ಗುಬ್ಬಿ
ಲಾಕ್‍ಡೌನ್ ಯಶಸ್ವಿ ಜತೆಗೆ ಕೋವಿಡ್ 19 ವೈರಸ್ ತಡೆಯುವಲ್ಲಿ ಪೊಲೀಸ್ ಇಲಾಖೆ ಮಹತ್ವದ ಪಾತ್ರ ವಹಿಸಿದೆ. ಸಾರ್ವಜನಿಕರನ್ನು ಮನೆಯಲ್ಲೇ ಉಳಿಯುವಂತೆ ಮಾಡುವುದು ಸಾಹಸದ ಕೆಲಸವಾದರೂ ವೈರಸ್ ಹರಡದಂತೆ ಸಾಮಾಜಿಕ ಅಂತರ ಕಾಪಾಡಲಾಗಿದೆ ಎಂದು ತಾಲ್ಲೂಕು ವೈದ್ಯಾಧಿಕಾರಿ ಡಾ.ಬಿಂದುಮಾಧವ ತಿಳಿಸಿದರು.
ಪಟ್ಟಣದ ಪೊಲೀಸ್‍ಠಾಣೆಯಲ್ಲಿ ಎಲ್ಲಾ ಸಿಬ್ಬಂದಿಯ ಆರೋಗ್ಯ ತಪಾಸಣೆ ನಡೆಸಿ ನಂತರ ಮಾತನಾಡಿದ ಅವರು, ಸಾರ್ವಜನಿಕರ ಸಂಪರ್ಕದಲ್ಲಿರುವ ಪೊಲೀಸ್ ಮತ್ತು ಆರೋಗ್ಯ ಇಲಾಖೆ ಸಿಬ್ಬಂದಿಗೆ ಮೊದಲು ಆರೋಗ್ಯ ತಪಾಸಣೆ ಮುಖ್ಯವಾಗಿದೆ. ನಂತರ ಸಾಮಾಜಿಕ ಅಂತರ ಕಾಯ್ದು ಜಾಗೃತಿ ಮೂಡಿಸುವ ಕೆಲಸ ಮಾಡಬೇಕಿದೆ. ಸೋಂಕಿತರ ಸಂಪರ್ಕಕ್ಕೆ ಮೊದಲು ಬರುವ ಈ ಎರಡು ಇಲಾಖೆ ಸಿಬ್ಬಂದಿಗೆ ಮುನ್ನೆಚ್ಚರಿಕೆ ಕ್ರಮ ಅಗತ್ಯವಿದೆ ಎಂದರು.
10 ವರ್ಷಕ್ಕಿಂತ ಒಳಪಟ್ಟ ಮಕ್ಕಳು ಹಾಗೂ 60 ವರ್ಷ ದಾಟಿದ ವೃದ್ದರಲ್ಲಿ ರೋಗನಿರೋಧಕ ಶಕ್ತಿ ಕುಂದಿರುತ್ತದೆ. ಇವರಲ್ಲಿ ಬಹುಬೇಗ ಕೋವಿಡ್ ವೈರಸ್ ಹರಡುತ್ತದೆ. ಜತೆಗೆ ಸಕ್ಕರೆ ಕಾಯಿಲೆ, ರಕ್ತದೊತ್ತಡ, ಶ್ವಾಸಕೋಶ ಕಾಯಿಲೆ, ಹೃದಯ ಸಂಬಂಧಿ ರೋಗಿಗಳಿಗೂ ಬಹುಬೇಗ ಹರಡುತ್ತದೆ. ಈ ನಿಟ್ಟಿನಲ್ಲಿ ಇಂತಹವರನ್ನು ಮನೆಯಲ್ಲಿಟ್ಟುಕೊಳ್ಳುವ ಕೆಲಸ ಸಮುದಾಯ ಮಾಡಬೇಕು. ಕೆಮ್ಮು, ನೆಗಡಿ, ಜ್ವರ, ಗಂಟಲುಬೇನೆ ಬಂದವರು ತಪಾಸಣೆಗೆ ಒಳಗಾಗಬೇಕು.
ಈ ಲಕ್ಷಣಗಳು ಪೊಲೀಸ್ ಸಿಬ್ಬಂದಿಯಲ್ಲಿ ಕಂಡು ಬಂದಲ್ಲಿ ಕೂಡಲೆ ಎಚ್ಚರವಹಿಸಿ ತಪಾಸಣೆ ಮಾಡಿಸಿಕೊಳ್ಳಬೇಕಿದೆ. ಈಗಾಗಲೇ ಪೊಲೀಸ್ ಸಿಬ್ಬಂದಿಗೆ ಕೊರೋನಾ ವೈರಸ್ ಸೋಂಕು ತಗುಲಿದ ನಿದರ್ಶನವಿದೆ ಎಂದರು.ಸಿಪಿಐ ಸಿ.ರಾಮಕೃಷ್ಣಯ್ಯ ಮಾತನಾಡಿ, ಸಾರ್ವಜನಿಕರನ್ನು ಬ್ಯಾರಿಕೇಡ್ ಹಾಕಿ ತಪಾಸಣೆ ಮಾಡುವ ವೇಳೆ ಸಲ್ಲದ ಕಾರಣಗಳೇ ಹೆಚ್ಚಾಗಿ ಕಂಡುಬರುತ್ತಿದೆ. ಈ ವೈರಸ್ ಹರಡುವಿಕೆ ಬಗ್ಗೆ ಜಾಗೃತಿ ಮೂಡಿಸಿಕೊಂಡು ಸಾರ್ವಜನಿಕರು ತಮ್ಮ ಕರ್ತವ್ಯ ಪಾಲಿಸಬೇಕಿದೆ. ಲಾಕ್‍ಡೌನ್ ಆದೇಶ ಜಾರಿ ಬಗ್ಗೆ ಅರಿವು ಇದ್ದೂ ವಿನಾಕಾರಣ ರಸ್ತೆಗಿಳಿಯುವುದು ಅಪರಾಧವಾಗಿದೆ. ಪೊಲೀಸರ ಕಣ್ತಪ್ಪಿಸಿ ಓಡಾಡುವುದೇ ದೊಡ್ಡ ಸಾಧನೆ ಎಂಬಂತೆ ಕೆಲ ಯುವಕರು ಬೈಕ್‍ಗಳಲ್ಲಿ ಓಡಾಡುತ್ತಾರೆ. ವೈರಸ್ ಹರಡುವಿಕೆ ಮಿತಿ ಮೀರಿದಲ್ಲಿ ಆರೋಗ್ಯ ಮತ್ತು ಪೊಲೀಸ್ ಇಲಾಖೆ ಕೈ ಮೀರುತ್ತದೆ. ಈ ಬಗ್ಗೆ ತಿಳಿವಳಿಕೆ ಬೆಳೆಸಿಕೊಂಡು ಸಹಕರಿಸಿ ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಎಲ್ಲಾ ಪೊಲೀಸ್ ಸಿಬ್ಬಂದಿಯ ಆರೋಗ್ಯ ತಪಾಸಣೆ ಮಾಡಲಾಯಿತು. ಸ್ಕ್ರೀನಿಂಗ್ ಮಾಡುವ ಜತೆ ಸ್ಯಾನಿಟೈಸ್ಹರ್ ಬಳಕೆ, ಸೋಪಿನಲ್ಲಿ ಕೈ ತೊಳೆಯುವ ವಿಧಾನ ಹಾಗೂ ಮಾಸ್ಕ್ ಬಳಕೆ ಬಗ್ಗೆ ಪ್ರಾತ್ಯಕ್ಷಿಕೆ ನಡೆಸಲಾಯಿತು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ







