ತುಮಕೂರು:
ಕುಂಭದ್ರೋಣ ಮಳೆಯಿಂದ ಹಾನಿಗೀಡಾಗಿರುವ ಕೊಡಗು ಜಿಲ್ಲೆಯ ಸಂತ್ರಸ್ಥರಿಗೆ ಜಿಲ್ಲಾ ಕಂದಾಯ ಇಲಾಖೆ ನೌಕರರು(ಗ್ರಾಮ ಸಹಾಯಕರು)ಒಂದು ದಿನ ವೇತನ ನೀಡುವುದಾಗಿ ಜಿಲ್ಲಾಧಿಕಾರಿಗಳಿಗೆ ಸೋಮವಾರ ಮನವಿ ಪತ್ರ ಸಲ್ಲಿಸಿದ್ದಾರೆ. ತುಮಕೂರು ಜಿಲ್ಲಾ ಗ್ರಾಮಲೆಕ್ಕಾಧಿಕಾರಿಗಳ ಸಂಘದ ಅಧ್ಯಕ್ಷ ಮುರುಳೀಧರ ಕೆ.ಆರ್., ಶಿರಸ್ತೆದಾರ್ ಎನ್.ನರಸಿಂಹರಾಜು, ಕಂದಾಯ ನಿರೀಕ್ಷಕರಾದ ಸಿದ್ದಲಿಂಗಸ್ವಾಮಿ, ಸಂಘದ ಪದಾಧಿಕಾರಿಗಳಾದ ಮಂಜುನಾಥ್,ಶಿವಾನಂದರೆಡ್ಡಿ ಹಾಗೂ ಇತರರು ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿ, ಗ್ರಾಮಲೆಕ್ಕಿಗರನ್ನು ಹೊರತು ಪಡಿಸಿ,ಉಳಿದ ಎಲ್ಲಾ ಕಂದಾಯ ಇಲಾಖೆ ನೌಕರರ ಒಂದು ದಿನದ ವೇತನವನ್ನು(ಅಂದಾಜು 6-7 ಲಕ್ಷ ರೂ)ಕಟಾವು ಮಾಡಿ,ಕೊಡಗು ನೆರೆ ಪರಿಹಾರ ನಿಧಿಗೆ ತಲುಪಿಸುವಂತೆ ಒಪ್ಪಿಗೆ ಸೂಚಿಸಿದ ಪತ್ರವನ್ನು ಸಲ್ಲಿಸಿದರು. ಅಲ್ಲದೆ ಒಂದು ವೇಳೆ ನೆರೆಯಿಂದ ಭೂಮಿ, ಮನೆ ಕಳೆದುಕೊಂಡಿರುವ ಸಂತ್ರಸ್ಥರಿಗೆ ಸರ್ವೆ ಕಾರ್ಯ ಹಾಗೂ ಪರಿಹಾರ ನಿರ್ಧರಣೆಗೆ ಅಗತ್ಯವಾದ ದಾಖಲೆ ಸಂಗ್ರಹಿಸುವ ಸಂಬಂಧ ಕೆಲ ಕಂದಾಯ ಇಲಾಖೆ ನೌಕರರು ಕೊಡಗಿನಲ್ಲಿ ಕರ್ತವ್ಯ ನಿರ್ವಹಿಸಲು ಸಿದ್ದರಿದ್ದು,ಅಗತ್ಯವಿದ್ದಲ್ಲಿ ನಿಯೋಜಿಸುವಂತೆ ಕೆಲ ಸಿಬ್ಬಂದಿ ಜಿಲ್ಲಾಧಿಕಾರಿಗಳಲ್ಲಿ ಮನವಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ.