ಮಡಿಕೇರಿ:
ಕೊಡಗು ಜಿಲ್ಲೆಯಲ್ಲಿ ಇತ್ತೀಚೆಗೆ ಸುರಿದ ಭಾರಿ ಮಳೆಯಿಂದಾಗಿ ವಿದ್ಯುತ್ ಸಂಪರ್ಕ ವ್ಯವಸ್ಥೆ ತೀವ್ರ ಹಾನಿಗೊಳಗಾಗಿದ್ದು, ಸೆಸ್ಕ್ ವತಿಯಿಂದ ಕೈಗೊಂಡ ತ್ವರಿತ ಗತಿಯ ಕಾರ್ಯಾಚರಣೆಯಿಂದ ಹಾಗೂ ಮಳೆ ಪ್ರಮಾಣ ಇಳಿಮುಖವಾಗಿ ಪ್ರಕೃತಿ ಸಹಕರಿಸಿದ ಪರಿಣಾಮ ಇದೀಗ ಜಿಲ್ಲೆಯಲ್ಲಿ ಶೇ. 90 ರಷ್ಟು ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆ ವ್ಯವಸ್ಥೆಯನ್ನು ಪುನರ್ ಸ್ಥಾಪಿಸಲಾಗಿದೆ ಎಂದು ಸೆಸ್ಕ್ನ ಕಾರ್ಯಪಾಲಕ ಅಭಿಯಂತರ ಸೋಮಶೇಖರ್ ಅವರು ಹೇಳಿದರು.
ಕೊಡಗು ಜಿಲ್ಲೆಯಲ್ಲಿ ವಿದ್ಯುತ್ ಪೂರೈಕೆ ವ್ಯವಸ್ಥೆ ಸ್ಮಧಾರಣೆ ಕುರಿತು ಮಾಹಿತಿ ನೀಡಿದ ಅವರು, ಜಿಲ್ಲೆಯಲ್ಲಿ ಸತತವಾಗಿ ಸುರಿದ ಭಾರಿ ಮಳೆಯಿಂದಾಗಿ ವಿದ್ಯುತ್ ಸಂಪರ್ಕ ವ್ಯವಸ್ಥೆಗೆ ತೀವ್ರ ಹಾನಿ ಉಂಟಾಗಿತ್ತು. ಆದರೆ ಸೆಸ್ಕ್ ಕೈಗೊಂಡ ತ್ವರಿತ ಕಾರ್ಯಾಚರಣೆಯಿಂದಾಗಿ ಜಿಲ್ಲೆಯಲ್ಲಿ ಸದ್ಯ ಶೇ. 90 ರಷ್ಟು ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆ ಪ್ರಾರಂಭವಾಗಿದೆ. ಜಿಲ್ಲೆಯಲ್ಲಿ ಸದ್ಯ ಮಳೆಯ ಪ್ರಮಾಣ ಕಡಿಮೆಯಾಗುತ್ತಿದ್ದು, ಸೆಸ್ಕ್ನ ಕಾರ್ಯಾಚರಣೆಗೆ ಪ್ರಕೃತಿಯೂ ಸಹಕಾರ ನೀಡಿದೆ ಎಂದರು.
ಅತಿವೃಷ್ಟಿಯಿಂದಾಗಿ ವಿದ್ಯುತ್ ಜಾಲಕ್ಕೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿ ಸುಮಾರು 5 ಕೋಟಿ ರೂ. ಗಳಷ್ಟು ಹಾನಿಯಾಗಿರುವುದಾಗಿ ಅಂದಾಜಿಸಲಾಗಿದೆ. ಗ್ರಾಮಗಳಿಗೆ ವಾಹನ ತೆರಳಲು ದಾರಿ ಸೂಕ್ತವಾಗಿರದ ಕಾರಣದಿಂದಾಗಿ ಈ ಗ್ರಾಮಗಳಲ್ಲಿ ವಿದ್ಯುತ್ ಪೂರೈಕೆ ವ್ಯವಸ್ಥೆ ದುರಸ್ತಿಪಡಿಸಲು ಕಷ್ಟಕರವಾಗಿದೆ. ಜಿಲ್ಲೆಯಲ್ಲಿ ಅತಿವೃಷ್ಟಿಯಿಂದಾಗಿ ಸುಮಾರು 3500 ವಿದ್ಯುತ್ ಕಂಬಗಳು, 300 ವಿದ್ಯುತ್ ಪರಿವರ್ತಕಗಳು, ಸುಮಾರು 35 ರಿಂದ 40 ಕಿ.ಮೀ. ನಷ್ಟು ವೈರ್ ಲೈನ್ ಹಾನಿಗೀಡಾಗಿದೆ.
ದಾರಿ ಇಲ್ಲದ ಕಡೆಗಳಲ್ಲಿ ವಿದ್ಯುತ್ ಸಮಸ್ಯೆ ನೀಗಿಸಲು ಸಾಧ್ಯವಾಗುತ್ತಿಲ್ಲ. ಆದಾಗ್ಯೂ ಸೆಸ್ಕ್ ನ ಸಿಬ್ಬಂದಿ ಮಾತ್ರವಲ್ಲದೆ ಹೆಚ್ಚುವರಿಯಾಗಿ ಸುಮಾರು 250 ಸಿಬ್ಬಂದಿಯನ್ನು ಬೇರೆ ಜಿಲ್ಲೆಗಳಿಂದ ಹಾಗೂ ಗುತ್ತಿಗೆ ಆಧಾರದಲ್ಲಿ ಪಡೆದು, ದುರಸ್ತಿ ಕಾರ್ಯವನ್ನು ತ್ವರಿತವಾಗಿ ಕೈಗೊಳ್ಳಲಾಗುತ್ತಿದೆ.
ಜಿಲ್ಲೆಯಲ್ಲಿ ಸದ್ಯ ಮಳೆ ಕಡಿಮೆಯಾಗುತ್ತಿದ್ದು, ಜಿಲ್ಲೆಯಲ್ಲಿ ವಿದ್ಯುತ್ ಪೂರೈಕೆ ವ್ಯವಸ್ಥೆಯನ್ನು ಪುನರ್ ಸ್ಥಾಪಿಸುವ ನಿಟ್ಟಿನಲ್ಲಿ ಸೆಸ್ಕ್ ಎಲ್ಲ ರೀತಿಯ ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತಿದೆ. ಈ ನಿಟ್ಟಿನಲ್ಲಿ ಸಾರ್ವಜನಿಕರ ಸಹಕಾರವೂ ಅಗತ್ಯವಾಗಿದೆ ಎಂದು ಸೆಸ್ಕ್ನ ಕಾರ್ಯಪಾಲಕ ಅಭಿಯಂತರ ಸೋಮಶೇಖರ್ ತಿಳಿಸಿದರು.
