ಕೊರಟಗೆರೆ ಪಟ್ಟಣ ಪಂಚಾಯ್ತಿ ಜೆಡಿಎಸ್ ಪಾಲು

ಕೊರಟಗೆರೆ
            ಬಹಳ ಕುತೂಹಲ ಕೆರಳಿಸಿದ್ದ ಕೊರಟಗೆರೆ ಪಟ್ಟಣ ಪಂಚಾಯ್ತಿ ಚುನಾವಣೆಯಲ್ಲಿ ಅಧಿಕಾರ ಜೆಡಿಎಸ್ ಪಾಲಾಗಿದ್ದು, 15 ವಾರ್ಡ್‍ಗಳ ಪೈಕಿ 8 ವಾರ್ಡ್‍ಗಳಲ್ಲಿ ಗೆಲವು ಸಾಧಿಸುವ ಮೂಲಕ ತನ್ನ ಸ್ವಂತ ಬಲದಲ್ಲಿ ಅಧಿಕಾರದ ಗದ್ದುಗೆ ಏರಿದ್ದು, ತನ್ನ ಚಾಣಾಕ್ಷ ರಾಜಕಾರಣದಿಂದ ಕಾಂಗ್ರೆಸ್ ಪಕ್ಷವನ್ನು ಮಣಿಸುವಲ್ಲಿ ಯಶ್ವಸಿಯಾಗಿದೆ.
            ಕೊರಟಗೆರೆ ಪಟ್ಟಣ ಪಂಚಾಯ್ತಿ ರಾಜ್ಯ ರಾಜಕಾರಣದಲ್ಲಿ ಕೇಂದ್ರ ಬಿಂದುವಾಗಿದ್ದು, ಉಪಮುಖ್ಯಮಂತ್ರಿ ಹಾಗೂ ಗೃಹಸಚಿವ  ಡಾ.ಜಿ.ಪರಮೇಶ್ವರರ ಕ್ಷೇತ್ರವಾದ ಕಾರಣ ಎಲ್ಲರ ಗಮನ ಕೊರಟಗೆರೆಯತ್ತ ಮೂಡಿರುವ ಸಂದರ್ಭದಲ್ಲಿ, ಅಧಿಕಾರ ಕಳೆದುಕೊಂಡಿರುವುದು ಕಾಂಗ್ರೆಸ್‍ಗೆ ಮುಜುಗರ ಉಂಟಾದಂತಾಗಿದೆ.
           ಕೊರಟಗೆರೆ ಪಟ್ಟಣ ಪಂಚಾಯ್ತಿ ವ್ಯಾಪ್ತಿಯಲ್ಲಿ 15 ವಾರ್ಡ್‍ಗಳಿದ್ದು, 8 ರಲ್ಲಿ ಜೆಡಿಎಸ್, 5ರಲ್ಲಿ ಕಾಂಗ್ರೆಸ್, 1 ಬಿಜೆಪಿ, 1 (ಕಾಂಗ್ರೆಸ್ ಬಂಡಾಯ) ಪಕ್ಷೇತರ ಅಭ್ಯರ್ಥಿ ಗೆಲುವು ಸಾಧಿಸುವ ಮೂಲಕ ಜೆಡಿಎಸ್ ಪಕ್ಷ ಸ್ವಂತ ಬಲದಲ್ಲಿ ಅಧಿಕಾರ ಗದ್ದುಗೆ ಏರಿದೆ. , ಈ ಬಾರಿ ಅಭಿವೃದ್ಧಿ ದೃಷ್ಟಿಯಿಂದ ಪರಮೇಶ್ವರ್‍ಗೆ ಬೆಂಬಲ ಸೂಚಿಸಲು ಕಾಂಗೆಸ್‍ಗೆ ಮತ ನೀಡಲಿದ್ದಾರೆ ಎಂಬ ನಂಬಿಕೆ ಹುಸಿಯಾಗಿದೆ. ಜಿದ್ದಾ ಜಿದ್ದಿನ ರಾಜಕಾರಣದಲ್ಲಿ ಮತದಾರ ಜೆಡಿಎಸ್ ಕೈಹಿಡಿದಿರುವುದು ಸೋಜಿಗ ಉಂಟು ಮಾಡಿದೆ.
            ಕಳೆದ 2013 ರ ಪಟ್ಟಣ ಪಂಚಾಯಿತಿ ಚುನಾವಣೆಯಲ್ಲಿ ಸಮಬಲ ಸಾಧಿಸಿದ್ದ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳು ಪಟ್ಟಣ ಪಂಚಾಯಿತಿ ಅಧಿಕಾರದ ಗದ್ದುಗೆ ಏರಲು ಬಾರಿ ಕಸರತ್ತು ನಡೆಸಿ ಕೊನೆಯಲ್ಲಿ ಕಾಂಗ್ರೆಸ್ ಪಕ್ಷವೇ ಆಡಳಿತ ನಡೆಸಿತ್ತು. ಆದರೆ ಈ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಭಾರಿ ಹಿನ್ನಡೆಯಾಗಿದೆ. ಮತ್ತೊಮ್ಮೆ ಅಧಿಕಾರಕ್ಕೆ ತರಲು ಪಕ್ಷದ ಮುಖಂಡರುಗಳು ಚಿಂತನೆ ನಡೆಸುತ್ತಿದ್ದಾರೆ. ಆದರೆ ಜೆಡಿಎಸ್ ಹೆಚ್ಚಿನ ಸ್ಥಾನಗಳನ್ನು ಪಡೆದು ನಾವೇ ಅಧಿಕಾರ ನಡೆಸುವುದು ಎಂಬ ಆಶಾಭಾವನೆಯಲ್ಲಿದ್ದು, ಮುಂದಿನ ದಿನಗಳಲ್ಲಿ ಯಾವ ರೀತಿ ಚಿತ್ರಣ ಬದಲಾಗುತ್ತದೆ ಎಂದು ಮತದಾರರು ಕಾದು ನೋಡುತ್ತ್ತಿದ್ದಾರೆ.
            ಪಟ್ಟಣದಲ್ಲಿ ಬಹುತೇಕ ಎಸ್‍ಸಿ, ಎಸ್‍ಟಿ, ಹಿಂದುಳಿದವರ್ಗಗಳು, ಅಲ್ಪಾಸಂಖ್ಯಾತರನ್ನು ಹೊಂದಿರುವ 15 ವಾರ್ಡ್‍ಗಳಲ್ಲಿ 6 ವಾರ್ಡ್‍ಗಳಲ್ಲಿ ಎಸ್.ಟಿ ಸಮುದಾಯದ ಅಭ್ಯರ್ಥಿಗಳು ಗೆಲುವು ಸಾಧಿಸಿದರೆ, 3 ಎಸ್.ಸಿ ಜನಾಂಗ ಅಭ್ಯರ್ಥಿಗಳು ಜಯಗಳಿಸಿದ್ದಾರೆ. ಹಿಂದುಳಿದ ಸಮುದಾಯದ 05 ಅಭ್ಯರ್ಥಿಗಳು ಜಯಸಾಧಿಸಿ, ಅಲ್ಪಾಸಂಖ್ಯಾತ ಸಮುದಾಯದಲ್ಲಿ ಒಬ್ಬರು ಗೆಲುವು ಸಾಧಿಸುವ ಮೂಲಕ ಕೊರಟಗೆರೆ ಪಟ್ಟಣವನ್ನು ಅಭಿವೃದ್ದಿ ಪಡಿಸಲು ಹವಣಿಸುತ್ತಿದ್ದಾರೆ.
            ಈ ಬಾರಿಯ ಚುನಾವಣೆಯಲ್ಲಿ ಯುವಕರು ಹೆಚ್ಚು ಗೆಲುವು ಸಾಧಿಸಿದ್ದು, ಹೊಸ ಭರವಸೆಯೊಂದಿಗೆ ಹುಮ್ಮಸ್ಸಿನಿಂದ ಪಟ್ಟಣ ಪಂಚಾಯ್ತಿಗೆ ದಾಪುಗಾಲು ಇಡಲು ಮುಂದಾಗಿದ್ದಾರೆ. ಸೊತ ಅಭ್ಯರ್ಥಿಗಳು ಸಹ ನಿರಾಶಿತರಾಗದೆ ಜನಸೇವೆಗೆ ಮುಂದಿನ ಬಾರಿ ಧಾವಿಸಲಿದ್ದೇವೆ ಎಂದು ಭಾವನಾತ್ಮಕವಾಗಿ ಹೊರನಡೆದಿದ್ದಾರೆ.

    ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link