ಕೊರಟಗೆರೆ
ಸ್ಥಳೀಯ ಪಟ್ಟಣ ಪಂಚಾಯಿತಿ ಚುನಾವಣೆಯ 15 ವಾರ್ಡ್ಗಳಲ್ಲಿನ ಒಟ್ಟು 12598 ಜನ ಮತದಾರರ ಪೈಕಿ 10256 ಜನ ಮತದಾರರು ತಮ್ಮ ಹಕ್ಕು ಚಲಾಯಿಸುವ ಮೂಲಕ ಒಟ್ಟು ಶೇ.81.41 ರಷ್ಟು ಮತಚಲಾವಣೆಗೊಳ್ಳುವುದರ ಮೂಲಕ ಶಾಂತಿಯುತವಾಗಿ ಮತದಾನ ನಡೆದಿದೆ.
ಶುಕ್ರವಾರ ಮುಂಜಾನೆ 7 ಗಂಟೆಯಿಂದ ಪ್ರಾರಂಭವಾದ ಮತದಾನ ಸಂಜೆ 5ಗಂಟೆವರೆಗೆ ಪೊಲೀಸರ ಸರ್ಪಗಾವಲಿನ ನಡುವೆ ವಿಶೇಷ ಭದ್ರತೆಯೊಂದಿಗೆ ಶಾಂತಿಯುತವಾಗಿ ಪೂರ್ಣಗೊಂಡಿದೆ. ಮಧ್ಯಾಹ್ನ ಊಟದ ಸಮಯದಲ್ಲಿ ಸ್ವಲ್ಪ ಮತದಾನ ಕುಂಠಿತವಾದರೂ ಸಹ ಸಂಜೆ ಮತದಾನ ಕೊನೆಗೊಳ್ಳುವ ಒಂದು ಗಂಟೆ ಮುಂಚಿತವಾಗಿ ಮತ್ತೆ ಮತದಾನ ಬಿರುಸು ಪಡೆಯಿತು.
ಪಟ್ಟಣ ಪಂಚಾಯಿತಿಯ 1, 7, 8, 10, 11, 14 ಮತ್ತು 15ನೇ ವಾರ್ಡಿನ ಮತಗಟ್ಟೆ ಮುಂಭಾಗ ಅಭ್ಯರ್ಥಿಗಳ ಬೆಂಬಲಿಗರಿಂದ ಚುನಾವಣೆ ಪ್ರಚಾರ ಸೇರಿದಂತೆ ಕುಡಿಯುವ ನೀರು ಮತ್ತು ಕಾಫಿ, ಟೀ ನೀಡುವ ವಿಚಾರದಲ್ಲಿ ಸ್ವಲ್ಪಗೊಂದಲ ಸೃಷ್ಟಿಯಾದರೂ ಸಹ ಪೊಲೀಸರ ಮಧ್ಯಪ್ರವೇಶದಿಂದ ಸಮಸ್ಯೆ ಬಗೆಹರಿದು ಮತದಾನ ಶಾಂತಿಯುತವಾಗಿ ನಡೆಯಿತು. ಮತಗಟ್ಟೆ ಮುಂಭಾಗ ನಿಗದಿಪಡಿಸಿದ್ದ ಜಾಗದಲ್ಲಿ ಅಭ್ಯರ್ಥಿಗಳು ಸೇರಿದಂತೆ ಬೆಂಬಲಿಗರು ಮತದಾರರಿಗೆ ಕೈ ಮುಗಿದು ಮತಯಾಚನೆ ಮಾಡಿದರು.
ವೃದ್ದರು ತಮ್ಮ ಕುಟುಂಬದ ಸದಸ್ಯರ ಸಹಾಯದಿಂದ ಮತಗಟ್ಟಿ ಬಳಿ ಬಂದಂತಹ ಮತದಾರರನ್ನು ಆಯಾ ವಾರ್ಡಿನ ಅಭ್ಯರ್ಥಿಗಳು ಮತ್ತು ಬೆಂಬಲಿಗರು ಸಹಾಯ ಮಾಡಿ ಕೈ ಹಿಡಿದು ಮತಗಟ್ಟೆ ಕೇಂದ್ರದ ಬಳಿ ಬಿಡುತ್ತಿರುವ ಚಿತ್ರಣ ಸಾಮಾನ್ಯವಾಗಿತ್ತು. ಇನ್ನೂ ಮನೆಯಲ್ಲಿದ್ದ ಕೆಲವರನ್ನು ತಮ್ಮ ದ್ವಿಚಕ್ರ ಮತ್ತು ಆಟೋ ರಿಕ್ಷಾಗಳಲ್ಲಿ ಮನೆ ಬಳಿಗೆ ಹೋಗಿ ಕರೆತಂದು ಮತ ಹಾಕಿಸುತ್ತಿದ್ದುದು ಕಂಡುಬಂತು.
ಬೆಂಗಳೂರು ಮತ್ತು ತುಮಕೂರು ಸೇರಿದಂತೆ ದೂರದ ಊರುಗಳಿಂದ ಬರುತ್ತಿದ್ದ ಮತದಾರರನ್ನು ಪದೇ ಪದೇ ದೂರವಾಣಿ ಮೂಲಕ ಕರೆ ಮಾಡಿ ಎಲ್ಲಿದ್ದೀರಾ, ಎಲ್ಲಿ ಬರುತ್ತಿದ್ದೀರಾ ಎಂದು ವಿಚಾರಿಸಿ ಊರುಗಳಿಂದ ಬಂದವರನ್ನು ವಿಶೇಷವಾಗಿ ಉಪಚರಿಸಿ ಮತಗಟ್ಟಿಗೆ ಕರೆದೊಯ್ಯುತ್ತಿದ್ದುದು ಸಾಮಾನ್ಯವಾಗಿದ್ದರೂ ವಿಶೇಷವಾಗಿತ್ತು.
ಪಪಂ ಚುನಾವಣೆ ಕಣದಲ್ಲಿದ್ದ ಅಭ್ಯರ್ಥಿಗಳು ಮತ್ತು ಅವರ ಆಪ್ತರು ತಮ್ಮ ವಿರೋಧಿಗಳ ಮೇಲೆ ಇಲ್ಲಸಲ್ಲದ ಆರೋಪಗಳ ಪಟ್ಟಿಯನ್ನೇ ಮಾಡಿಕೊಂಡು ಇಂತಹವರಿಗೆ ಮಾತ್ರ ಮತ ನೀಡಬೇಡಿ. ಇಂತಹವರಿಂದ ಅಭಿವೃದ್ದಿ ಸಾಧ್ಯವಿಲ್ಲ ಎಂದು ಆರೋಪದ ಜೊತೆ ಪ್ರತ್ಯಾರೋಪದ ಮಾತುಗಳಿಂದ ಮತದಾರರನ್ನು ಓಲೈಸಲು ನಾನಾ ರೀತಿಯ ಕಸರತ್ತು ಮಾಡಿದರು.
ಇನ್ನೂ ಅಭ್ಯರ್ಥಿಗಳು ಸೇರಿ ಅವರ ಆಪ್ತರು `ಯಪ್ಪಾ ಈ ಎಲೆಕ್ಷನ್ನು ಸಾಕು, ಜನರನ್ನ ಬಿಕ್ಷೆ ಬೇಡೋದು ಸಾಕು. ಈ ಟೈಂನಾಗೆ ಹುಲ್ಲುಕಡ್ಡಿನೂ ಹುಲಿ ಆಗುತ್ತಲ್ರೀ..!. ಒಂದು ವಾರ ಟಾರ್ಚರ್ ಆಗ್ಬಿಡ್ತು. ಅಬ್ಬಾ… ಮುಗಿತಪ್ಪ ಚುನಾವಣೆ ಎನ್ನುವ ಮೂಲಕ ಇನ್ನೂ ಮೂರು ದಿನ ಮುಗಿದು ಫಲಿತಾಂಶ ಬರುವ ತನಕ ನಮಗೆ ನಿದ್ದೆ ಬರುವುದೆ ಅನುಮಾನ ಎಂದು ನಿಟ್ಟುಸಿರು ಬಿಡುವ ಮೂಲಕ ತಮ್ಮ ತಮ್ಮ ಮನೆಗಳಿಗೆ ಹಿಂದಿರುಗಿದರು.
