ್ಟೆಯವರೆಗೂ ನಡೆಯಿತು. ಮಹೋತ್ಸವವದುದ್ದಕ್ಕೂ ಸಮಳ, ನಂದಿಕೋಲು ಮತ್ತಿತರ ವಾದ್ಯಗಳ ನೀನಾದ ಅದ್ದೂರಿಯ ಈ ಮೆರವಣಿಗೆಗೆ ಮತ್ತಷ್ಟು ಮೆರಗು ನೀಡಿತು. ಬನ್ನಿ ಕಟ್ಟೆಗೆ ಸಂಜೆ 5.30 ರ ಸುಮಾರಿನಲ್ಲಿ ಧಾರ್ಮಿಕ ವಿಧಿ ವಿಧಾನದೊಂದಿಗೆ ಆಗಮಿಸುತ್ತಿದ್ದಂತೆ ನೆರೆದಿದ್ದ ಭಕ್ತ ಸಮೂಹ ಶ್ರೀ ಸ್ವಾಮಿಗೆ ಜೈಕಾರಗಳನ್ನು ಹಾಕಿ ನಮಿಸಿದರು. ಕೊಟ್ಟೂರು ದೈವಸ್ತರ ಪರವಾಗಿ ಸಂಪ್ರದಾಯದಂತೆ ಬನ್ನಿ ಮಹಾಕಾಳಿ ದೇವತೆಗೆ ಕುಂಕುಮ, ಅಕ್ಷತೆ, ಪುಷ್ಪ, ಫಲತಾಂಬುಲಗಳೊಂದಿಗೆ ದೇವಸ್ಥಾನದ ಬಳಗ ಪೂಜೆ ನೆರವೇರಿಸಿದರು. ಈ ಸಂದರ್ಭದಲ್ಲಿ ಬನ್ನಿಮಹಾಕಾಳಿಗೆ ಒಕ್ಕಣಿಯ ಪತ್ರ ಬರೆದು ಪಟ್ಟಣದ ಜನತೆಯ ಕಾಣಿಕೆಯನ್ನು ಸ್ವೀಕರಿಸಿ ಸರ್ವರಿಗೂ ಒಳಿತು ಮಾಡುವಂತೆ ಕೋರಿ ಬರೆದ ಪತ್ರವನ್ನು ಶ್ಯಾನುಭೋಗರು ಈ ಸಂದರ್ಭದಲ್ಲಿ ಓದಿ ಮರಕ್ಕೆ ಕಟ್ಟಿದರು. ಈ ಪ್ರಕ್ರಿಯೆ ಮುಗಿಯುತ್ತಿದ್ದಂತೆ ಬನ್ನಿ ವಿತರಿಸುವ ಧಾರ್ಮಿಕ ಕಾರ್ಯಕ್ರಮ ಆರಂಭಗೊಂಡಿತು. 

      ಮಹೋತ್ಸವದಲ್ಲಿ ಸಾವಿರಾರು ಭಕ್ತರು ಪಾಲ್ಗೊಂಡು ಶ್ರೀ ಸ್ವಾಮಿಯ ಪಲ್ಲಕ್ಕಿಯಿಂದ ಆರ್ಶಿವಾದ ರೂಪದ ಬನ್ನಿ ಪತ್ರಿಯನ್ನು ಮಠದ ಧರ್ಮಕರ್ತ ಬಳಗದವರಿಂದ ಪಡೆದುಕೊಳ್ಳಲು ಮುಂದಾಗುತ್ತಿದ್ದಂತೆ ಭಾರಿ ಪ್ರಮಾಣದ ನೂಕುನುಗ್ಗಲು ಉಂಟಾಯಿತು. ಈ ಪ್ರಮಾದದ ನೂಕುನುಗ್ಗಲು ಮುಕ್ಕಾಲುಗಂಟೆಯವರೆಗೂ ನಡೆಯಿತು. ಪುರುಷ ಮತ್ತು ಮಹಿಳೆಯರು ನೂಕುನುಗ್ಗಲಿನಲ್ಲಿ ಬನ್ನಿ ಪಡೆದುಕೊಂಡರು. ಪೋಲಿಸರು ಪರಿಸ್ಥಿತಿಯನ್ನು ನಿಯಂತ್ರಿಸಲು ನಿರಂತರ ಸಾಹಸಪಟ್ಟರು.

       ಪಲ್ಲಕ್ಕಿ ಮಹೋತ್ಸವ ರಾತ್ರಿ 7.30 ರ ಸುಮಾರಿಗೆ ಹಿರೇಮಠಕ್ಕೆ ಬಂದು ತಲುಪಿತು. ಭಕ್ತರು ದೇವಸ್ಥಾನಕ್ಕೆ ತೆರಳಿ ಆರ್ಶಿವಾದ ಪಡೆದುಕೊಂಡರು ನಂತರ ಗುರುಹಿರಿಯರಿಗೆ ಬನ್ನಿ ವಿತರಿಸಿ ನಮಸ್ಕರಿಸಿ ಆರ್ಶಿವಾದ ಪಡೆದುಕೊಳ್ಳುವ ಪ್ರಕ್ರಿಯೆ ರಾತ್ರಿ 9.30ರವರೆಗೆ ನಡೆಯಿತು. ಈ ಬಾರಿಯ ದಸರಾ ಉತ್ಸವಕ್ಕೆ ಕೊಟ್ಟೂರಿನಲ್ಲಿ ಅಧಿಕ ಸಂಖ್ಯೆಯ ಜನತೆ ಜಮಾವಣೆಗೊಂಡಿದ್ದು ಗಮನಾರ್ಹವಾಗಿತ್ತು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link
Powered by Social Snap